Cancer Hospital 2
Bottom Add. 3

ಮನದಲ್ಲೇ ಗೊಣಗುವ ಮುನ್ನ…

✍️ ಕುಸುಮಾ. ಜಿ. ಭಟ್, ಸಾಗರ

ಮುಖ್ಯರಸ್ತೆಯಲ್ಲಿ ನಮಗಿಂತ ವೇಗದಿಂದ ಓಡುತ್ತಿದ್ದ ಸ್ವಿಫ್ಟ್ ಕಾರಿನ ಚಾಲಕ ಕೈ ಬೀಸುತ್ತ ತನ್ನ ಗಾಡಿಯನ್ನು ಬಲದಿಕ್ಕಿನ ಅಡ್ಡ ರಸ್ತೆಗೆ ಅಷ್ಟೇ ವೇಗವಾಗಿ ತಿರುಗಿಸಿದಾಗ ನಮ್ಮ ಕಾರಿನ ಡ್ರೈವರ್ (ನನ್ನೆಜಮಾನರು)
” ಅಬ್ಬಾ ಅದೆಷ್ಟು ಅರ್ಜೆಂಟು ಇವನಿಗೆ” …. ಎಂದು ವಾಡಿಕೆಯಂತೆ ಸಿಡುಕಿದ್ದು ಸ್ಪಷ್ಟವಾಗಿ ಗೋಚರಿಸುತಿತ್ತು, ಎದುರುಗಡೆ ಮಿರರ್ ನಲ್ಲಿ.
ಮರುಕ್ಷಣದಲ್ಲೇ “ಡಾಕ್ಟರು ಚೌತಿ ಹಬ್ಬಕ್ಕೆ ನಾಲ್ಕು ದಿನ ರಜೆ ಮಾಡಿದ್ದಕ್ಕೆ ಹೀಗೆ ಇನ್ನೆಷ್ಟು …ಕಾರು, ಬೈಕುಗಳು ಮನೆ ಮುಂದೆ ಸಾಲು ಗಟ್ಟಿವೆಯೋ ನೀ ಬೇಗ ಬೇಗ ತೋರಿಸಿಕೊಂಡು ಬಾ ಮತ್ತೆ ಗಂಟೆ ಗಟ್ಟಲೆ ಕಾಯ್ತಾ ಕೂರಲು ಆಗದು” ಎಂದು ಮುಖ ಸಿಂಡರಿಸಿ ನನ್ನ ಹತ್ತಿರ ಆಜ್ಞೆಯೂ ಆಯಿತು.
ಹಬ್ಬ ಮುಗಿದು ಗಣೇಶನನ್ನು ಕಳಿಸಿಕೊಟ್ಟರೂ ಮನೆ ಮಂದಿಗೆಲ್ಲ ಬಂದ ಜ್ವರ ಜಾಡ್ಯ ಮಾತ್ರ ಬಿಟ್ಟು ಹೋಗದ ಕಾರಣ ಹತ್ತಿರದ ಊರಿನ ನಮ್ಮ ಕುಟುಂಬ ಆಯುರ್ವೇದ ವೈದ್ಯರ ಕಾಣಲು ನನ್ನವರ ಜೊತೆ ಹೊರಟಿದ್ದೆ ಮೊನ್ನೆ.

ಹೌದು ಸಂದೇಹವೇ ಇಲ್ಲ ಆ ಕಾರಿನಿಂದ ಇಳಿದ ನೀಲಿಬಣ್ಣದ ಕುರ್ತಾ ಧರಿಸಿದ ಸ್ವಲ್ಪ ಜಾಸ್ತಿಯೇ ಎತ್ತರದ ನಿಲುವಿನ ಯುವತಿ ತನ್ನ ಚಂದದ ಪೋನಿಟೈಲ್ ನ್ನು ಬಿಚ್ಚಿ ಮತ್ತೊಮ್ಮೆ ಎತ್ತಿ ಕಟ್ಟಿ, ಗುಲಾಬಿ ವರ್ಣದ ದುಪ್ಪಟ ಸರಿ ಪಡಿಸಿಕೊಳ್ಳುತ್ತ ಡಾಕ್ಟರ ಮನೆಯ ಗೇಟು ಸರಿಸಿ ಏಳೆoಟು
ವರ್ಷದ ಬಾಲಕನ ಕೈ ಹಿಡಿದು ಮೆಟ್ಟಿಲು ಹತ್ತುತ್ತಿದ್ದಾಳೆ.


ನಾನು ಮನದಲ್ಲೇ ಗೊಣಗಿಕೊಂಡೆ “ಛೇ ಅರೋಗ್ಯವೇ ಸರಿ ಇಲ್ಲದ ಈ ಹುಡುಗಿಯರಿಗೆ ಅದೆಷ್ಟು ಬಾಹ್ಯ ಸೌಂದರ್ಯ ಪ್ರಜ್ಞೆ”
ಕ್ಲಿನಿಕ್ ಪೂರ್ತಿ ರೋಗಿಗಳು ತುಂಬಿಕೊಂಡಿದ್ದರಿಂದ ಒಳಗಿನ ಖುರ್ಚಿ ಖಾಲಿ ಆಗೋ ತನಕ ಹೋದವರೆಲ್ಲ ಹೊರಗೆ ಕಾದು ನಿಲ್ಲಬೇಕಾದ್ದು ಅನಿವಾರ್ಯ ವಾಗಿತ್ತು. ಈಗ ಆ ಯುವತಿಯನ್ನು ಸ್ವಲ್ಪ ಹತ್ತಿರದಿಂದ ಕಂಡಾಗ ನಮ್ಮವರೇ ಎಂಬಂತೆ ಮುಗುಳ್ನಕ್ಕಳು. ನಾನೆ ಕುತೂಹಲದಿಂದ ಮಾತು ಮುಂದುವರಿಸಿದೆ “ಎಲ್ಲಿಯವರು ತಾವು?!” “ಜೋಗ ಸಮೀಪದ ಹಳ್ಳಿ, ಕೆಲಸ ಮಾಡುತ್ತಿರುವುದು ಬೆಂಗಳೂರಲ್ಲಿ , ಇವತ್ತು ಅಲ್ಲಿಂದಲೇ ಡಾಕ್ಟರ್ ಕಾಣಲು ಬಂದಿದ್ದೇವೆ ಮತ್ತೆ ಈ ಸಂಜೆಯ ಟ್ರೈನ್ ಗೆ ವಾಪಾಸ್ ಹತ್ತಬೇಕು” ಪರಸ್ಪರ ಕಿರುಪರಿಚಯದ ವಿನಿಮಯವಾಗುತ್ತಿದ್ದಂತೆ
ನಾನೆಂದೆ “ಮೊದ್ಲು ನಡೆಯಿರಿ ಒಳಗೆ ಹೀಗೆ ನಿಂತಿದ್ದರೆ ರಾತ್ರಿ ವರೆಗೂ ಇಲ್ಲೇ ಇರಬೇಕು ಬಂದವರೆಲ್ಲ ನಮ್ಮ ಸರಿಸಿ ನುಗ್ಗಿಕೊಂಡು ಹೋಗುತ್ತಾರೆ ಅಷ್ಟೇ ” ಮುಗುಳ್ನಕ್ಕು ಆ ಜೋಡಿ ಹೂಂ ಎನ್ನುತ ಮಗನೊಂದಿಗೆ ಒಳಹೋದರು ನಾನೂ ಹಿಂದೆ ನಡೆದೆ.


ಡಾಕ್ಟರ್ ಟೇಬಲ್ ಎದುರು ಒಂದೇ ಕುಟುಂಬದ ಆರು ಮಂದಿ ಹೆಂಗಸರು. ಒಬ್ಬೊಬ್ಬರಿಗೆ ಒಂದೊಂದು ಅರೋಗ್ಯ ಸಮಸ್ಯೆ ನಾನು ನೋಡ್ತಾನೆ ಇದ್ದೇನೆ… ಐದು ನಿಮಿಷ….. ಹತ್ತು ನಿಮಿಷ ಅಂತ ಅರ್ಧ ಗಂಟೆ ಆದರೂ ಅವರ ತಪಾಸಣೆ, ಅರೋಗ್ಯ ಸಂಬಂಧಿತ ಪ್ರಶ್ನೆ, ಮುಗಿಯುತ್ತಲೇ ಇಲ್ಲ…

ನನಗೋ ಜ್ವರದ ತಾಪ ಒಂದುಕಡೆ. ಮನೆಯಲ್ಲಿ ಎಲ್ಲ ಮಲಗಿದ್ದಾರೆ. ಯಾರಾದರೂ ನೆಂಟರು ಬಂದರೆ? ಕತ್ತಲೆಯಾದಂತೆ ನಮ್ಮೂರ ದಾರಿಯಲ್ಲಿ ಕಾಡು ಪ್ರಾಣಿಗಳು ಅಡ್ಡ ಬಂದರೆ ? ಏನು ಮಾಡೋದು ಹೀಗೆ ಹತ್ತಾರು ಯೋಚನೆ ಮತ್ತೊಂದು ಕಡೆ.
ನನ್ನ ಸಹನೆ ಮೀರುತಿತ್ತು…


” ಛೇ ಈ ಡಾಕ್ಟರ್ ಅವರ ಪುರಾಣ ಒಂದೊಂದೇ ಕೇಳೋದಾದ್ರು ಸಾಕು
ಏನೋ ಒಂದು ಔಷಧಿ, ಮಾತ್ರೆ ಕೊಟ್ಟು ಬೇಗ ಬೇಗ ಕಳಿಸಬಾರದೆ” ಎಂದು ಮನದಲ್ಲೇ ಮತ್ತೆ ಗೊಣಗಿದೆ. ಹಾಗೇ ತಲೆಗೆ ಕೈ ಕೊಟ್ಟು ಕೂತಿದ್ದ ನನ್ನ ಗಮನ ಸೆಳೆದಿದ್ದು ನನ್ನೆದುರು ಕುಳಿತ ಮತ್ತದೇ ಅಮ್ಮ ಮಗನ ಮುದ್ದು ಸಂಭಾಷಣೆ!

ತಾಯಿ ಆ ಪುಟ್ಟನ ಕೆನ್ನೆ ಚಿವುಟಿ “ನೋಡು ಮಗ ನಿಂಗೆ ಹೊಟ್ಟೆ ನೋವು ಬಂದಿದ್ದು ಅಲ್ವಾ ಅದಕ್ಕೆ ನೀನೆ ಡಾಕ್ಟರ ಹತ್ತಿರ ಏನಾಗ್ತಿದೆ ಹೇಳಬೇಕು ಆಯ್ತಾ” ಎಂದರೆ “ಉಹೂ ನಂಗೊತ್ತಿಲ್ಲ ನೀವೇ ನನ್ನ ಕರ್ಕೊಂಡು ಬಂದಿದ್ದು. ಅದಕ್ಕೆ ಅಪ್ಪ ಅಮ್ಮನೇ ಹೇಳಬೇಕು ಎಲ್ಲಾ”ಎಂದು ತೊದಲು ನುಡಿಯಾಡುತ್ತಾ ಅಮ್ಮನ ಮಡಿಲಲ್ಲಿ ತಲೆ ಹುದುಗಿಸಿಕೊಂಡ ಆ ಪೋರ.

ಮಗನೊಡನೆ ಕೀಟಲೆ, ತಮಾಷೆ ಮಾಡುತ್ತಲೇ ತಮ್ಮ ಸರತಿ ಬಂದಾಗ ಆಕೆ ತನ್ನ ಪತಿಗೆ ಹೇಳುತ್ತಾಳೆ “ರೀ ನೋಡಿ ಪಾಪ ಆ ಚಿಕ್ಕ ಹುಡುಗಿ ಅದೆಷ್ಟು ಹೊತ್ತಿನಿಂದ ಕಿವಿ ನೋವೆಂದು ಅಪ್ಪನಿಗೆ ಒರಗಿ ಭಯದಿಂದ ಕುಯ್ ಎಂದು ಸಣ್ಣಕೆ ಅಳುತ್ತಿದೆ. ಅವರೇ ಮೊದಲು ಹೋಗಲಿ ಅಲ್ವಾ. ನಾವು ನಂತರ ಹೋದರಾಯಿತು ಬಿಡಿ.” ಗಂಡನೂ ಕೂಡ ಅದಕ್ಕೆ ಹೂಂ ಎಂದು ತಲೆ ಆಡಿಸಿದ.

ಆ ಹುಡುಗಿಯನ್ನು ಪರೀಕ್ಷಿಸಿದ ನಂತರವೇ ಈ ದಂಪತಿ ಹಳೆಯ ರಿಪೋರ್ಟ್ ತೋರಿಸುತ್ತ ತಮ್ಮ ಮಗನ ಅರೋಗ್ಯ ಸಮಸ್ಯೆ ಬಗ್ಗೆ ಸ್ವಲ್ಪವೂ ಆತಂಕ ಪಡದೆ ನಿಧಾನ ಹೇಳತೊಡಗಿದಾಗ….. ಇನ್ನೇನು ನನ್ನನ್ನೇ ಕರೆಯುತ್ತಾರೆ ಎಂದು ತುದಿಗಾಲಿನಲ್ಲಿ ನಿಂತಿವಳಿಗೆ ಈ ಬಾರಿ ಮನದಲ್ಲೇ ಗೊಣಗುವ ಬದಲು ನಾಚಿಕೆಯಾಗಿ ತಲೆ ತಗ್ಗಿಸಿ ನನ್ನನ್ನೇ ಪ್ರಶ್ನಿಸಿಕೊಳ್ಳತೊಡಗಿದೆ! ನಿಜಕ್ಕೂ ಈ ಕಾಲದಲ್ಲೂ ಇಂಥ ತಾಳ್ಮೆ,ಪ್ರೀತಿಯನ್ನು ಮೈದುಂಬಿಕೊಂಡು, ತಮ್ಮ ಹಾಗೇ ಪರರ ಮಕ್ಕಳು ಎಂದು ಭೇಧ ಭಾವ ತೋರದೆ ಮಾನವೀಯತೆ ಮೆರೆವ ಜನರಿದ್ದಾರೆಯೇ?!


Bottom Add3
Bottom Ad 2

You cannot copy content of this page