Kannada NewsKarnataka News

ವಿಶೇಷ ಸಹಕಾರ ತರಬೇತಿ ಶಿಬಿರ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:   

ಸಹಕಾರ ಬ್ಯಾಂಕ್‌ಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಮಧ್ಯೆ ಪೈಪೋಟಿ ಇದ್ದು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೂಡ ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸುವಲ್ಲಿ ಸಹಕಾರ ಬ್ಯಾಂಕ್‌ಗಳು ಉತ್ತಮವಾದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಎನ್. ಗಂಗಣ್ಣ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ಹಾಗೂ ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ಜಿಲ್ಲೆಯ ಪಟ್ಟಣ ಸಹಕಾರ ಬ್ಯಾಂಕುಗಳ ಅಧ್ಯಕ್ಷರು, ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಹಿರಿಯ ಅಧಿಕಾರಿಗಳಿಗೆ ಏರ್ಪಡಿಸಿದ್ದ ಒಂದು ದಿನದ ರಾಜ್ಯಮಟ್ಟದ ವಿಶೇಷ ಸಹಕಾರ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಕಾರ್ಯನಿರ್ವಹಿಸುವುದು ವಿರಳವಾಗಿದ್ದು ಸಹಕಾರ ಸಂಘ, ಸಹಕಾರ ಬ್ಯಾಂಕುಗಳು ಹೆಚ್ಚಾಗಿ ಕಾರ್ಯನಿರ್ವಹಿಸುತ್ತಿವೆ. ದಕ್ಷತೆಯಿಂದ ಕಾರ್ಯ ನಿರ್ವಹಿಸಲು ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಕಾಲಕಾಲಕ್ಕೆ ಬದಲಾಗುವ ಕಾಯ್ದೆ ಕಾನೂನುಗಳನ್ನು ಅಳವಡಿಸಿಕೊಂಡು ಕಾರ್ಯಮಾಡಬೇಕಾಗುತ್ತದೆ. ಆ ಬದಲಾವಣೆಗಳಿಗೆ ತಕ್ಕಂತೆ ಮೇಲಿಂದ ಮೇಲೆ ಇಂತಹ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅನುಕೂಲಕರ ಎಂದರು.
ಮುಖ್ಯ ಅತಿಥಿಗಳಾದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಿ.ಎಸ್. ಸುಲ್ತಾನಪುರಿ ಅವರು  ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಂತ ಬಂಡವಾಳ ಹೆಚ್ಚಾಗಿ ಹೊಂದಿದ ಸಹಕಾರ ಬ್ಯಾಂಕ್‌ಗಳು ಭದ್ರತೆಯಿಂದ ಇರುತ್ತವೆ. ಭದ್ರತೆ ಇಲ್ಲದಿದ್ದರೆ ಗ್ರಾಹಕರು ಬ್ಯಾಂಕುಗಳ ಜೊತೆ ವ್ಯವಹಾರ ಮಾಡುವುದಿಲ್ಲಾ. ಬ್ಯಾಂಕುಗಳು ಲಾಭದಲ್ಲಿ ಭದ್ರತಾ ಠೇವಣಿಯನ್ನು ತೆಗೆದಿಡಬೇಕು, ಅಂದಾಗ ಮಾತ್ರ ಬ್ಯಾಂಕುಗಳು ಸಧೃಡದಿಂದ ಕಾರ್ಯನಿರ್ವಹಿಸುತ್ತವೆ ಎಂದರು.
ಮುಖ್ಯ ಅತಿಥಿಗಳಾದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್. ಅರುಣಕುಮಾರ ಅವರು ಮಾತನಾಡಿ ಆದಾಯ ತೆರಿಗೆಯು ಸಹಕಾರ ಬ್ಯಾಂಕ್ ಹಾಗೂ ಸಂಘಗಳಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಈ ಕುರಿತು ಒಂದು ಪ್ರತ್ಯೇಕ ಕಾನೂನನ್ನು ಜಾರಿಗೆ ತಂದರೆ ಅನುಕೂಲವಾಗುತ್ತದೆ. ಮೊಬೈಲ್ ಬ್ಯಾಂಕಿಂಗ್ ಎಂಬ ಆಧುನಿಕ ತಂತ್ರಜ್ಞಾನವನ್ನು ಜನರು ಬಳಸುತ್ತಿದ್ದು ಬ್ಯಾಂಕ್‌ಗಳು ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು. ತಂತ್ರಜ್ಞಾನದ ಬಳಕೆಯಿಂದ ಪಟ್ಟಣ ಸಹಕಾರ ಬ್ಯಾಂಕ್‌ಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ಅಧ್ಯಕ್ಷ  ಡಿ.ಟಿ. ಪಾಟೀಲ ಅವರು, ಆಡಳಿತ ಮಂಡಳಿಯವರು ಹಾಗೂ ಮುಖ್ಯಕಾರ್ಯನಿರ್ವಾಹಕರು ಸಾಮರಸ್ಯದಿಂದ ಕಾರ್ಯನಿರ್ವಹಿಸಬೇಕಾಗುತ್ತದೆ. ಬ್ಯಾಂಕಿನ ನಿಯಮಗಳನ್ನು ಆಡಳಿತ ಮಂಡಳಿಯವರಿಗೆ ತಿಳಿಸುವ ಜವಾಬ್ದಾರಿಯ ಕಾರ್ಯವನ್ನು ಮುಖ್ಯಕಾರ್ಯನಿರ್ವಾಹಕರು ಮಾಡಬೇಕಾಗುತ್ತದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್. ಅರುಣಕುಮಾರ ಅವರು ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಗಣಕೀಕರಣ ಹಾಗೂ ಹೊಸ ಆವಿಷ್ಕಾರಗಳು ವಿಷಯದ ಕುರಿತು ತರಬೇತಿ ನೀಡಿದರು.  ನಿವೃತ್ತ ಆರ್.ಬಿ.ಐ. ಅಧಿಕಾರಿ ಕೆ.ಎಸ್. ಮಹದೇವಸ್ವಾಮಿ ರೀಸೆಂಟ್ ಡೆವಲಪ್‌ಮೆಂಟ್ ಇನ್ ಕೊ-ಆಪ್. ಬ್ಯಾಂಕ್ಸ್, ಸರ್ವೈವಲ್ ಆಪ್ ಕೊ-ಆಪ್. ಬ್ಯಾಂಕ್ಸ್ ವಿಷಯದ ಕುರಿತು ಹಾಗೂ  ಹೆಚ್.ಎಸ್. ನಾಗರಾಜಯ್ಯ ನಿವೃತ್ತ ಸಹಕಾರ ಸಂಘಗಳ ಅಪರ ನಿಬಂಧಕರು ಇವರು ಸಹಕಾರ ವಲಯದಲ್ಲಿ ಇತ್ತೀಚಿನ ಬೆಳವಣಿಗೆಗಳು, ವಾರ್ಷಿಕ ಮಹಾಸಭೆ, ಆಡಳಿತ ಮಂಡಳಿ ಚುನಾವಣೆ, ಇತ್ತೀಚಿನ ಸಹಕಾರ ಕಾಯ್ದೆ ತಿದ್ದುಪಡಿಗಳು ವಿಷಯದ ಕುರಿತು ತರಬೇತಿ ನೀಡಿದರು.
ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ನಿನ ಅಧ್ಯಕ್ಷ  ಬಿ.ಡಿ. ಪಾಟೀಲ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ  ಆರ್.ಕೆ. ಪಾಟೀಲ, ಶಿವನಗೌಡ ಎಸ್. ಬಿರಾದರ್, ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ನಿರ್ದೇಶಕ  ಎಸ್.ಎಫ್. ದೊಡಗೌಡರ, ಜಿಲ್ಲಾ ಸಹಕಾರ ಯೂನಿಯನ್ನಿನ ಉಪಾಧ್ಯಕ್ಷ  ಬಿ.ಎನ್. ಉಳ್ಳಾಗಡ್ಡಿ, ನಿರ್ದೇಶಕ ಕೆ.ಎಮ್. ಬಡಗಾಂವಿ, ಸಹಕಾರ ಸಂಘಗಳ ಉಪನಿಬಂಧಕ  ಕೆ.ಎಲ್. ಶ್ರೀನಿವಾಸ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಉಪನಿರ್ದೇಶಕ  ಬಿ. ಸುರೇಶರಾವ್ ವೇದಿಕೆಯ ಮೇಲಿದ್ದರು. ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯಕಾರ್ಯನಿರ್ವಹಣಾಧಿಕಾರಿ  ಎಸ್.ವಿ. ಹಿರೇಮಠ ಅವರು ನಿರೂಪಿಸಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಸಹಾಯಕ ಯೋಜನಾಧಿಕಾರಿ ಹಾಗೂ ಸಮನ್ವಯಾಧಿಕಾರಿ ಹೆಚ್.ಡಿ. ಮಂಜುನಾಥ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button