ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಉಪಕರಣ ಖರೀದಿ ವಿಚಾರದಲ್ಲಿ ಒಂದೇ ಒಂದು ರೂಪಾಯಿ ಕೂದ ಅವ್ಯವಹಾರ ನಡೆದಿಲ್ಲ. ಅವ್ಯವಹಾರ ನಡೆದಿದ್ದು ಸಾಬೀತಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಆರೋಗ್ಯ ಸಚಿವ ಶ್ರೀರಾಮುಲು ಪುನರುಚ್ಛರಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಸುದ್ದಿಗೋಷ್ಠಿ ಬಳಿಕ ಮಾತನಾಡಿದ ಶ್ರೀರಾಮುಲು, ಕಳೆದ ಬಾರಿ ಅವರು ಆರೋಗ್ಯ ಇಲಾಖೆಯಲ್ಲಿ ಸಾವಿರಾರು ಕೋಟಿ ರೂ ಅವ್ಯವಹಾರ ಆಗಿದೆ ಎಂದು ಆರೋಪ ಮಾಡಿದರು. ಅದಕ್ಕೆ ನಾವು ಉತ್ತರ ಕೊಟ್ಟಿದ್ದೇವೆ. ಆರೋಗ್ಯ ಇಲಾಖೆಯಿಂದ ಕೇವಲ 290 ಕೋಟಿ ರೂ ಮಾತ್ರ ಖರ್ಚು ಆಗಿದೆ ಎಂದು ತಿಳಿಸಿದ್ದೆ. ಈಗ ಸಿದ್ದರಾಮಯ್ಯ ಅವರು ಆರೋಗ್ಯ ಇಲಾಖೆ 750 ಕೋಟಿ ಖರ್ಚು ಮಾಡಿದೆ ಎಂದು ಹೇಳುತ್ತಿದ್ದಾರೆ. ನಾನು ನನ್ನ ಮಾತಿಗೆ ಈಗಲೂ ಬದ್ಧನಾಗಿದ್ದೇನೆ. ಉಪಕರಣಗಳ ಡಿಮ್ಯಾಂಡ್ ಇದ್ದಂಥ ಸಂದರ್ಭದಲ್ಲಿ ಬೆಲೆ ಏರು ಪೇರು ಆಗಿರಬಹುದು ಅಷ್ಟೇ. ಆದರೆ, ಇಲಾಖೆಯಲ್ಲಿ ಒಂದೇ ಒಂದು ರೂಪಾಯಿ ಅವ್ಯವಹಾರ ಆಗಿದ್ದು ಸಾಬೀತಾದರೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು.
ಇದೇ ವೇಳೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ಕೊರೋನಾ ಸಮಯದಲ್ಲಿ ಸಿದ್ದರಾಮಯ್ಯ ರಾಜಕಾರಣ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಾಸಿಗೆ ದಿಂಬಿನಲ್ಲಿ ಭ್ರಷ್ಟಾಚಾರ ಆಗಿತ್ತು. ಆರೋಗ್ಯ ಇಲಾಖೆಯಲ್ಲಿ 400-500 ಕೋಟಿ ರೂ ಅಕ್ರಮ ಆಗಿತ್ತು. ಈ ಬಗ್ಗೆ ದಾಖಲೆ ಕೂಡ ಬಿಡುಗಡೆ ಮಾಡುತ್ತೇವೆ ಎಂದು ಮಾಜಿ ಅಬಕಾರಿ ಸಚಿವರೂ ಆದ ಅವರು ಹೇಳಿದರು.
ಸರ್ಕಾರ ಎಲ್ಲಾ ದಾಖಲಾತಿ ಇಟ್ಟುಕೊಂಡಿದ್ದು, ಶೀಘ್ರದಲ್ಲೇ ಕೊಡುತ್ತೇವೆ. ಸರ್ಕಾರದ ವಿರುದ್ಧ ಮಾತನಾಡೋಕೆ ವಿಪಕ್ಷ ನಾಯಕರಿಗೆ ಯಾವುದೇ ವಿಷಯ ಇಲ್ಲ. ಹೀಗಾಗಿ ಇಂಥ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ