ಇದೊಂದು ಕೆಲಸ ಮಾಡಲಾಗಿಲ್ಲ ಎಂಬ ಬೇಸರವಿದೆ ಎಂದ ಸ್ಪೀಕರ್ ಕಾಗೇರಿ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಳೆದ 2 ವರ್ಷಗಳಲ್ಲಿ ವಿಧಾನಸಭಾಧ್ಯಕ್ಷನಾಗಿ ಹಲವು ಕಠಿಣ ನಿಲುವುಗಳನ್ನು ಜಾರಿಗೆ ತಂದಿದ್ದೇನೆ. ಕನಿಷ್ಠ 60 ದಿನ ಅಧಿವೇಶನಕ್ಕೆ ಸೂಚಿಸಿದ್ದೇನೆ. ಸಭಾಧ್ಯಕ್ಷನಾಗಿ ಸದಸ್ಯರನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಆದರೆ ಒಂದು ಕೆಲಸ ಮಾತ್ರ ಮಾಡಲು ಸಾಧ್ಯವಾಗಿಲ್ಲ ಎಂಬ ಬೇಸರವಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೋವು ತೋಡಿಕೊಂಡಿದ್ದಾರೆ.
ವಿಶ್ವೇಶ್ವರ ಹೆಗಡೆ ಕಾಗೇರಿಯವರು, ಇಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾಗಿ ಎರಡು ವರ್ಷ ಪೂರೈಸಿದ ಹಿನ್ನಲೆಯಲ್ಲಿ, ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ “ಕರ್ನಾಟಕ ವಿಧಾನ ಸಭೆಯ ಎರಡು ವರ್ಷದ ಸಾಧನೆಗಳ ಪುಸ್ತಕ”ವನ್ನು ಬಿಡುಗಡೆಗೊಳಿಸಿದರು. ಎರಡು ವರ್ಷದ ಅವಧಿಯಲ್ಲಿ ಸದನವನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಿದ ಎಲ್ಲಾ ಸದಸ್ಯರುಗಳಿಗೆ, ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ, ಸದನವು ಅನುಭವ ಮಂಟಪದಂತೆ ಅತ್ಯಂತ ಸೌಹಾರ್ದಯುತವಾಗಿ ಮುಕ್ತ ಚರ್ಚೆ ನಡೆಸುವಂತಾಗಬೇಕೆಂದು ಆಶಿಸಿದರು.
ಈ ವೇಳೆ ಮಾತನಾಡಿದ ಕಾಗೇರಿ, ವಿಧಾನಸಭೆಯಲ್ಲಿ ಇ-ವಿಧಾನ್ ಜಾರಿ ಮಾಡಲು ಸಾಧ್ಯವಾಗಿಲ್ಲ ಎಂಬ ನೋವಿದೆ. ಈ ನಿಟ್ಟಿನಲ್ಲಿ ಹಿಂದಿನ ಎಲ್ಲಾ ಸ್ಪೀಕರ್ ಗಳು ಪ್ರಯತ್ನಿಸಿದ್ದರು. ನಾನೂ ಕೂಡ ಸಾಕಷ್ಟು ಪ್ರಯತ್ನ ಮಾಡಿದೆ. ಆದರೂ ಸಾಧ್ಯವಾಗಿಲ್ಲ. ಇ-ವಿಧಾನ್ ಜಾರಿಗೆ ಬಾರದಿರಲು ಸರ್ಕಾರದ ನಿಲುವು ಹಾಗೂ ಧೋರಣೆಗಳೇ ಕಾರಣ. ಅನುದಾನದ ನೆರವಿಗೆ ಸರ್ಕಾರವನ್ನು ಅವಲಂಬಿಸಿದ್ದೇವೆ. ಸರ್ಕಾರದ ಅಧಿಕಾರಶಾಹಿ ಧೋರಣೆಯಿಂದಾಗಿ ಇ-ವಿಧಾನ್ ಜಾರಿ ಮಾಡಲು ಆಗಿಲ್ಲ. ಸರ್ಕಾರದ ಇಂತಹ ಧೋರಣೆ ಬದಲಾಗಬೇಕು ಎಂದರು.
ಸಣ್ಣಪುಟ ರಾಜ್ಯಗಳಾದ ಕೇರಳ, ಹಿಮಾಚಲಪ್ರದೇಶ ರಾಜ್ಯಗಳಲ್ಲಿ ಇ-ವಿಧಾನ್ ಜಾರಿಯಲ್ಲಿದೆ. ಆದರೆ ಐಟಿ ಕ್ಯಾಪಿಟಲ್ ಎಂಬ ಖ್ಯಾತಿಯ ರಾಜ್ಯದಲ್ಲಿ ಇ-ವಿಧಾನ್ ಜಾರಿ ಇಲ್ಲ ಎಂಬುದು ಬೇಸರದ ಸಂಗತಿ. ಈ ಒಂದು ಕೆಲಸ ಜಾರಿಗೆ ತರಲು ನನ್ನಿಂದಲೂ ಸಾಧ್ಯವಾಗಿಲ್ಲ ಎಂಬುದು ನೋವುಂಟು ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮತ್ತೆ ಕೊರೋನಾ ಆತಂಕ: ಸಂಜೆ ಸಿಎಂ ಬೊಮ್ಮಾಯಿ ಮಹತ್ವದ ಸಭೆ: ಅನಿವಾರ್ಯವಾಗುತ್ತಾ ಲಾಕ್ ಡೌನ್ ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ