ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಲಾಕ್ ಡೌನ್ ಹಿನ್ನಲೆಯಲ್ಲಿ ರಾಜ್ಯದಲ್ಲಿ ಸ್ಥಗಿತಗೊಂಡಿದ್ದ ಪ್ರಯಾಣಿಕರ ರೈಲು ಸೇವೆ ಇಂದಿನಿಂದ ಪುನಾರಾರಂಭಗೊಂಡಿದೆ. ಇಂದು ಬೆಳಗ್ಗೆಯಿಂದ ಬೆಂಗಳೂರಿನಿಂದ ಬೆಳಗಾವಿಗೆ ಹಾಗೂ ಬೆಂಗಳೂರಿನಿಂದ ಮೈಸೂರಿಗೆ ಆರಂಭಿಕ ಹಂತವಾಗಿ ರೈಲು ಸೇವೆ ಆರಂಭವಾಗಿದೆ.
ಪ್ರಾರಂಭಿಕ ಹಂತವಾಗಿ ಕೆಲ ನಿರ್ದಿಷ್ಟ ಮಾರ್ಗಗಳಲ್ಲಿ ರೈಲು ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಬೆಂಗಳೂರಿಂದ ಮೈಸೂರಿಗೆ ಹಾಗೂ ಬೆಂಗಳೂರಿಂದ ಬೆಳಗಾವಿಗೆ ಎರಡೆರಡು ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದ್ದು, ರೈಲ್ವೆ ಇಲಾಖೆ ಅನುಮೋದನೆ ನೀಡಿದೆ. ಇಂದು ಬೆಳಿಗ್ಗೆ 8ಗಂಟೆಗೆ ಬೆಳಗಾವಿಗೆ ಹೊರಟ ರೈಲಿನಲ್ಲಿ 14 ಬೋಗಿಗಳನ್ನ ಜೋಡಿಸಲಾಗಿದೆ.
ಹಲವು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ರೈಲು ಸಂಚಾರ ನಡೆಸಲಾಗುತ್ತಿದೆ. ಪ್ರಯಾಣಿಕರಿಂದ ಸಾಮಾಜಿಕ ಅಂತರ ಪಾಲನೆ, ಥರ್ಮಲ್ ಸ್ಕ್ರೀನಿಂಗ್, ಕಡ್ಡಾಯ ಮಾಸ್ಕ್ ಬಳಕೆ ಇತ್ಯಾದಿ ಪರಿಶೀಲನೆ ನಡೆಸಿದ ಬಳಿಕವಷ್ಟೇ ಒಳಗೆ ಬಿಡಲಾಗುತ್ತಿದೆ.
ನಾಲ್ಕನೇ ಹಂತದ ಲಾಕ್ಡೌನ್ ಮೇ 31ರವರೆಗೆ ಇದ್ದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಂತರಜಿಲ್ಲಾ ರೈಲು ಸಂಚಾರಕ್ಕೆ ಅವಕಾಶ ಕೊಡುವುದಾಗಿ ಮಾರ್ಚ್ 18ರಂದು ತಿಳಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ