ಲಕ್ಷ್ಮಿ ಹೆಬ್ಬಾಳಕರ್ ವಿಚಾರಣೆ ಪೂರ್ಣ: ಬೆಳಗಾವಿಗೆ ಹೊರಟ ಶಾಸಕಿ
ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಮಾಜಿ ಸಚಿವ ಡಿ.ಕೆ.ಶಿವಕುಮಾರ ಅವರ ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ವಿಚಾರಣೆಯನ್ನು ಪೂರ್ಣಗೊಳಿಸಿದೆ.
ಗುರುವಾರ ಇಡಿ ಅಧಿಕಾರಿಗಳು ಕೋರ್ಟ್ ಕಲಾಪದಲ್ಲಿ ಬ್ಯುಸಿ ಇದ್ದಿದ್ದರಿಂದ ಅಪೂರ್ಣವಾಗಿದ್ದ ವಿಚಾರಣೆಯನ್ನು ಶುಕ್ರವಾರ ಕೈಗೆತ್ತಿಕೊಂಡಿತ್ತು. ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಇಡಿ ಕಚೇರಿಗೆ ಆಗಮಿಸಿದ ಹೆಬ್ಬಾಳಕರ್ ಅವರನ್ನು ಅಧಿಕಾರಿಗಳು ಸಂಜೆಯವರೆಗೂ ವಿಚಾರಣೆ ನಡೆಸಿದರು.
ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೂ ಸಮರ್ಪಕವಾಗಿ ಉತ್ತರ ನೀಡಿದ್ದೇನೆ. ಕೇಳಿದ ದಾಖಲೆಗಳನ್ನೂ ಒದಗಿಸಿದ್ದೇನೆ. ಇನ್ನು ಕೆಲವು ದಾಖಲೆಗಳು ತಕ್ಷಣ ಲಭ್ಯವಿರಲಿಲ್ಲವಾದ್ದರಿಂದ ಕಳುಹಿಸಿಕೊಡಲು ಹೇಳಿದ್ದಾರೆ. ಆದಷ್ಟು ಬೇಗ ಅವುಗಳನ್ನು ಕಳುಹಿಸಿಕೊಡುತ್ತೇನೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಜಾರಿನಿರ್ದೇಶನಾಲಯ ಅಗತ್ಯವಾದ ಎಲ್ಲ ಮಾಹಿತಿಗಳನ್ನೂ ನನ್ನಿಂದ ಪಡೆದುಕೊಂಡಿದೆ. ವಿಚಾರಣೆ ಪೂರ್ಣವಾಗಿದೆ. ನಾನು ನಾಳೆಯೇ ಬೆಳಗಾವಿಗೆ ಆಗಮಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ