ಗಿರೀಶ್ ಭಟ್
ಕಲಿಯುಗದಲ್ಲಿ ಇಲ್ಲಿ ಮಾಡಿದ್ದನ್ನು ಸ್ವಲ್ಪ ತಡವಾದರೂ ಇಲ್ಲೇ ಅನುಭವಿಸಿಕೊಂಡು ಹೋಗುವುದು (ಸಾಯುವುದು) ಎನ್ನುವ ಮಾತನ್ನು ಹಿರಿಯರಿಂದ ಸಾಕಷ್ಟು ಸಲ ಕೇಳಿದ್ದೇವೆ. ಇದಕ್ಕೆ ನಿದರ್ಶನಗಳೂ ನಮ್ಮ ಸುತ್ತಮುತ್ತಲೇ ನಡೆಯುವುದನ್ನು/ನಡೆಯುತ್ತಿರುವುದನ್ನೂ ಕೇಳುತ್ತಿರುತ್ತೇವೆ/ನೋಡುತ್ತಿರುತ್ತೇವೆ. ಅಂದರೆ ಲಾಟರಿ ಭಾಷೆಯಲ್ಲಿ ಹೇಳುವುದಾದರೆ ಕಲಿಯುಗದ ಜೀವನವೆಂದರೆ ಇಲ್ಲೇ ಡ್ರಾ, ಇಲ್ಲೇ ಬಹುಮಾನ!.
ಇತ್ತೀಚೆಗೆ ನಡೆದ ಒಂದೆರಡು ಘಟನೆಗಳನ್ನು ನೆನಪಿಸಿಕೊಂಡಾಗ ಮೇಲೆ ಹೇಳಿದ ಮಾತು ಮತ್ತೊಮ್ಮೆ ಮನನಕ್ಕೆ ಬಂದಿತು.
ಘಟನೆ :೧ – ಒಬ್ಬಾತನಿಗೆ ಮೊನ್ನೆ ಮೊನ್ನೆ ಮದುವೆಯಾಗಿ ಒಂದು ಚಿಕ್ಕ ಮಗುವೂ ಇದೆ. ಆತ ಸಿಕ್ಕಾಪಟ್ಟೆ ಕುಡಿದು ತಡರಾತ್ರಿ ತನ್ನ ಸ್ವಂತ ಕಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ ೫೨ ರಲ್ಲಿ ಪ್ರಯಾಣಿಸುತ್ತಿದ್ದ. ಒಂದು ರೋಡ್ ಹಂಪ್ ಬಂತು. ಮುಂದಿದ್ದ ಲಾರಿಯವ ಬ್ರೇಕ್ ಹಾಕಿದ. ಆದರೆ ಹಿಂದೆ ಕಾರನ್ನು ಚಲಾಯಿಸುತ್ತಿದ್ದ ಈತ ಅದನ್ನು ಗಮನಿಸದೆ ಲಾರಿಗೆ ಹಿಂಬದಿಯಿಂದ ಗುದ್ದಿದ. ಪರಿಣಾಮ ಕಾರ್ ಚಾಲಕ ಸ್ಥಳದಲ್ಲೇ ಮೃತಪಟ್ಟ. ಕಾರು ಚಲಾಯಿಸುವವ ಕುಡಿದು ಕಾರ್ ಓಡಿಸುತ್ತಿದ್ದಿದ್ದೇ ಈ ಅಪಘಾತಕ್ಕೆ ಪ್ರಮುಖ ಕಾರಣವೆನ್ನಬಹುದು. ಈತನ ಜೀವನ ಶೈಲಿ ಸೊಕ್ಕಿನಿಂದ ಕೂಡಿತ್ತು ಮತ್ತು ಹುಂಬತನದಿಂದ ಕೂಡಿತ್ತು. ಅಂದರೆ ಒಂದು ಥರಾ ತಾನೇ ದೊಡ್ಡ ಬುದ್ಧಿವಂತ ಎನ್ನುವವರಂತೆ ಯಾರ ಒಳ್ಳೆಯ ಉಪದೇಶವನ್ನೂ ಕೇಳದೆ ಈತ ಹೇಗೆ ಬೇಕೋ ಹಾಗೆ ಜೀವನ ಸಾಗಿಸುತ್ತಿದ್ದ. ತನ್ನ ಚಟಕ್ಕೆ ಬೇಕಾದ ಹಣವನ್ನೂ ಬೇರೆಯವರಿಂದ ಮೋಸದಿಂದಲೇ ತೆಗೆದುಕೊಳ್ಳುತ್ತಿದ್ದ. ಚಿಕ್ಕವನಿರುವಾಗಿನಿಂದಲೂ ಈತ ತನ್ನ ನೆಂಟರ -ಸ್ನೇಹಿತರ ಬಳಗದಲ್ಲಿ ಎಲ್ಲರಿಗೂ ತಲೆನೋವಾಗಿಯೇ ಇದ್ದ.
ಘಟನೆ ೨ – ಒಬ್ಬ ಯುವಕ ಇನ್ನೂ ಮದುವೆಯಾಗಿಲ್ಲ. ಮನೆಯಲ್ಲಿ ಚಿಕ್ಕವನಿರುವಾಗಿನಿಂದಲೇ ಹಿಡಿತವಿಲ್ಲದೆ ಈತನನ್ನು ಬೇಕಾ ಬಿಟ್ಟಿ ಬೆಳೆಸಿಬಿಟ್ಟಿದ್ದಾರೆ. ಪರಿಣಾಮ ಆ ಯುವಕ ದೊಡ್ಡವನಾದ ಮೇಲೂ ಚಟದ ದಾಸನಾಗಿದ್ದಾನೆ. ಆತನಿಗೆ ದಿನಕ್ಕೆ ೨೦ ಗುಟಖಾ ಪ್ಯಾಕೆಟ್ ಬೇಕು. ಬೆಳಿಗ್ಗೆ ಬೆಳಿಗ್ಗೆ ಕುಡಿಯಲು ವಿಸ್ಕಿ ಬೀಯರೇ ಬೇಕು. ಒಟ್ಟಿನಲ್ಲಿ ಈತನಿಗೆ ಹಾಸ್ಟೆಲ್ ವಾಸ ಲೆಕ್ಕಕ್ಕಷ್ಟೇ. ಏಕೆಂದರೆ ಕೇವಲ ಒಬ್ಬನೇ ಇದ್ದು ತನ್ನ ವ್ಯಸನವನ್ನು ಮನಃಪೂರ್ವಕವಾಗಿ ಮಾಡಬಹುದಲ್ಲ ಎಂಬ ಒಂದೇ ಗುರಿಯಿಂದ ಈತ ಒಬ್ಬನೇ ಹಾಸ್ಟೇಲ್‌ನಲ್ಲಿರುತ್ತಿದ್ದ. ಮನೆಯಲ್ಲಿ ಸುಳ್ಳು ಹೇಳಿ ಆ ಕೋರ್ಸ್ ಮಾಡುತ್ತಿದ್ದೇನೆ, ಈ ಕೋರ್ಸ್ ಮಾಡುತ್ತಿದ್ದೇನೆ ಎಂದು ಹಣ ಖಾತೆಗೆ ಹಾಕಿಸಿಕೊಂಡು ಈತ ಇಲ್ಲಿ ಹುಬ್ಬಳ್ಳಿಯ ಹಾಸ್ಟೆಲ್‌ನಲ್ಲಿ ಮಜಾ ಉಡಾಯಿಸುತ್ತಿದ್ದ. ಪರಿಣಾಮ ಮೊನ್ನೆ ಮೊನ್ನೆ ಆರೋಗ್ಯ ಒಮ್ಮೇಲೆ ಕೈ ಕೊಟ್ಟಿತು. ಫಲಿತಾಂಶ ಸಾವು. ಇಂತಹ ಸಾಕಷ್ಟು ಸಂಖ್ಯೆಯ ಯುವಕ-ಯುವತಿಯರು ಇದೇ ರೀತಿ ತಮ್ಮ ತಮ್ಮ ಜೀವನ ಕೊನೆಯಾಗಿಸಿಕೊಂಡಿರಬಹುದು.
ಮೇಲಿನ ಎರಡೂ ಘಟನೆಗಳನ್ನು ಏತಕ್ಕೆ ಹೇಳಬೇಕಾಯಿತು ಎಂದರೆ ಮೊದಲನೆಯದಾಗಿ ಅವರು ಮಾಡಿದ ವಿಪರೀತ ವ್ಯಸನಗಳು. ಆ ವ್ಯಸನಗಳೇ ಪಾಪ ಕರ್ಮಗಳಾಗಿ ಅವರ ಸಾಯದ ವಯಸ್ಸಿನಲಿ ಜೀವ ಕಿತ್ತುಕೊಂಡವು. ಇವರು ತಾವು ಕೇವಲ ಚಟದ ದಾಸರಾಗಿರಲಿಲ್ಲ. ಮತ್ತೊಬ್ಬರಿಗೆ ಮೋಸ ಮಾಡುವುದು. ಮತ್ತೊಬ್ಬರ ಹೆಸರಿನಲ್ಲಿ ಬೇರೆಯವರ ಹತ್ತಿರ ಸಾಲ ತೆಗೆದುಕೊಂಡು ಮಜಾ ಮಾಡುತ್ತಿರುವವರೇ ಆಗಿದ್ದರು. ಒಂದು ಥರಹ ದಾದಾಗಿರಿ (ರೌಡಿಸಂ) ಯಿಂದ ಬೇರೆಯವರ ಬಳಿ ದುರ್ವರ್ತನೆ ತೋರುವುದು. ’ಪವರ್ ಆಫ್ ಅಟಾರ್ನಿ’ ಯಲ್ಲೂ ತನ್ನ ಸಂಬಂಧಿಕರಿಗೆ ನಾಮ ಎಳೆದು ಚಟಕ್ಕೆ ತನಗೆ ಬೇಕಾದ ದುಡ್ಡು ಮಾಡಿಕೊಳ್ಳುವುದು. ಇಂಥವರು ಮಧ್ಯವರ್ತಿ ಎಂಬಂತೆ ವರ್ತಿಸಿ ಬೇರೆಯವ ಹಣ ನುಂಗಿ, ಇತರರ ಮನಃ ಶಾಂತಿ ಕಸಿಯುವ ಚಟುವಟಿಕೆಗಳಲ್ಲಿಯೇ ಸದಾ ತೊಡಗಿರುತ್ತಾರೆ. ಇನ್ನೊಂದು ಇಂಥವರಲ್ಲಿ ಕಂಡುಬರುವ ಪ್ರಮುಖ ಲಕ್ಷಣವೆಂದರೆ ಇವರು ತಮಗೆ ತಾವೇ ಅತೀ ಬುದ್ಧಿವಂತರೆಂದು ತಿಳಿದಿರುವುದು. ಇವರಿಗೆ ತಿಳಿದಿರುವುದಿಲ್ಲ. ಎಲ್ಲವನ್ನೂ ಮೇಲೊಬ್ಬ ನೋಡುತ್ತಿರುತ್ತಾನೆ ಎಂದು. ಆತ ಪಾಪದ ಕೊಡ ತುಂಬಿದ ತಕ್ಷಣ ತನ್ನ ತೀರ್ಪು ನೀಡುತ್ತಾನೆ, ಅದು ಮರಣದ ಶಿಕ್ಷೆಯೂ ಆಗಬಹುದು.
ಆದ್ದರಿಂದ ಜನರು ಬಡವ -ಮಧ್ಯಮ ವರ್ಗದವರಾಗಿ ಜೀವನ ಕಳೆದರೂ ಪರವಾಗಿಲ್ಲ. ಆದರೆ ಮೋಸ, ವಂಚನೆ, ದಾದಾಗಿರಿ (ರೌಡಿಸಂ) ಮಾತ್ರ ಮಾಡದಿರುವುದೇ ಉತ್ತಮ. ಸೊಕ್ಕಿನಿಂದ ಮೆರೆದು ಬೇರೆಯವ ಮನಸ್ಸು ನೋಯಿಸಿದರೆ ಅವರ ಶಾಪ ತಟ್ಟೇ ತಟ್ಟುತ್ತದೆ. ಅದರಲ್ಲೂ ಅನೈತಿಕ ಚಟುವಟಿಕೆ, ಬ್ಲ್ಯಾಕ್ ಮೇಲ್ ಇಂತಹವಂತೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇಂತಹ ಚಟುವಟಿಕೆಗಳು ಕೊನೆಗೆ ತಪ್ಪಿತಸ್ತರ ಜೀವವನ್ನೇ ಬಲಿ ತೆಗೆದುಕೊಳ್ಳಬಹುದು. ಡ್ರಗ್ಸ್ ಚಟದಿಂದ ಅತ್ಯಾಚಾರ, ಅತ್ಯಾಚಾರದಿಂದ ಬ್ಲ್ಯಾಕ್‌ಮೇಲ್ ಹೀಗೆ ಈ ಡ್ರಗ್ಸ್ ಜಾಲ ಒಂದು ಚೈನ್ ಲಿಂಕ್ ಎಂದರೂ ತಪ್ಪಿಲ್ಲ. ಮೊದಮೊದಲು ಪಾರ್ಟಿಗಳಲ್ಲಿ ಪರಿಚಯವಾಗುವ ಡ್ರಗ್ಸ್ ಪೆಡ್ಲರ್‌ಗಳು ತಮ್ಮ ಬಿಜಿನೆಸ್ ಗುಂಗಿನಲ್ಲಿ ಹೆಚ್ಚು ಹೆಚ್ಚು ಗಿರಾಕಿಗಳನ್ನು ಹುಡುಕುತ್ತಾರೆ. ಹೊಸ ಹೊಸ ಯುವಕ-ಯುವತಿಯರಿಗೆ ಡ್ರಗ್ಸ್ ಚಟ ಅಂಟಿಸಲು ಕಾರಣವಾಗುತ್ತಾರೆ. ಅಲ್ಲದೆ ಉತ್ತಮ ಭವಿಷ್ಯವಿಟ್ಟುಕೊಂಡಿರುವ ಯುವಕ -ಯುವತಿಯರ ಆರೋಗ್ಯ ಮತ್ತು ಭವಿಷ್ಯ ಎರಡನ್ನೂ ಹಾಳುಮಾಡುತ್ತಾರೆ.
ಇಂತಹ ಘಟನೆಗಳನ್ನು ಅವಲೋಕಿಸಿದಾಗ ಒಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಲೇಬೇಕು. ಅದೇನೆಂದರೆ ’ಮನುಷ್ಯ ಬೇರೆಯವರಿಗೆ ಒಳ್ಳೆಯದನ್ನು ಮಾಡದಿದ್ದರೂ ಪರವಾಗಿಲ್ಲ. ಕೆಟ್ಟದ್ದನ್ನಂತೂ ಖಂಡಿತವಾಗಿ ಮಾಡಬಾರದು’ ಎಂದು. ಮನುಷ್ಯನಿಗೆ ಸಿಟ್ಟು ಬಂದಾಗ ಸಿಟ್ಟಿನ ಕೈಗೆ ಬುದ್ದಿ ಕೊಡಬಾರದೆಂದು ಆಗಾಗ ಅನುಭವಕ್ಕೆ ಬರುತ್ತಲೇ ಇರುತ್ತದೆ. ಉದಾಹರಣೆಗೆ ಯಾವುದೋ ಒಬ್ಬಾತ ನಮಗೆ ಮೋಸ ಮಾಡಿ ಆರಾಮವಾಗಿದ್ದಾನೆಂದು ನಮಗೆ ಭಾಸವಾಗುತ್ತಿರುತ್ತದೆ. ಸ್ವಲ್ಪ ದಿನಗಳ ನಂತರ ಆತನಿಗೆ ಏನಾದರೂ ಅದಕ್ಕೆ ತಕ್ಕ ಶಾಸ್ತಿಯಾಗಿ ಆತ ನೋವನ್ನನುಭವಿಸುತ್ತಾನೆ. ಅಂದರೆ ಆತ ನಮಗೆ ಮೋಸ ಮಾಡಿದಾಗ ನಾವು ಸಿಟ್ಟಿನಿಂದ ಆತನಿಗೆ ಹೊಡೆದು -ಬಡಿದು ದಾಂಧಲೆ ಮಾಡುವುದಕ್ಕಿಂತ ಮೌನವಾಗಿ ಇದ್ದಿದ್ದೇ ಉತ್ತಮ ಎಂದು ನಮಗೆ ಆಗ ಅನಿಸುತ್ತದೆ. ಸಮಯ ಕಳೆದು ಹೋಗುತ್ತಿರುತ್ತದೆ. ಅದರಿಂದ ನಾವೇನೂ ಸಾಧಿಸಿಯೇ ಇಲ್ಲ ಎಂದುಕೊಳ್ಳುತ್ತೇವೆ. ಆದರೆ ಹಲವು, ನೋವು -ದುಃಖಕ್ಕೆ ಸಮಯವೇ ಪರಿಹಾರವಾಗಿದೆ. ಏಕೆಂದರೆ ಹಲವು ತೊಂದರೆಗಳು, ಮಾನಸಿಕ ವ್ಯಥೆಗಳು ಸಮಯ ಕಳೆದಂತೆ ಶಮನವಾಗುವಂತಹವು. ಆದ್ದರಿಂದ ನಮ್ಮ ಜೀವನದ ಹಲವು ಸಂದರ್ಭಗಳಲ್ಲಿ ಹತ್ತಾರು ಸಮಸ್ಯೆಗಳು ಸಮಯ -ದಿನಗಳು ಉರುಳಿದಂತೆ ತಾವೇ ಸರಿಯಾಗುವಂತಹವು. ಅಂತಹ ಸಮಸ್ಯೆಗಳು ಕಾಡುವಾಗ ನಾವು ಸಂಯಮದಿಂದಿದ್ದರೆ ನಂತರ ಖಂಡಿತವಾಗಿಯೂ ಉತ್ತಮ ಜೀವನ ನಮ್ಮದಾಗುತ್ತದೆ.
ಚಿಕ್ಕವರಿರುವಾಗಲೂ ಅಷ್ಟೆ. ಶಾಲೆಗೆ ಹೋಗುವಾಗ ನಮ್ಮ ಶಿಕ್ಷಕರೇ ನಮ್ಮನ್ನು ನಿಂದಿಸಬಹುದು. ಕೆಲವು ನಮ್ಮ ಕ್ಲಾಸ್‌ಮೇಟ್, ಸ್ಕೂಲ್ ಮೇಟ್‌ಗಳು ನಮ್ಮನ್ನು ಅಪಹಾಸ್ಯ ಮಾಡಬಹುದು. ಕೆಲವು ನಮ್ಮ ಸ್ನೇಹಿತರಂತೆ ಇರುವ ಹಿತಶತ್ರುಗಳೇ ತಮಾಷೆ ಮಾಡುತ್ತೇವೆ ಎಂಬಂತೆ ನಟಿಸಿ ನಮ್ಮ ಮನಸ್ಸನ್ನು ನೋಯಿಸಿರಬಹುದು, ಚುಚ್ಚುಮಾತುಗಳನ್ನಾಡಿರಬಹುದು. ಅದೇ ರೀತಿ ನಮ್ಮ ನೆಂಟರಿಷ್ಟರ ಮನೆಯಲ್ಲಿ ನಾವು ಶಾಲೆ ಕಲಿಯಲೆಂದು ಕೆಲವು ವರ್ಷಗಳವರೆಗೆ ವಾಸಿಸುತ್ತಿರಬಹುದು. ಆಗ ನಮಗೆ ಅದು ಮಹಾ ಶಿಕ್ಷೆಯೆಂದು ತೋರಬಹುದು. ಆದರೆ ಕಾಲ ನಿಲ್ಲುವುದಿಲ್ಲ. ಓಡುತ್ತಲೇ ಇರುತ್ತದೆ. ನಮ್ಮ ಜೀವನದ ನಂತರದ ಘಟ್ಟಕ್ಕೆ ಹೋಲಿಸಿದರೆ ಅದು ಚಿಕ್ಕ ಅವಧಿ ಮಾತ್ರ. ಆ ಅವಧಿಯಲ್ಲಿ ನಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲೇಬೇಕು. ಅವರಿಗೆ ನಮ್ಮ ಜೀವನದಲ್ಲಿ ಮುಂದೆ ಏನಾದರೂ ಸಾಧಿಸಿಯೇ ಉತ್ತರ ನೀಡಬೇಕೆ ಹೊರತು ಆಗ ಏನೂ ಮಾತನಾಡದೇ ಮೌನವಾಗಿರಬೇಕು. ಜೀವನದಲ್ಲಿ ’ಸೇಡುತೀರಿಸಿಕೊಳ್ಳುವುದೆಂದರೆ ತಿರುಗಿ ಬೀಳುವುದಲ್ಲ, ಸಾಧಿಸಿ ತೋರಿಸುವುದು’ ಎನ್ನುವ ನೀತಿ ಅಳವಡಿಸಿಕೊಂಡರೆ ಬಹಳ ಉತ್ತಮ.
ಇನ್ನು ವ್ಯಸನದ ವಿಷಯಕ್ಕೆ ಬಂದಾಗ ಚಿಕ್ಕ ವಯಸ್ಸಿನಲ್ಲಿ ಮನಸ್ಸು ಚಂಚಲವಾಗಿದ್ದರೂ, ಮನುಷ್ಯ ತಾನು ತನ್ನ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲೇಬೇಕು. ’ಏ ಬಿಡೋ, ನನ್ನ ಅಪ್ಪ ಮಾಡಿಟ್ಟ ಆಸ್ತಿ ಬೇಕಾದಷ್ಟಿದೆ’ ತಾನು ’ಆಡಿದ್ದೇ ಆಟ, ಮಾಡಿದ್ದೇ ಮಾಟ’ ಎಂಬಂತೆ ಹಲವರು ಜೀವನ ಸಾಗಿಸುತ್ತಾರೆ. ದುಬಾರಿ ಬೈಕ್-ಕಾರ್ ಖರೀದಿಸಿ, ರಸ್ತೆ ಮೇಲೆ ಬೇರೆಯವರಿಗೆ ತೊಂದರೆ ಆಗುವಂತೆ ಚಲಾಯಿಸುತ್ತಿರುತ್ತಾರೆ. ಇಂತಹ ಸಮಾಜದ ಉನ್ನತ ವರ್ಗದ ಯುವಕ -ಯುವತಿಯರು ತಮ್ಮ ಬಳಿ ಸಾಕಷ್ಟು ಹಣಗಳಿರುವುದರಿಂದ ಡ್ರಗ್ಸ್ ಚಟಕ್ಕೆ ಸುಲಭವಾಗಿ ಬಲಿಯಾಗುತ್ತಿದ್ದಾರೆ. ಸಿರಿವಂತ ಕುಟುಂಬದಿಂದ ಬಂದವರು ತಾವಷ್ಟೇ ಅಲ್ಲದೆ ತಮ್ಮ ತಮ್ಮ ಸ್ನೇಹಿತರಿಗೂ ಡ್ರಗ್ಸ್ ಪೂರೈಕೆ ಮಾಡಿ ಅವರ ಜೀವನ ಹಳ್ಳಹಿಡಿಯಲು ಕಾರಣರಾಗುತ್ತಿದ್ದಾರೆ. ಇನ್ನು ಸಿಗರೇಟ್, ಸಾರಾಯಿ ಚಟವಂತೂ ಮಾನವ ಅರ್ಧಕ್ಕೆ ಸಾಯಲು ಬಹಳ ಸುಲಭ ಮಾರ್ಗವಿದ್ದಂತೆ. ಮೊದಲು ಬೀಯರ್ ಟಿನ್ -ಸಿಗರೇಟ್‌ನಿಂದ ಶುರುವಾಗುವ ಈ ವ್ಯಸನ ಹುಡುಗ/ಗಿ ಕೈಕೊಟ್ಟಾಗ ಡ್ರಗ್ಸ್‌ವರೆಗೂ ಹೋಗಿ ತಲುಪುತ್ತದೆ. ಪ್ರತಿದಿನವೂ ಸಾರಾಯಿ ಕುಡಿಯದೇ ನಿದ್ರೆ ಬರುವುದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಚಟದ ದಾಸರಾಗಿಬಿಡುತ್ತಾರೆ ಭಗ್ನ ಪ್ರೇಮಿಗಳು. ಇದರಿಂದ ಹಣವೂ ಪೋಲು. ಮಾನ-ಮರ್ಯಾದೆ ಹಾಳು. ಇದು ಇಷ್ಟಕ್ಕೇ ನಿಲ್ಲದೆ, ಒಮ್ಮೇಲೆ ಆರೋಗ್ಯ ಕೈ ಕೊಟ್ಟು ಮನುಷ್ಯ ಹೊಗೆ ಹಾಕಿಸಿಕೊಳ್ಳಲೂಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ