Kannada NewsKarnataka News

ಸುಸಜ್ಜಿತ ಮಟೀರಿಯಲ್ ಟೆಸ್ಟಿಂಗ್ ಲ್ಯಾಬೋರೇಟರಿ ಲೋಕಾರ್ಪಣೆ

ಸುಸಜ್ಜಿತ ಮಟೀರಿಯಲ್ ಟೆಸ್ಟಿಂಗ್ ಲ್ಯಾಬೋರೇಟರಿ ಲೋಕಾರ್ಪಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಉತ್ತರ ಕರ್ನಾಟಕದಲ್ಲೇ ಅತ್ಯಂತ ಸುಸಜ್ಜಿತವಾದ ಮಟೀರಿಯಲ್ ಟೆಸ್ಟಿಂಗ್ ಲ್ಯಾಬೋರೇಟರಿ ಶುಕ್ರವಾರ ಸಂಜೆ ಲೋಕಾರ್ಪಣೆಗೊಂಡಿತು. ಇಲ್ಲಿಯ ಕ್ಯಾಟಕಾನ್ ಸಂಸ್ಥೆ ರಾಮತೀರ್ಥನಗರದಲ್ಲಿ ಈ ಲ್ಯಾಬೋರೇಟರಿ ಸ್ಥಾಪಿಸಿದೆ.

ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯ ಮುಖ್ಯ ಎಂಜಿನಿಯರ್ ಎಂ.ನಾರಾಯಣ ಲೆಪೋರೇಟರಿಯನ್ನು ಉದ್ಘಾಟಿಸಿದರು. ಬೆಳಗಾವಿ ಇಷ್ಟು ದೊಡ್ಡ ನಗರವಾಗಿದ್ದರೂ ಸುಸಜ್ಜಿತವಾದ ಲೆಬೋರೇಟರಿ ಇರಲಿಲ್ಲ. ಈ ಲ್ಯಾಬೋರೇಟರಿ ಮೂಲಕ ಈ ಭಾಗದ ದೊಡ್ಡ ಕೊರತೆಯೊಂದನ್ನು ನಿವಾರಿಸಿದಂತಾಗಿದೆ. ಆದಷ್ಟು ಶೀಘ್ರ ಇದು ಇನ್ನಷ್ಟು ಹೊಸ ತಂತ್ರಜ್ಞಾನದೊಂದಿಗೆ ಮೇಲ್ದರ್ಜೆಗೆ ಏರಲಿದೆ ಎನ್ನುವ ವಿಶ್ವಾಸವಿದೆ ಎಂದು ನಾರಾಯಣ ಹೇಳಿದರು.

ಈ ಲ್ಯಾಬೋರೇಟರಿಯಿಂದ ಸ್ಮಾರ್ಟ್ ಸಿಟಿ ಯೋಜನೆಗೂ ಅನುಕೂಲವಾಗಲಿದೆ. ಶೀಘ್ರದಲ್ಲೇ ಗುಣಮಟ್ಟ ಮತ್ತು ನೂತನ ತಂತ್ರಜ್ಞಾನದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವೊಂದನ್ನು ಆಯೋಜಿಸಲಾಗುವುದು ಎಂದು ಅವರು ಹೇಳಿದರು.

Home add -Advt

ಲೋಕೋಪಯೋಗಿ ಇಲಾಖೆಯ ಸುಪರಿಂಟೆಂಡೆಂಟ್ ಎಂಜಿನಿಯರ್ ಎಚ್. ಸುರೇಶ್ ಮೊಬೈಲ್ ಟೆಸ್ಟಿಂಗ್ ಲ್ಯಾಬೋರೇಟರಿ ಉದ್ಘಾಟಿಸಿ, ಯಾವುದೇ ಒತ್ತಡಕ್ಕೆ ಒಳಗಾಗದೆ ನಿಖರವಾಗಿ ಗುಣಮಟ್ಟ ಪರೀಕ್ಷಿಸಿ ಸರ್ಟಿಫಿಕೇಟ್ ಕೋಡಬೇಕಾದ ಇಂತಹ ಸಂಸ್ಥೆ ಅಗತ್ಯವಾಗಿತ್ತು ಎಂದರು.

ಹೊಸ ಕಚೇರಿ ಉದ್ಘಾಟಿಸಿದ ಕ್ಯಾಟಕಾನ್ ಸಂಸ್ಥೆಯ ಸ್ಥಾಪಕರಲ್ಲೊಬ್ಬರಾದ ವಿ.ಬಿ.ಜಾವೂರ್, ಈ ಭಾಗದ ಕೊರತೆ ನಿವಾರಿಸುವುದಕ್ಕಾಗಿ ಮತ್ತು ಇಲ್ಲಿನ ಯುವಕರಿಗೆ ಕೆಲಸ ಕೊಡುವುದಕ್ಕಾಗಿ ಈ ಸಂಸ್ಥೆಯನ್ನು ಹುಟ್ಟುಹಾಕಲಾಗಿದೆ ಎಂದರು.

ಪ್ರಸ್ತಾವಿಕವಾಗಿ ಮಾತನಾಡಿದ ಕ್ಯಾಟಕಾನ್ ಸಂಸ್ಥೆಯ ಕಾರ್ಯನಿರ್ವಾಹಕ ಪಾಲುದಾರ ಪಿ.ಎಂ.ಗಾಣಿಗೇರ, ನಮ್ಮ ನೆಲಕ್ಕೆ ಏನಾದರೂ ಸೇವೆ ಸಲ್ಲಿಸಬೇಕೆನ್ನುವ ಮಹತ್ವಾಕಾಂಕ್ಷೆಯಿಂದ, ಇಲ್ಲಿನ ಯುವ ಎಂಜಿನಿಚಯರ್ ಗಳು ಇಲ್ಲೇ ಕೆಲಸ ನಿರ್ವಹಿಸುವುದಕ್ಕೆ ಅವಕಾಶ ಮಾಡಿಕೊಡಬೇಕೆನ್ನುವ ಕಾರಣಕ್ಕೆ, ವ್ಯರ್ಥವಾಗುವ ಹಣ ಉಳಿಸುವ ಮೂಲಕ ಸಮಾಜ ಸೇವೆ ಮಾಡಬೇಕೆನ್ನುವ ಉದ್ದೇಶದಿಂದ ಕ್ಯಾಟಕಾನ್ ಸಂಸ್ಥೆಯನ್ನು ಹುಟ್ಟುಹಾಕಲಾಗಿದೆ ಎಂದರು.

ಕ್ಯಾಟಕಾನ್ ಸಂಸ್ಥೆಯ ಪಾಲುದಾರ ಬಿ.ಡಿ.ಜಾಧವ ಸ್ವಾಗತಿಸಿದರು. ಮ್ಯಾನೇಜರ್ ನಾರಾಯಣ ಬಾಗಲಕೋಟೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.(ಪ್ರಗತಿವಾಹಿನಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button