ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ತಮ್ಮ ಮಗಳು ಅಪಹರಣವಾಗಿದ್ದಾಳೆ ಎಂದು ಸಿಡಿಯಲ್ಲಿರುವ ಯವತಿಯ ಪಾಲಕರು ಎನ್ನಲಾದ ವ್ಯಕ್ತಿ ನೀಡಿದ ದೂರಿನನ್ವಯ ಯುವತಿಯನ್ನು ಪತ್ತೆ ಮಾಡಲು ಪೊಲೀಸರ ವಿಶೇಷ ತಂಡ ಹೊರಟಿದೆ.
ಮಾರ್ಕೆಟ್ ಠಾಣೆ ಎಸಿಪಿ ಮತ್ತು ಎಪಿಎಂಸಿ ಠಾಣೆ ಇನಸ್ಪೆಕ್ಟರ್ ನೇತೃತ್ವದ ತಂಡ ರಚಿಸಲಾಗಿದ್ದು, ತಕ್ಷಣದಿಂದಲೇ ಕಾರ್ಯಪ್ರವೃತ್ತವಾಗಿದೆ. ಈ ಮಧ್ಯೆ ಯುವತಿಯ ಪಾಲಕರೆಂದು ದೂರು ನೀಡಿದವರು ಹನುಮಾನ್ ನಗರದ ಮನೆಯನ್ನು ತೊರೆದಿದ್ದು, ಇನ್ನು 2 ತಿಂಗಳು ಬರುವುದಿಲ್ಲ ಎಂದು ಹೇಳಿ ಬಾಡಿಗೆ ಹಣ ಪಾವತಿಸಿ ತೆರಳಿದ್ದಾರೆ.
ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ದಾಖಲಾಗಿರುವ ಈ ಪ್ರಕರಣವನ್ನು ಬೆಂಗಳೂರಿನ ಎಸ್ಐಟಿಗೆ ಹಸ್ತಾಂತರಿಸುವ ಕುರಿತು ಇನ್ನೂ ನಿರ್ಧರಿಸಿಲ್ಲ. ಪ್ರಾಥಮಿಕ ತನಿಖೆ ನಡೆಸಿದ ನಂತರ ಈ ಬಗ್ಗೆ ಯೋಚಿಸಲಾಗುವುದು ಎಂದು ಡಿಸಿಪಿ ವಿಕ್ರಂ ಅಮಟೆ ತಿಳಿಸಿದ್ದಾರೆ.
ಈ ಪ್ರಕರಣದಿಂದಾಗಿ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟೂ 6 ದೂರುಗಳು ದಾಖಲಾದಂತಾಗಿದೆ. ಪೊಲೀಸರು ಒಂದು ಪ್ರಕರಣ ಕೈಗೆತ್ತಿಕೊಳ್ಳುತ್ತಿದ್ದಂತೆ ಮತ್ತೊಂದು ದೂರು ದಾಖಲಾಗುತ್ತಿದೆ. ಆರಂಭಿಕ ಲೈಂಗಿಕ ಕಿರುಕುಳ ಎನ್ನುವಲ್ಲಿಂದ ಹನಿಟ್ರ್ಯಾಪ್ ಎನ್ನುವ ಸಂಶಯ ಮೂಡುವಲ್ಲಿಯವರೆಗೆ ಬಂದು ನಿಂತಿದೆ ಪ್ರಕರಣ. ಯುವತಿ ಪತ್ತೆಯಾಗುವವರೆಗೂ ಇದರ ಬಗ್ಗೆ ಸ್ಪಷ್ಟತೆ ಮೂಡುವುದು ಕಷ್ಟ.
ಈ ಮಧ್ಯೆ ರಮೇಶ ಜಾರಕಿಹೊಳಿ ಆರಂಭದಲ್ಲೇ ಬ್ಲ್ಯಾಕ್ ಮೇಲೆ ಸಂಬಂಧ ದೂರು ನೀಡದಿರುವುದೇಕೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿದೆ. 4 ತಿಂಗಳಿನಿಂದ ತಮಗೆ ಬ್ಲ್ಯಾಕ್ ಮೇಲೆ ಮಾಡಲಾಗುತ್ತಿದೆ ಎಂದು ಎಸ್ಐಟಿ ಮುಂದೆ ಹೇಳಿಕೆ ನೀಡಿರುವ ಅವರು ಸಚಿವರಾಗಿ ಎಲ್ಲ ಅಧಿಕಾರ ಹೊಂದಿದ್ದೂ ದೂರು ನೀಡಿ ಅವರನ್ನು ಒಳಗೆ ಲಹಾಕಿಸುವ ಕೆಲಸವನ್ನೇಕೆ ಮಾಡಲಿಲ್ಲ ಎನ್ನುವ ಪ್ರಶ್ನೆ ಮೂಡಿದೆ. ಹಾಗೊಮ್ಮೆ ಮಾಡಿದ್ದರೆ ಅಥವಾ ಆಗಲೇ ತಜ್ಞರ ಸಲಹೆ ಪಡೆದಿದ್ದರೆ ಇಷ್ಟೊಂದು ದೊಡ್ಡ ಅವಾಂತರದಿಂದ ಪಾರಾಗುತ್ತಿದ್ದರೇನೋ ಎಂದು ವಿಶ್ಲೇಷಿಸಲಾಗುತ್ತಿದೆ.
ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಭಾರಿ ಟ್ವಿಸ್ಟ್ : ಬೆಳಗಾವಿಯಲ್ಲಿ ಯುವತಿಯ ತಂದೆ ಕಿಡ್ನ್ಯಾಪ್ ದೂರು
ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ದಿನಕ್ಕೊಂದಲ್ಲ, ಕ್ಷಣಕ್ಕೊಂದು ತಿರುವು
ರಮೇಶ್ ಜಾರಕಿಹೊಳಿಯಿಂದ 5 ಕೋಟಿ ರೂ. ಸುಲಿಗೆ ಮಾಡಿತ್ತಾ ಸಿಡಿ ಗ್ಯಾಂಗ್?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ