*ಕೃಪಾ ಆಳ್ವಾರನ್ನು ವಿದೇಶಕ್ಕೆ ಕಳುಹಿಸಿದ್ದು ಯಾಕೆ?*: *ಡಿ.ಕೆ.ಶಿವಕುಮಾರ್ ಸಿಡಿ ಲಿಂಕ್ ಬಿಚ್ಚಿಟ್ಟ ಹೆಚ್.ಡಿ.ಕುಮಾರಸ್ವಾಮಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ತಮ್ಮ ಹೆಸರು ಪ್ರಸ್ತಾಪ ಮಾಡಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಇದು ಟ್ರೈಲರ್ ಪಿಕ್ಚರ್ ಅಭಿ ಬಾಕಿ ಹೈ ಎಂದಿದ್ದಾರೆ. ಪ್ರಿಯಾಂಕ್ ಖರ್ಗೆ ಅವರೆ ಇಂತಹ ಅದೆಷ್ಟು ಟ್ರೈಲರ್ ನಾನು ನೋಡಿಲ್ಲ? ನಿಮ್ಮ ಬಳಿ ಕೇವಲ ಟ್ರೈಲರ್ ಇರಬಹುದು, ಆದರೆ ಅಸಲಿ ಪಿಕ್ಚರ್ ನಮ್ಮ ಬಳಿ ಇದೆ ಎಂದು ಗುಡುಗಿದರು.
ನಿನ್ನೆ ನನ್ನ ವಿರುದ್ಧ ಬೆಂಗಳೂರು ಪೊಲೀಸ್ ಕಮಿಷನರ್ ಆರೋಪ ಮಾಡಿದ್ದಾರೆ. ಹೀಗಾಗಿ ಈ ವಿಚಾರ ನನಗೆ ತಿರುಗಬಾಣವಾಗುತ್ತೆ ಅಂತಾ ಚರ್ಚೆ ಆಗುತ್ತಿದೆ. ಆದರೆ ದೆಹಲಿಯ ರಿತೇಶ್ ಪಾಂಡೆಯನ್ನು ಅರೆಸ್ಟ್ ಮಾಡಿದ್ದು ಎಲ್ಲಿ? ನನ್ನ ನಿವಾಸದಲ್ಲಿ ಆತನನ್ನು ಅರೆಸ್ಟ್ ಮಾಡಿದ್ದಾರಾ? ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ರಿತೇಶ್ ಪಾಂಡೆ ನನಗೆ ಯಾರು ಅಂತ ಗೊತ್ತಿಲ್ಲ, ಆತನ ಮುಖ ನೋಡಿಲ್ಲ. ನಮ್ಮ ದೆಹಲಿ ಮನೆಗೆ ಸಾಕಷ್ಟು ಜನ ಕೆಲಸ ಹೇಳಿಕೊಂಡು ಬರುತ್ತಾರೆ. ಹೀಗಾಗಿ ಆ ಬಗ್ಗೆ ತನಿಖೆ ಮಾಡಿ. ನಿಮಗೆ ಯಾರೂ ಬೇಡ ಅಂದಿಲ್ಲ. ಆದರೆ ನಿನ್ನೆ ಕಮಿಷನರ್ ಮಾತನಾಡಿರುವುದು ಕಾನೂನು ಬಾಹಿರ. ನಾನು ಕೋರ್ಟ್ಗೆ ಹೋದರೆ ಏನೂ ಆಗುತ್ತದೆ ಎಂದು ಆ ಅಧಿಕಾರಿಗೆ ಗೊತ್ತು. ಆದರೆ ನಾನು ಆ ರೀತಿ ಮಾಡಲ್ಲ. ಯಾಕೆಂದರೆ ಅವರು ಒತ್ತಡಕ್ಕೆ ಮಣಿದು ಹೇಳಿಕೆ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಲು ಪೊಲೀಸರು ತರಾತುರಿಯಲ್ಲಿ ನನ್ನ ಮೇಲೆ ಕಟ್ಟುಕಥೆ ಹೆಣೆಯುತ್ತಿದ್ದಾರೆ ಎಂದು ನೇರ ಆರೋಪ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಅವರು ದಾಖಲೆ ಹಾಗೂ ಹಳೆಯ ವಿಡಿಯೋ ತುಣುಕುಗಳ ಸಮೇತ ಕಾಂಗ್ರೆಸ್ ಸರ್ಕಾರಕ್ಕೆ ತಿರುಗೇಟು ನೀಡಿದರು. ಪೊಲೀಸ್ ಕಮಿಷನರ್ ಕಚೇರಿ ಅಕ್ಟೋಬರ್ 29ರಂದು ಪ್ರಕಟಣೆ ಹೊರಡಿಸಿ, ಲೈಂಗಿಕ ದೌರ್ಜನ್ಯದ ವಿಚಾರ ಕಟ್ಟುಕಥೆ, ಘಟನೆಯೇ ನಡೆದಿಲ್ಲ ಎಂದು ಹೇಳಿದೆ. ಎಫ್ಎಸ್ಎಲ್ ವರದಿ ಬರುವ ಮುನ್ನವೇ ಘಟನೆ ನಡೆದಿಲ್ಲ ಎಂದು ಪೊಲೀಸರೇ ತೀರ್ಮಾನಿಸಿರುವುದು ಸಿದ್ದರಾಮಯ್ಯ ಅವರನ್ನು ರಕ್ಷಿಸಿ ಸರ್ಕಾರ ಉಳಿಸಿಕೊಳ್ಳುವ ತಂತ್ರವಲ್ಲದೆ ಮತ್ತೇನು? 2011ರ ಘಟನೆಯನ್ನು 2023ರಲ್ಲಿ ಶೂಟ್ ಮಾಡಲಾಗಿದೆ ಎನ್ನಲಾಗುತ್ತಿದೆ. ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಆಳ್ವಾ ಅವರ ಪಾತ್ರವೇನು? ಕೇರಳದ ಹೆಣ್ಮಗಳು ಈ ಹಿಂದೆ ಮಾಡಿದ ಇ-ಮೇಲ್ ದೂರುಗಳು ಎಲ್ಲಿ ಹೋದವು? ಆ 14 ವರ್ಷದ ಹೆಣ್ಣು ಮಗಳಿಗೆ ಎಷ್ಟು ದುಡ್ಡು ಕೊಟ್ಟಿದ್ದೀರಿ? ವಿಡಿಯೋದಲ್ಲಿರುವ ಮೂರನೇ ವ್ಯಕ್ತಿಯ ಯಾರು? ಆತನ ಪಾತ್ರ ಏನು? ಕೃಪಾ ಆಳ್ವಾರನ್ನು ವಿದೇಶಕ್ಕೆ ಕಳುಹಿಸಿದ್ದು ಯಾಕೆ? ಈ ಮೂಲದ ತನಿಖೆ ಪೊಲೀಸರು ಏಕೆ ಮಾಡುತ್ತಿಲ್ಲ? 2023 ರಲ್ಲಿ ವಿಡಿಯೋ ಹೊರ ಬರಲು ಕಾರಣ ಏನು ಎಂದು ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟರು.
ಆರೋಪಿ ರಿತೀಶ್ ಕುಮಾರ್ ನನ್ನ ಮನೆಯಲ್ಲಿದ್ದ, ಅಲ್ಲಿಯೇ ಮೊಬೈಲ್ ಎಕ್ಸ್ಚೇಂಜ್ ಮಾಡಿಕೊಂಡಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಪೊಲೀಸರು ಕೋರ್ಟ್ಗೆ ನೀಡಿರುವ ದಾಖಲೆಯಲ್ಲೇ ಆತನ ವಿಳಾಸ ಉತ್ತರ ಪ್ರದೇಶದ ಗಾಜಿಯಾಬಾದ್ ಎಂದಿದೆ. ಅಕ್ಟೋಬರ್ 23ರಂದು ಮಧ್ಯಾಹ್ನ 2:59ಕ್ಕೆ ಗಾಜಿಯಾಬಾದ್ನ ಇಂದಿರಾಪುರಂನಲ್ಲಿ ಆತನನ್ನು ಬಂಧಿಸಲಾಗಿದೆ. ನನ್ನ ದೆಹಲಿ ನಿವಾಸದಲ್ಲಿ ಆತ ಇರಲೇ ಇಲ್ಲ. ಹೀಗಿರುವಾಗ ನನ್ನ ನಿವಾಸ ಮಹಜರು ಮಾಡಲಾಗಿದೆ ಎಂಬ ಸುದ್ದಿಗಳನ್ನು ಗೃಹ ಸಚಿವರು ಮತ್ತು ಕಮಿಷನರ್ ಕಟ್ಟುಕಥೆಯಾಗಿ ಸೃಷ್ಟಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಈ ಹಿಂದೆ ಸಿಡಿ ಹಾಗೂ ಸ್ಟಿಂಗ್ ಸಂಸ್ಕೃತಿಯ ಕುರಿತು ಡಿ.ಕೆ. ಶಿವಕುಮಾರ್ ಮಾತನಾಡಿದ್ದ ವಿಡಿಯೋವನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದ ಹೆಚ್ಡಿಕೆ, ಮಿಸ್ಟರ್ ಶಿವಕುಮಾರ್, ನೀವೇ ಅಂದು ಬ್ಲ್ಯಾಕ್ಮೇಲ್, ಸಿಡಿ ಗ್ಯಾಂಗ್ ಬಗ್ಗೆ ಮಾತನಾಡಿದ್ದೀರಿ. ಈಗ ನಿಮ್ಮದೇ ಸರ್ಕಾರದಲ್ಲಿ ತನಿಖೆ ಯಾವ ಹಾದಿ ಹಿಡಿದಿದೆ? ಎಂದು ಪ್ರಶ್ನಿಸಿದರು.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲೂ ನನ್ನ ಲಿಂಕ್ ಇಲ್ಲ, ಬದಲಿಗೆ ಡಿ.ಕೆ. ಶಿವಕುಮಾರ್ ಲಿಂಕ್ ಇದೆ. ಪ್ರಜ್ವಲ್ ಕಾರು ಚಾಲಕ ಕಾರ್ತಿಕ್ ಆಗಸ್ಟ್ 5 ಮತ್ತು 6ರಂದು ಡಿಕೆಶಿ ಮನೆಗೆ ಹೋಗಿದ್ದ ಸಿಡಿಆರ್ ದಾಖಲೆಗಳಿವೆ. ಆತನ ಮೂಲಕವೇ ಎಲ್ಲವೂ ಸಿದ್ಧವಾಗಿದ್ದು, ಇದನ್ನು ಪೊಲೀಸರು ತನಿಖೆ ಮಾಡಿದ್ದಾರೆಯೇ ಎಂದು ಗಂಭೀರ ಆರೋಪ ಮಾಡಿದರು.
ಕೇಂದ್ರ ಸಚಿವರು ಇಡಿ, ಐಟಿ ಛೂಬಿಡುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಕೆಪಿಎಸ್ಸಿ ಅಕ್ರಮ ಮುಚ್ಚಿಹಾಕಲು ಎಸ್ಐಟಿ ತನಿಖೆ ತಡೆಯಲು ಸುಪ್ರೀಂ ಕೋರ್ಟ್ಗೆ ಹೋಗಿ ರಕ್ಷಣೆ ಪಡೆದವರು ನೀವು. ನನ್ನ 14 ವರ್ಷಗಳ ರಾಜಕೀಯ ಹೋರಾಟದಲ್ಲಿ ನಾನೆಂದೂ ಪ್ರಧಾನಿ ಮೋದಿ ಅಥವಾ ಅಮಿತ್ ಶಾ ಬಳಿ ಹೋಗಿ ನನ್ನ ರಕ್ಷಣೆಗೆ ಭಿಕ್ಷೆ ಬೇಡಿಲ್ಲ, ಯಾರ ವಿರುದ್ಧವೂ ತನಿಖಾ ಸಂಸ್ಥೆಗಳನ್ನು ಛೂಬಿಡಿ ಎಂದು ಹೇಳಿಲ್ಲ. ಏಕಾಂಗಿಯಾಗಿಯೇ ಎಲ್ಲವನ್ನೂ ಎದುರಿಸಿದ್ದೇನೆ. ನನ್ನ ಮನೆ ಬಾಗಿಲು ಬಡವರ ಕಷ್ಟಕ್ಕೆ ಸದಾ ತೆರೆದಿರುತ್ತದೆ. ಅಲ್ಲಿಗೆ ಯಾರು ಬರುತ್ತಾರೆ ಎಂದು ತಿಳಿಯಲು ಪ್ರಿಯಾಂಕ್ ಖರ್ಗೆ ಬೇಹುಗಾರರನ್ನು ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿದರು.




