
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಉತ್ತರ ಕ್ಷೇತ್ರದ ಟಿಕೆಟ್ ವಂಚಿತ ಅನಿಲ ಬೆನಕೆ ಬುಧವಾರ ಸಂಜೆ ಬೆಳಗಾವಿಗೆ ವಾಪಸ್ಸಾಗಿದ್ದು, ಟಿಕೆಟ್ ಬದಲಾವಣೆಯಾಗಿ ನನಗೇ ಸಿಗುವ ಆಶಯವಿದೆ ಎಂದಿದ್ದಾರೆ.
ಟಿಕೆಟ್ ಫೈಟ್ ಗಾಗಿ ನವದೆಹಲಿಗೆ ಹೋಗಿದ್ದ ಬೆನಕೆ ಇದೀಗ ವಾಪಸ್ಸಾಗಿದ್ದಾರೆ. ಡಾ.ರವಿ ಪಾಟೀಲ ಅವರಿಗೆ ಬೆಳಗಾವಿ ಉತ್ತರದ ಟಿಕೆಟ್ ನೀಡಲಾಗಿದೆ.
ಕಾರ್ಯಕರ್ತರನ್ನು ಮಾತನಾಡಿಸಿ ಹೋಗೋಣ ಎಂದು ಬಂದಿದ್ದೇನೆ. ಈಗಲೂ ಟಿಕೆಟ್ ನನಗೆ ಕೊಡುವ ಆಶಯವಿದೆ. ಹಾಗಾಗಿ ನಾಳೆ ಪುನಃ ಬೆಂಗಳೂರಿಗೆ ಹೋಗಿ ಪ್ರಯತ್ನಿಸುತ್ತೇನೆ. ಪಕ್ಷದ ಹಿರಿಯರು ಪ್ರಯತ್ನ ಬಿಡಬೇಡಿ ಎಂದು ಹೇಳಿದ್ದಾರೆ ಎಂದು ಅವರು ತಿಳಿಸಿದರು.
ನಾನು ಭಾರತೀಯ ಜನತಾ ಪಾರ್ಟಿ ಬಿಡುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ನವರು ಕರೆದೂ ಇಲ್ಲ, ಕರೆದರೂ ಹೋಗುವುದಿಲ್ಲ. ನನ್ನ ಮನಸ್ಸಿನಲ್ಲಿ ಬೇರೆ ಯಾವುದೇ ಯೋಚನೆ ಇಲ್ಲ, ತಪ್ಪಿರುವ ಟಿಕೆಟ್ ಪಡೆಯುತ್ತೇನೆನ್ನುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.
ಅನಿಲ ಬೆನಕೆ ಬೆಂಬಲಿಗರು ಬುಧವಾರ ಪ್ರತಿಭಟನೆ ಮುಂದುವರಿಸಿದ್ದಾರೆ. ಅನಿಲ ಬೆನಕೆಗೆ ಟಿಕೆಟ್ ಕೊಡದಿದ್ದಲ್ಲಿ ಪಕ್ಷಕ್ಕೆ ರಾಜಿನಾಮೆ ನೀಡುವುದಾಗಿ ಹಲವು ಪದಾಧಿಕಾರಿಗಳು, ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ.
 
					 
				 
					 
					 
					 
					
 
					 
					 
					


