ಪ್ರಗತಿವಾಹಿನಿ ಸುದ್ದಿ, ತಿರುಪತಿ (ಆಂಧ್ರ ಪ್ರದೇಶ): ಬುಧವಾರ ರಾತ್ರಿ ತಿರುಪತಿ ತಿರುಮಲ ದೇವಸ್ಥಾನದ ಟಿಕೆಟ್ ಹಂಚಿಕೆ ವೇಳೆ ಕಾಲ್ತುಳಿತ ಸಂಭವಿಸಿದ್ದು, ಮಹಿಳೆ ಸೇರಿ 6 ಜನರು ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಇನ್ನೂ ಹಲವರು ಗಾಯಗೊಂಡಿದ್ದಾರೆ.
ವೈಕುಂಠ ದ್ವಾರ ದರ್ಶನದ ಟಿಕೆಟ್ ತೆಗೆದುಕೊಳ್ಳುವ ವೇಳೆ ಭಾರಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಉಂಟಾಗಿದೆ. ಟಿಕೆಟ್ ಪಡೆದುಕೊಳ್ಳಲು ಏಕಕಾಲಕ್ಕೆ ಸಾವಿರಾರು ಮಂದಿ ನುಗ್ಗಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಬುಧವಾರ ರಾತ್ರಿ ಈ ಘಟನೆ ಸಂಭವಿಸಿದ್ದು, ಸಾವಿನ ಸಂಖ್ಯೆ ಏರುವ ಭೀತಿ ಉಂಟಾಗಿದೆ.
ಕೇವಲ ಒಂದು ಮೃತದೇಹವನ್ನು ಗುರುತಿಸಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಟ್ರಸ್ಟ್ ಅಧ್ಯಕ್ಷ ಬಿಆರ್ ನಾಯ್ಡು ಹೇಳಿದ್ದಾರೆ. ದೇವಾಲಯದಲ್ಲಿ ವೈಕುಂಠ ಏಕಾದಶಿ ದರ್ಶನದ ವಿಶೇಷ ಟಿಕೆಟ್ ಪಡೆಯುವ ವೇಳೆ ಈ ದುರಂತ ಸಂಭವಿಸಿದೆ.
ತಿರುಪತಿ ತಿರುಮಲ ದೇವಾಲಯದ ವಿಷ್ಣುನಿವಾಸಂ ಬಳಿ ಈ ಕಾಲ್ತುಳಿತ ಸಂಭವಿಸಿದೆ. ಬುಧವಾರ ಸಂಜೆಯಿಂದಲೇ ವೈಕುಂಠ ಏಕಾದಶಿ ದರ್ಶನ ದ್ವಾರದ ವಿಶೇಷ ಟಿಕೆಟ್ ಪಡೆಯಲು ದೇವಾಲಯದ ವಿವಿಧ ಪ್ರದೇಶಗಳಲ್ಲಿ ಅಪಾರ ಸಂಖ್ಯೆಯ ಭಕ್ತರು ಜಮಾಯಿಸಿದ್ದರು. ಅಪಾರ ಸಂಖ್ಯೆಯ ಭಕ್ತರನ್ನು ನಿಯಂತ್ರಣ ಮಾಡಲು ವಿಫಲವಾದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ.
ಜನವರಿ 10 ರಂದು ವೈಕುಂಠ ಏಕಾದಶಿಯ ಹಿನ್ನೆಲೆಯಲ್ಲಿ ತಿರುಪತಿಯ ಕೌಂಟರ್‌ಗಳಲ್ಲಿ ನಾಳೆ ಬೆಳಗ್ಗೆಯಿಂದ ಟಿಕೆಟ್ ವಿತರಿಸಲು ನಿರ್ಧರಿಸಲಾಗಿತ್ತು. ಡಿಎಸ್ಪಿ ಒಬ್ಬರು ಗೇಟ್‌ಗಳನ್ನು ತೆರೆದಿದ್ದು, ತಕ್ಷಣವೇ ಎಲ್ಲರೂ ಮುಂದಕ್ಕೆ ತಳ್ಳಿದ್ದರಿಂದ ಈ ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ನಾಯ್ಡು ಹೇಳಿದರು. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವೈಕುಂಠ ಏಕಾದಶಿ ದರ್ಶನದ ಟಿಕೆಟ್ ಪಡೆಯುವ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ತಮಿಳುನಾಡಿನ ಸೇಲಂ ಮೂಲದ ಮಹಿಳೆ ಸೇರಿದಂತೆ 7 ಭಕ್ತರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿರುವ ಭಕ್ತರ ಗುರುತುಗಳು ಇನ್ನೂ ಸಹ ಪತ್ತೆಯಾಗಿಲ್ಲ. ಘಟನೆಯಲ್ಲಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕಾಲ್ತುಳಿತ ಪ್ರಕರಣದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಘಟನೆಯಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಿರಿಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತೆರಳಬೇಕು, ಭಕ್ತರಿಗೆ ಸೂಕ್ತ ವ್ಯವಸ್ಥೆ ಮಾಡಿ, ಪರಿಹಾರ ಕಾರ್ಯವನ್ನು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ.
ವೈಕುಂಠ ಏಕಾದಶಿ ದರ್ಶನದ ಟಿಕೆಟ್ ವಿತರಣೆ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದ ಹಿನ್ನಲೆಯಲ್ಲಿ ಟಿಕೆಟ್ ಹಂಚಿಕೆಯನ್ನು ತತ್‌ಕ್ಷಣದಿಂದ ರದ್ದುಗೊಳಿಸಲಾಗಿದೆ. ಗುರುವಾರ ಮುಂಜಾನೆಯಿಂದ ಟಿಕೆಟ್ ನೀಡುವುದನ್ನು ಮುಂದುವರೆಸಲಿದೆ.
ಜನವರಿ 10 ರಿಂದ 19ರ ತನಕ ತಿರುಪತಿ ತಿರುಮಲ ದೇವಾಲಯದಲ್ಲಿ ವೈಕುಂಠ ಏಕಾದಶಿ ದರ್ಶನದ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಈ ಟಿಕೆಟ್ ಪಡೆಯಲು ಇಂದು ಮುಂಜಾನೆಯಿಂದಲೇ ಸಾವಿರಾರು ಭಕ್ತರು ತಿರುಪತಿಯಲ್ಲಿ ಕಾದು ಕುಳಿತಿದ್ದರು. ಟಿಕೆಟ್ ನೀಡುವಾಗ ರಾತ್ರಿ ಕಾಲ್ತುಳಿತ ಸಂಭವಿಸಿದೆ.
ಟಿಟಿಡಿ ವೈಕುಂಠ ಏಕಾದಶಿ ದರ್ಶನದ ಟಿಕೆಟ್ ಪಡೆಯಲು ಉಂಟಾಗುವ ನೂಕು ನುಗ್ಗಲು ತಪ್ಪಿಸಲು 8 ಕೌಂಟರ್‌ಗಳಲ್ಲಿ ಟಿಕೆಟ್ ನೀಡುವ ವ್ಯವಸ್ಥೆ ಮಾಡಿದೆ. ಈ ಕೇಂದ್ರಗಳಲ್ಲಿ ನೂಕು ನುಗ್ಗಲು ತಪ್ಪಿಸಲು ಟಿಟಿಡಿ ಸಿಬ್ಬಂದಿಯನ್ನು ಗಸ್ತಿಗೆ ನಿಯೋಜನೆ ಮಾಡಲಾಗಿತ್ತು. ಆದರೆ ಭಾರೀ ಸಂಖ್ಯೆಯಲ್ಲಿ ಭಕ್ತರು ಸೇರಿರುವ ಕಾರಣ ಅವರನ್ನು ನಿಯಂತ್ರಣ ಮಾಡುವುದು ಕಷ್ಟವಾಗಿ ಈ ದುರ್ಘಟನೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ