ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದೇಶಾದ್ಯಂತ ಕೊರೊನಾ ಮಹಾಮಾರಿಯ ಅಟ್ಟಹಾಸ ಮುಂದುವರಿದಿದ್ದು, ಜನರನ್ನು ತಲ್ಲಣಗೊಳಿಸಿದೆ. ಹೀಗಾಗಿ ಕೊರೊನಾ ನಿಯಂತ್ರಣಕ್ಕಾಗಿ ತಾಲೂಕಿನ ಸುಳೇಭಾವಿ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿ ಸೇರಿ ಎಲ್ಲ ದೇವರಿಗೆ ಮಂಗಳವಾರ ವಿಶೇಷ ಪೂಜೆ-ಅಭಿಷೇಕ ಮಾಡಿ ಪ್ರಾರ್ಥನೆ ಸಲ್ಲಿಸಲಾಯಿತು.
ಕೊರೊನಾ ನಿಯಂತ್ರಿಸುವಂತೆ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ನೇತೃತ್ವದಲ್ಲಿ ಎಲ್ಲ ದೇವಸ್ಥಾನ ಕಮಿಟಿಗಳ ಪ್ರಮುಖರು, ಪೂಜಾರಿಗಳು ವಿಶೇಷ ಪೂಜೆ ಸಲ್ಲಿಸಿದರು. ಕೊರೊನಾ ನಿಯಂತ್ರಣಕ್ಕೆ ಬಂದು ಜನರು ನೆಮ್ಮದಿಯಿಂದ ಬದುಕುವಂತೆ ಮಾಡಬೇಕು ಎಂದು ದೇವರಲ್ಲಿ ಪ್ರಾರ್ಥಿಸಿದರು.
ಶ್ರೀ ಮಹಾಲಕ್ಷ್ಮಿ ದೇವಿ, ಶ್ರೀ ಕಲ್ಮೇಶ್ವರ, ಶ್ರೀ ವೀರಭದ್ರೇಶ್ವರ, ಶ್ರೀ ಯಲ್ಲಮ್ಮ ದೇವಿ, ಶ್ರೀ ಶಾಖಾಂಬರಿ ದೇವಿ, ಶ್ರೀ ಬನಶಂಕರಿ ದೇವಿ, ಶ್ರೀ ಮಹಾರಾಣಿ ದೇವಿ, ಶ್ರೀ ದುರ್ಗಾದೇವಿ, ಶ್ರಿ ಗಣೇಶ, ಶ್ರೀ ಮಾರುತಿ, ಶ್ರೀ ಬ್ರಹ್ಮ ದೇವರು, ಶ್ರೀ ವಿಠ್ಠಲ-ರುಕ್ಮೀಣಿ ದೇವರಿಗೆ ಅಭಿಷೇಕ-ವಿಶೇಷ ಪೂಜೆ ಸಲ್ಲಿಸಲಾಯಿತು.
ಗ್ರಾಮದ ಹಿರಿಯರಾದ ಬಸನಗೌಡ ಹುಂಕರಿಪಾಟೀಲ ಪಾಟೀಲ, ಕೊರೊನಾ ಮಹಾಮಾರಿಯಿಂದ ಇಡೀ ಜನಜೀವನವೇ ಅಸ್ತವ್ಯಸ್ತವಾಗಿದೆ. ಹೀಗಾಗಿ ಅನೇಕ ಕುಟುಂಬಗಳಿಗೆ ನೆಮ್ಮದಿ ಇಲ್ಲದಂತಾಗಿದೆ. ಹೀಗಾಗಿ ಕೊರೊನಾ ಸೋಂಕು ಹರಡದಂತೆ ಕೂಡಲೇ ಇದು ನಿಯಂತ್ರಣಕ್ಕೆ ಬರಬೇಕು ಎಂದು ಎಲ್ಲ ದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಗಿದೆ ಎಂದರು.
ಗ್ರಾಮದ ಮುಖಂಡ ಶಶಿಕಾಂತ ಸಂಗೊಳ್ಳಿ ಮಾತನಾಡಿ, ಐದಾರು ತಿಂಗಳಿಂದ ಕೊರೊನಾ ಸೋಂಕು ವ್ಯಾಪಕವಾಗಿ ಹರಡಿದೆ. ಕೆಲವು ತಿಂಗಳುಗಳ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಬಾಘಿಲು ಬಂದ್ ಮಾಡಿ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ಈಗ ಒಂದು ತಿಂಗಳಿಂದ ಬಾಗಿಲು ತೆರೆದಿದ್ದು, ಸ್ಯಾನಿಟೈಸರ್, ಕಡ್ಡಾಯ ಮಾಸ್ಕ್ ವ್ಯವಸ್ಥೆ ಮಾಡಲಾಗಿದೆ. ಸೋಂಕು ನಿಯಂತ್ರಣಕ್ಕೆ ಬರಲಿ ಎಂಬ ಕಾರಣಕ್ಕೆ ಎಲ್ಲ ದೇವರಿಗೆ ಅಭಿಷೇಕ ನಡೆಸಲಾಗಿದೆ ಎಂದು ತಿಳಿಸಿದರು.
ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ಸೇರಿದಂತೆ ಎಲ್ಲ ಕಮಿಟಿಯ ಪದಾಧಿಕಾರಿಗಳು, ದೇವಸ್ಥಾನದ ಪೂಜಾರಿಗಳು ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ