ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾಗವಾಡ ತಾಲೂಕಿನ ಉಗಾರ ಖುರ್ದ ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿ ಜಾತ್ರೆ ರದ್ದುಪಡಿಸಲಾಗಿದೆ ಎಂದು ಪುರಸಭೆ ವತಿಯಿಂದ ಆದೇಶಿಸಲಾಗಿದೆ.
ಜಿಲ್ಲೆಯಲ್ಲಿ ಕೊರೊನಾ ರಣಕೇಕೆಯಿಂದ ಧಾರ್ಮಿಕ ಕೇಂದ್ರಗಳು, ದೇವಸ್ಥಾನಕ್ಕೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ ಎಂದು ಆದೇಶಿಸಲಾಗಿದೆ.
ಈ ಕುರಿತು ಮಾತನಾಡಿದ ಕಾಗವಾಡ ತಹಶೀಲ್ದಾರ ಪ್ರಮೀಳಾ ದೇಶಪಾಂಡೆ ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಜೋರಾಗಿದೆ. ಸರಕಾರದ ಆದೇಶದಂತೆ ಜಾತ್ರೆಗಳ ಆಚರಣೆಗೆ ಯಾವುದೇ ಅನುಮತಿ ನೀಡಲಾಗುವುದಿಲ್ಲ. ಈ ಕೊವಿಡ್ ಸಮಯ ಹಾಗೂ ಲಾಕಡೌನ್ ನಿಯಮ ಉಲ್ಲಂಘಿಸಿ ಜಾತ್ರೆ ಮಾಡಿದರೆ ಕೋವಿಡ್ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕಾಗವಾಡ ಪೊಲೀಸ್ ಠಾಣೆ ಪಿಎಸ್ಐ ಶಿವರಾಜ ನಾಯ್ಕವಾಡಿ ಭೇಟಿ ನೀಡಿ ಕೋವಿಡ್ ಹಿನ್ನೆಲೆಯಲ್ಲಿ ಜಾತ್ರೆ ಮಾಡಲು ಅವಕಾಶವಿರುವುದಿಲ್ಲ. ನಿಯಮ ಉಲ್ಲಂಘಿಸಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಹಾಗೂ ಶುಕ್ರವಾರ 6 ಗಂಟೆಯಿಂದ ಸೋಮವಾರ ಬೆಳ್ಳಿಗೆ 6 ಗಂಟೆಯವರೆಗೆ 144 ಸೆಕ್ಷನ್ ಪ್ರಕಾರ ಸಂಪೂರ್ಣ ಲಾಕಡೌನ್ ಇರುವುದರಿಂದ ಸಾರ್ವಜನಿಕರು ಕಟ್ಟು ನಿಟ್ಟಾಗಿ ಲಾಕಡೌನ ನಿಯಮ ಪಾಲಿಸಬೇಕು, ಅನಾವಶ್ಯಕ ಹೊರಗಡೆ ಬಂದು ನಿಯಮ ಉಲ್ಲಂಘಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇನ್ನು ಜಾತ್ರೆ ನಿಮಿತ್ತ ಜನರು ದೇವಸ್ಥಾನ ನೆವೇದ್ಯ, ದೀಡನಮಸ್ಕಾರ, ಹರಕೆ ಸೇರಿದಂತೆ ದೇವಸ್ಥಾನ ಸುತ್ತಮುತ್ತ ಕಂಡು ಬಂದರೆ ಅಂತವರ ಮೇಲೆಯೂ ಸಹ ಕ್ರಮ ಜರುಗಿಸಲಾಗುವುದು ಎಂದು ಸಾರ್ವಜನಿಕರಿಗೆ ಪುರಸಭೆ ಪ್ರಕಟಣೆ ಮುಖಾಂತರ ಎಚ್ಚರಿಸಲಾಗಿದೆ.
ಈ ಸಮಯದಲ್ಲಿ ಶ್ರೀ ಲಕ್ಷ್ಮೀದೇವಿ ಆಡಳಿತ ಮಂಡಳಿಯ ಅಧ್ಯಕ್ಷರಾದ ದಾದ್ಬಾ ಥೋರುಶೆ, ಆರ್ಚಕರಾದ ರಾಜು ಗುರುವ, ಪುರಸಭೆ ಹೆಲ್ತ್ ಇನ್ಸಪೆಕ್ಟರ್ ಕರೆಪ್ಪಾ ಗಾವಡೆ, ಅಧ್ಯಕ್ಷರಾದ ಮಂಜುನಾಥ ತೇರದಾಳೆ, ದೀಪಕ ಪಾಟೀಲ, ರವಿ ಹಳ್ಳೂರ, ವಿದ್ಯಾನಂದ ನಾಗಾವೆ, ಮಾಜಿ ಜಿಪಂ ಸದಸ್ಯ ಸುಭಾಷ ಖುರಾಡೆ, ಮಾಜಿ ತಾಪಂ ಸದಸ್ಯ ರುಸ್ತುಂ ಸುತಾರ, ಬಾಳಕೃಷ್ಣ ಪಾಟೀಲ, ಪಿ.ಎಸ್ ಪಾಟೀಲ, ಕಾಗವಾಡ ಪೊಲೀಸ್ ಠಾಣೆಯ ಬಾಳಪ್ಪ ಸಣ್ಣಕ್ಕಿ, ಪಿಸಿ ಬಿರಪ್ಪಾ ವ್ಯಾಪಾರಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ