Kannada NewsKarnataka NewsLatest

*ಪುಟ್ಟ ಮಗುವಿಗೆ ಸಿಗರೇಟ್, ಹೀಟರ್ ನಿಂದ ಸುಟ್ಟು ಮಲತಂದೆಯಿಂದ ಹಲ್ಲೆ*

ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಪುಟ್ಟ ಮಕ್ಕಳ ಮೇಲಿನ ದೌರ್ಜನ್ಯ, ಹಿಂಸೆ ಪ್ರಕರಣಗಳು ಹೆಚ್ಚುತ್ತಿವೆ. ಹೆತ್ತ ತಾಯಿಯೇ ಮಗುವನ್ನು ಕೂಡಿ ಹಾಕಿ ಹಿಂಸಿಸಿದ ಎರಡು ಪ್ರಕರಣಗಳು ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿತ್ತು. ಈ ಘಟನೆಗಳು ಮಾಸುವ ಮುನ್ನವೇ ಮಲತಂದೆಯೊಬ್ಬ ಮಗುವನ್ನು ಅಮಾನವೀಯವಾಗಿ ಹಿಂಸಿಸಿರುವ ಘಟನೆ ನಡೆದಿದೆ.

ಮಲತಂದೆ 4 ವರ್ಷದ ಮಗುವನ್ನು ಸಿಗರೇಟ್, ವಾಟಟರ್ ಹೀಟರ್ ನಿಂದ ಸುಟ್ಟು, ಮನಬಂದಂತೆ ಹಲ್ಲೆ ನಡೆಸಿದ್ದು, ಕಣ್ಮುಂದೆ ಮಗುವಿಗೆ ಚಿತ್ರಹಿಂಸೆ ನೀಡುತ್ತಿದ್ದರು ಹೆತ್ತ ತಾಯಿ ಸುಮ್ಮನಿರುವುದನ್ನು ಕಂಡು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹೆಬ್ಬಗೋಡಿನಲ್ಲಿ ಈ ಘಟನೆ ನಡೆದಿದೆ. ಮಲತಂದೆ ಮಂಜುನಾಥ್ ಎಂಬಾತ 4 ವರ್ಷದ ಮಗು ದಿಶಾ ಎಂಬುವವಳ ಮೇಲೆ ಕ್ರೌರ್ಯ ಮೆರೆದಿದ್ದಾನೆ. ಮಂಜುನಾಥ್ ಚಿಕ್ಕಬಳ್ಳಾಪುರ ಮೂಲದವನು ಎನ್ನಲಾಗಿದೆ. ಪತಿ ಕಳೆದುಕೊಂಡು ಇಬ್ಬರು ಪುಟ್ಟಮಕ್ಕಳೊಂದಿಗೆ ಬದುಕು ಸಾಗಿಸುತ್ತಿದ್ದ ಮಂಜುಳಾ ಎಂಬ ಮಹಿಳೆ ಜೊತೆ ವಾಸವಾಗಿದ್ದಾನೆ ಎನ್ನಲಾಗಿದೆ.

ಕುಡಿತದ ದಾಸನಾಗಿದ್ದ ಮಂಜುನಾಥ್, ಪುಟ್ಟ ಮಗುವನ್ನು ಹೊಡೆಯುವುದು, ರಾತ್ರಿ ಸಿಗರೇಟ್, ಸ್ನ್ಯಾಕ್ಸ್ ತರುವಂತೆ ಅಂಗಡಿಗೆ ಕಳುಹಿಸುವುದು ಮಾಡುತ್ತಿದ್ದ. ಮಗು ಒಪ್ಪದಿದ್ದಾಗ ಹೀಟರ್ ನಿಂದ ಸುಡುವುದು, ಸಿಗರೇಟ್ ನಿಂದ ಸುಡುವುದು, ಕುಕ್ಕರ್ ನಿಂದ ಹೊಡೆಯುವುದು ಮಾಡುತ್ತಿದ್ದ. ಇದನ್ನು ನೋಡಿ ನೋಡಿ ರೋಸಿಹೋಗಿದ್ದ ಸ್ಥಳೀಯರು ನಿನ್ನೆ ರಾತ್ರಿ ಮಗುವನ್ನು ರಕ್ಷಿಸಿ, ಮಂಜುನಾಥ್ ನನ್ನು ಹಿಡಿದು ಧರ್ಮದೇಟು ನೀಡಿದ್ದಾರೆ. ಅಲ್ಲದೇ ಹೆಬ್ಬಗೋಡಿ ಪೊಲೀಸ್ ಠಾಣೆಗೆ ಕರೆದೊಯ್ದು ಪೊಲೀಸರಿಗೆ ಒಪ್ಪಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button