ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕೊರೋನಾ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಲ್ಲೇ ಮುಚ್ಚಲ್ಪಟ್ಟಿರುವ ಶಾಲೆಗಳನ್ನು ಆರಂಭಿಸುವ ವಿಷಯದಲ್ಲಿ ತೀವ್ರ ಗೊಂದಲದಲ್ಲಿರುವ ಶಿಕ್ಷಣ ಸಚಿವ ಸುರೇಶ ಕುಮಾರ ಇದೀಗ ಶಾಸಕರಿಗೆ ಪತ್ರ ಬರೆದಿದ್ದಾರೆ.
ಶಾಲೆಗಳನ್ನು ಆರಂಭಿಸುವ ಕುರಿತು ಸಲಹೆ ಜೊತೆಗೆ, ಶಾಲೆ ಆರಂಭವಾದರೆ ಯಾವುದೇ ರೀತಿಯ ಅಪಾಯವಾಗದಂತೆ ಮುನ್ನಡೆಸಲು ಜನಪ್ರತಿನಿಧಿಗಳ ಸಹಕಾರ ಯಾವರೀತಿಯಲ್ಲಿ ಇರುತ್ತದೆ ಎನ್ನುವುದನ್ನು ತಿಳಿಯಲು ಅವರು ಪತ್ರ ಬರೆದಿದ್ದಾರೆ.
ಶಾಲೆಗಳನ್ನು ಆರಂಭಿಸುವ ವಿಷಯದಲ್ಲಿ ಸರಕಾರ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಕೆಲವು ರಾಜ್ಯಗಳು ಈಗಾಗಲೆ ಶಾಲೆಗಳನ್ನು ಆರಂಭಿಸಿವೆ. ಹಾಗಾಗಿ ಈ ವಿಷಯದಲ್ಲಿ ನಿಮ್ಮ ಸಲಹೆ ನೀಡಿ. ಜೊತೆಗೆ ಶಾಲೆ ಆರಂಭವಾದ ನಂತರ ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ನಿಮ್ಮ ಸಲಹೆ ಮತ್ತು ಪಾತ್ರ ಹೇಗಿರುತ್ತದೆ ಎನ್ನುವುದನ್ನೂ ತಿಳಿಸಿ ಎಂದು ಪತ್ರದಲ್ಲಿ ಬರೆದಿದ್ದಾರೆ.
ಕೊರೋನಾದಿಂದಾಗಿ ಶೈಕ್ಷಣಿಕ ವ್ಯವಸ್ಥೆ ತೀವ್ರ ಇಕ್ಕಟ್ಟಿಗೆ ಸಿಲುಕಿದೆ. ಸಾಮಾಜಿಕ ವ್ಯವಸ್ಥೆಯನ್ನು ಸರಿದಾರಿಗೆ ತರುವುದರ ಜೊತೆಗೆ ಶಾಲೆಗಳನ್ನೂ ಆರಂಭಿಸಬೇಕಿದೆ. ಶಾಲೆಗಳನ್ನು ಇನ್ನೂ ಆರಂಭಿಸದಿರುವುದರಿಂದ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ಸೇರಿದಂತೆ ಹಲವಾರು ಸಾಮಾಜಿಕ ಪಿಡುಗುಗಳಿಗೂ ಅವಕಾಶವಾಗುತ್ತಿದೆ. ಹಾಗಾಗಿ ಶಾಲೆಗಳ ಆರಂಭ ಮತ್ತು ಸಮುದಾಯದ ಸಹಕಾರ ಕುರಿತು ಸಲಹೆಕೊಡಿ ಎಂದು ಕೋರಿದ್ದಾರೆ.
ಶಾಲೆಗಳನ್ನು ಹೆೇಗೆ ಆರಂಭಿಸಬೇಕು, ಆರಂಭಿಸುವುದಾದಲ್ಲಿ ಯಾವ ತರಗತಿಯನ್ನು ಮೊದಲು ಆರಂಭಿಸಬೇಕು ಎನ್ನುವುದನ್ನೂ ಸಲಹೆ ಕೊಡಿ ಎಂದು ಕೇಳಿದ್ದಾರೆ. ಶಾಲೆಗಳನ್ನು ಆರಂಭಿಸಲಾಗದಿರುವುದರಿಂದ ಜಾರಿಗೊಳಿಸಲಾಗಿರುವ ಆನ್ಲೈನ್ ಶಿಕ್ಷಣ, ವಿದ್ಯಾಗಮ ಮತ್ತು ದೂರದರ್ಶನದ ಮೂಲಕ ಪಾಠ ಮೊದಲಾದ ಯೋಜನೆಗಳನ್ನೂ ಅವರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ