ರಾಜಕಾರಣದಾಚೆಯೂ ಸ್ನೇಹಪರ ವ್ಯಕ್ತಿತ್ವ ಉಳಿಸಿಕೊಂಡಿರುವ ವಿಧಾನ ಪರಿಷತ್ತಿನ ಸದಸ್ಯ, ವಿಧಾನಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ, ಪ್ರತಿಷ್ಠಿತ ಕೆಎಲ್ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಅವರ 53ನೇ ಜನ್ಮದಿನದ ನಿಮಿತ್ತ ಈ ಲೇಖನ
ರಾಜಕೀಯ ಮತ್ತು ಸಂಸ್ಕೃತಿ –ಎರಡೂ ಪರಸ್ಪರ ವಿರುದ್ಧ ಪದಗಳು ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ಸುಸಂಸ್ಕೃತರು ರಾಜಕಾರಣದಲ್ಲಿರಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇಂದಿನದು. ತಮ್ಮ ತನವನ್ನು ಉಳಿಸಿಕೊಂಡು ರಾಜಕಾರಣ ಮಾಡಲು ಸಾಧ್ಯವಿಲ್ಲ, ಭ್ರಷ್ಟರು, ನೀತಿ ಬಿಟ್ಟವರು ರಾಜಕೀಯಕ್ಕೆ ಹೋಗುತ್ತಾರೆ, ಇಲ್ಲವೇ ಅಲ್ಲಿ ಹೋದ ಮೇಲೆ ಕೆಟ್ಟು ಹೋಗುತ್ತಾರೆ ಎನ್ನುವ ಸಾಮಾನ್ಯ ಆರೋಪ ಸಮಾಜದಲ್ಲಿದೆ.
ಇಂತಹ ಪರಿಸ್ಥಿತಿಯಲ್ಲಿ, ರಾಜಕಾರಣದಲ್ಲಿದ್ದೂ ತಮ್ಮ ತನವನ್ನು ಬಿಡದೆ, ನಿಯತ್ತಿನ ಹಾದಿಯಲ್ಲಿ ರಾಜಕೀಯ ಮಾಡುತ್ತಿರುವ ವ್ಯಕ್ತಿ ಬೆಳಗಾವಿಯ ಮಹಾಂತೇಶ ಕವಟಗಿಮಠ.
ಮಹಾಂತೇಶ ಕವಟಗಿಮಠ ಸದಾ ಹಸನ್ಮುಖಿ, ಸ್ವಭಾವತಃ ಸುಸಂಸ್ಕೃತರು. ಎಲ್ಲವನ್ನೂ ತಾಳ್ಮೆಯಿಂದ ನೋಡುವವರು, ತಾಳ್ಮೆಯಿಂದ ನಡೆಯುವವರು. ರಾಜಕಾರಣದಾಚೆಯೂ ಸ್ನೇಹಪರ ವ್ಯಕ್ತಿತ್ವ ಉಳಿಸಿಕೊಂಡವರು, ಸದಾ ಕ್ರಿಯಾಶೀಲರಾಗಿರುವವರು.
ಕವಟಗಿಮಠ ಕುಟುಂಬ ಚಿಕ್ಕೋಡಿಯಲ್ಲಿ ಅತ್ಯಂತ ಚಿರಪರಿಚಿತ ಕುಟುಂಬ. ಮಹಾಂತೇಶ ಅವರ ಅಜ್ಜ ಕಲ್ಲಯ್ಯ ಸ್ವಾಮಿ ಕವಟಗಿಮಠ ಕಾಲದಿಂದಲೂ ರಾಜಕೀಯದಲ್ಲಿ ಮುಂಚೂಣಿಯಲ್ಲಿ ಇದ್ದವರು. ತಂದೆ ಮಲ್ಲಯ್ಯ ಸ್ವಾಮಿಯವರಂತು ಚಿಕ್ಕೋಡಿಯ ಭಾಗದಲ್ಲಿ ಕುಟುಂಬದ ಹಿರಿಯರಂತೆ ಬದುಕಿದವರು. ರಾಜಕೀಯವನ್ನು ಎಂದೂ ಸ್ವಾರ್ಥಕ್ಕಾಗಿ ಬಳಸದೆ, ಸಾಮಾಜಿಕ ಸೇವೆಗೆ ಇರುವ ಅವಕಾಶ ಎನ್ನುವಂತೆ ನಡೆದುಕೊಂಡು ಬಂದ ಕುಟುಂಬವದು.
ಕೌಟುಂಬಿಕ ಹಿನ್ನೆಲೆ ಇಟ್ಟುಕೊಂಡು ಹೋದರೆ ಮಹಾಂತೇಶ ಕವಟಗಿಮಠ ಎಂದೋ ಕರ್ನಾಟಕದ ರಾಜಕಾರಣದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆದು ನಿಲ್ಲುತ್ತಿದ್ದರು. ಆದರೆ ಅವರು ಅಜ್ಜ-ತಂದೆಯ ಆದರ್ಶವನ್ನು ಮೈಗೂಡಿಸಿಕೊಂಡರೂ ತಾವು ಬೆಳೆಯುವುದಕ್ಕೆ ಅವರ ಹೆಸರನ್ನು ಬಳಸಿಕೊಳ್ಳದೆ, ಸ್ವಂತ ವ್ಯಕ್ತಿತ್ವ, ಸಾಧನೆಯ ಮೇಲೆಯೇ ಬೆಳೆಯುತ್ತಿದ್ದಾರೆ.
ಅಧಿಕಾರವನ್ನು ಬೆನ್ನತ್ತಿ ಹೋಗಬಾರದು. ಅದಾಗಿಯೇ ಹುಡುಕಿಕೊಂಡು ಬರಬೇಕು ಎನ್ನುವ ಹಿರಿಯರ ಮಾತನ್ನು ನೆಚ್ಚಿಕೊಂಡಿದ್ದಾರೆ. ಜೊತೆಗೆ, ರಾಜ್ಯಸಭಾ ಸದಸ್ಯ, ಪ್ರತಿಷ್ಠಿತ ಕೆಎಲ್ಇ ಸಂಸ್ಥೆಯ ಚೇರಮನ್ ಡಾ.ಪ್ರಭಾಕರ ಕೋರೆಯವರ ನೆರಳಿನಲ್ಲೇ, ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಮುನ್ನಡೆಯುತ್ತಿದ್ದಾರೆ.
ಸಾಮಾನ್ಯವಾಗಿ ರಾಜಕಾರಣದಲ್ಲಿ ಅವಕಾಶ ಸಿಕ್ಕಿತೆಂದರೆ ತಮ್ಮ ಕೆಳಗಿನವರನ್ನು ಮೆಟ್ಟುವವರು, ಬೆಳೆಸಿದವರ ಬೆನ್ನಿಗೆ ಇರಿಯುವವರನ್ನು ನೋಡುತ್ತೇವೆ. ಆದರೆ ಕವಟಗಿಮಠ ಎರಡನ್ನೂ ಮಾಡಿದವರಲ್ಲ. ತಮ್ಮನ್ನು ನಂಬಿದವರನ್ನು ಬೆಳೆಸುತ್ತ, ತಮ್ಮನ್ನು ಬೆಳೆಸಿದವರನ್ನು ಗೌರವಿಸುತ್ತ ಬೆಳೆಯುತ್ತಿದ್ದಾರೆ.
ಮಹಾಂತೇಶ ಕವಟಗಿಮಠ ಶ್ರೀಮಂತ ಕುಟುಂಬದಲ್ಲಿ ಹುಟ್ಟಿ, ಬೆಳೆದರೂ ಡೌನ್ ಟು ಅರ್ಥ್ ಎನ್ನುವಂತೆ ಇದ್ದಾರೆ. ಜನ ಸಾಮಾನ್ಯ ಕಷ್ಟವನ್ನು ಅರಿತು ಸ್ನೇಹದಿಂದ ಮಾತನಾಡಿಸುವ, ಕಷ್ಟ ಸುಖ ಆಲಿಸುವ, ಸ್ಪಂದಿಸುವ ಸೌಜನ್ಯ ಅವರಲ್ಲಿದೆ. ಎಂತಹ ಪರಿಸ್ಥಿತಿಯಲ್ಲೂ ದುಡುಕಿ ಮಾತನಾಡದ, ತಾಳ್ಮೆ ಕಳೆದುಕೊಳ್ಳದ ವ್ಯಕ್ತಿತ್ವ ಅವರದ್ದು.
ಮಹಾಂತೇಶ ಕವಟಗಿಮಠ ಯಾವುದೇ ಸಭೆ, ಸಮಾರಂಭಗಳಿಗೆ ಹೋಗುವಾಗ ಆ ಕುರಿತು ಅಧ್ಯಯನ ಮಾಡಿಯೇ ಹೊರಡುತ್ತಾರೆ. ಜ್ಞಾನ ಎಲ್ಲಿಂದಲೇ ಬಂದರೂ ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಾರೆ. ವಿಧಾನಸಭೆ ಅಧಿವೇಶನ ಬಂತೆಂದರೆ ತಿಂಗಳುಗಟ್ಟಲೆ ಅಧ್ಯಯನ ಮಾಡಿ ಪ್ರಶ್ನೆಗಳನ್ನು ಸಿದ್ಧಪಡಿಸುತ್ತಾರೆ. ಸಂಬಂಧಿಸಿದವರೊಂದಿಗೆ ಚರ್ಚಿಸುತ್ತಾರೆ. ಬಹುಶಃ ಕವಟಗಿಮಠ ಅವರಷ್ಟು ಪ್ರಶ್ನೆಗಳನ್ನು ಕೇಳುವ ಮತ್ತೊಬ್ಬ ಪ್ರಸ್ತುತ ವಿಧಾನಸಭೆ-ಪರಿಷತ್ತಿನಲ್ಲಿಲ್ಲ. ಅವರು ಪ್ರಸ್ತಾಪಿಸಿದ ಎಷ್ಟೋ ವಿಷಯಗಳಿಗೆ ಮುಖ್ಯಮಂತ್ರಿಗಳೇ ಸ್ವತಃ ಸ್ಪಂದಿಸಿ, ಪರಿಹರಿಸಿದ್ದಾರೆ.
ಪಂಚಾಯತ ರಾಜ್ ವಿಷಯಕ್ಕೆ ಬಂದರೆ ಯಾರೂ ಮಾಡದಷ್ಟು ಅಧ್ಯಯನ ಮಾಡಿರುವ ಕವಟಗಿಮಠ, ಸ್ಥಳೀಯ ಸಂಸ್ಥೆಗಳನ್ನು ಹೇಗೆ ಬಲಪಡಿಸಬಹುದೆನ್ನುವ ಕುರಿತು ಸರಕಾರಕ್ಕೆ ಮೌಲ್ಯಯುತ ಸಲಹೆಗಳನ್ನುನೀಡಿದ್ದಾರೆ. ಪಂಚಾಯತ ವ್ಯವಸ್ಥೆ ಸಶಕ್ತವಾಗಬೇಕು. ಎಲ್ಲ ನಿರ್ಧಾರಗಳೂ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಆಗಬೇಕು. ಆಗ ನಿಜವಾದ ವಿಕೇಂದ್ರೀಕರಣ ಆದಂತಾಗುತ್ತದೆ, ನಿಜವಾದ ಅಭಿವೃದ್ಧಿಯ ಪರ್ವ ಆರಂಭವಾಗುತ್ತದೆ ಎಂದು ನಂಬಿದವರು, ಪ್ರತಿಪಾದಿಸುವವರು ಕವಟಗಿಮಠ. ತಮ್ಮ ಹೋರಾಟದಿಂದಲೇ ಪಂಚಾಯತ ರಾಜ್ಯ ಸಂಸ್ಥೆಗಳಿಗೆ ಸರಕಾರ ಹೆಚ್ಚಿನ ಅನುದಾನ ನೀಡುವಂತೆ ಮಾಡಿದ್ದಾರೆ. ಪಂಚಾಯತ ರಾಜ್ಯ ಸಂಸ್ಥೆಯ ಎಲ್ಲ ಪ್ರತಿನಿಧಿಗಳನ್ನು ಒಗ್ಗೂಡಿಸಿ, ಅವುಗಳ ಬಲವೃದ್ಧಿಗೆ ಸರಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ಮುಂದುವರಿಸಿದ್ದಾರೆ.
ಉತ್ತರ ಕರ್ನಾಟಕದ ನೀರಾವರಿ ವಿಷಯದಲ್ಲೂ ಅವರು ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ಕೃಷ್ಣಾ ಮೇಲ್ದಂಡೆ ವಿಷಯದಲ್ಲಿ ವಿಧಾನಸಭೆಯಲ್ಲಿ ಎತ್ತಿದ ವಿಷಯವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರವಾಗಿ ಪರಿಗಣಿಸಿ, ಕೇಂದ್ರದ ನೆರವು ಕೋರಿ ಪ್ರಧಾನಮಂತ್ರಿಯವರನ್ನು ಭೇಟಿಯಾಗಿದ್ದಾರೆ. ಇದು ಕವಟಗಿಮಠ ಅವರ ಕಳಕಳಿ, ತಾಕತ್ತು.
ಮಹಾಂತೇಶ ಕವಟಗಿಮಠ ಹಿಡಿದ ಕೆಲಸ ಮುಗಿಯುವವರೆಗೆ ಕೈ ಬಿಡುವವರಲ್ಲ. ಹಾಗಂತ ವಾಮ ಮಾರ್ಗವನ್ನೆಂದೂ ಹಿಡಿದವರಲ್ಲ. ತಾಳ್ಮೆ, ಪ್ರೀತಿ, ಸತತ ಪ್ರಯತ್ನಗಳಿಂದಲೇ ಸಾಧಿಸುವವರು. ಪಕ್ಷಾತೀತವಾಗಿ ಎಲ್ಲರೂ ಪ್ರೀತಿಸುವ, ಎಲ್ಲರನ್ನೂ ಸೆಳೆಯುವಂತಹ ವ್ಯಕ್ತಿತ್ವವನ್ನು ಬೆಳೆಸಿಕೊಂಡವರು ಅವರು. ರಾಜಕಾರಣದಲ್ಲಿ, ಸಾಮಾಜಿಕ ವ್ಯವಸ್ಥೆಯಲ್ಲಿ ಎತ್ತರಕ್ಕೇರುವ ಎಲ್ಲ ಅರ್ಹತೆಗಳನ್ನೂ ಹೊಂದಿರುವವರು ಮಹಾಂತೇಶ ಕವಟಗಿಮಠ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ