ವಾಣಿಜ್ಯೋದ್ಯಮ ಸಂಘದ ಮನವಿಗೆ ಸಿಗುತ್ತಾ ಮನ್ನಣೆ?
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಸೇರಿದಂತೆ ರಾಜ್ಯದ 11 ಜಿಲ್ಲೆಗಳಲ್ಲಿ ಇನ್ನೊಂದು ವಾರ ಲಾಕ್ ಡೌನ್ ವಿಸ್ತರಿಸಲು ನಿರ್ಧರಿಸಲಾಗಿದೆ. ಆದರೆ ಬೆಳಗಾವಿಯ ವಾಣಿಜ್ಯೋದ್ಯಮ ಸಂಘದ ಪದಾಧಿಕಾರಿಗಳು ಸೋಮವಾರ (ಜೂ.14) ದಿಂದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಜೂನ್ 21ರ ವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರಿಸಲು ನಿರ್ಧರಿಸಲಾಗಿದೆ.
ಅಲ್ಲದೆ ಯಾವ ರೀತಿಯ ನಿಯಮಾವಳಿ ಇರಬೇಕೆನ್ನುವುದನ್ನು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ನಿರ್ಧರಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಹಾಗಾಗಿ ಯಥಾ ಸ್ಥಿತಿ ಮುಂದುವರಿಸಿ ಮತ್ತು ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿಗಳು ಈಗಾಗಲೆ ಆದೇಶ ಹೊರಡಿಸಿದ್ದಾರೆ.
ಚೆಂಬರ್ ಆಫ್ ಕಾಮರ್ಸ್ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅನಿಲ ಬೆನಕೆ ಕೂಡ ಜೊತೆಗಿದ್ದರು ಎಂದು ತಿಳಿಸಿದ್ದಾರೆ. ವಾಣಿಜ್ಯೋದ್ಯಮ ಸಂಘದ ಹೇಮೇಂದ್ರ ಪೋರವಾಲ, ಕಿರಣ ಅಗಡಿ, ರೋಹಿತ್ ಕಪಾಡಿಯಾ, ಸುನೀಲ ನಾಯಕ, ದಿಲೀಪ ತಿಳ್ವೆ ಮೊದಲಾದವರಿದ್ದರು ಎಂದು ಅಧ್ಯಕ್ಷ ಪಂಚಾಕ್ಷರಿ ಚೊಣ್ಣದ್ ತಿಳಿಸಿದ್ದಾರೆ.
ಜೂನ್ 14ರಿಂದಲೇ ಇತರ ಜಿಲ್ಲೆಗಳಂತೆ ಬೆಳಗಾವಿಯಲ್ಲೂ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿ ಎಂದು ಮನವಿ ಮಾಡಿದ್ದಾರೆ.
ಅದೇ ರೀತಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರೊಂದಿಗೆ ಸಹ ಈ ಬಗ್ಗೆ ಮಾತನಾಡಿದ್ದು, ಸೋಮವಾರದಿಂದ ಹಂತ ಹಂತವಾಗಿ ಲಾಕ್ ಡೌನ್ ತೆರವುಗೊಳಿಸುವಂತೆ ಕೋರಲಾಗಿದೆ ಎಂದಿದ್ದಾರೆ.
ಜಿಲ್ಲಾಧಿಕಾರಿಗಳು ಈ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿರುವುದರಿಂದ ಅವರು ನಿರ್ಧಾರ ತೆಗೆದುಕೊಳ್ಳಬಹದು. ಆದರೆ ಜಿಲ್ಲಾ ಉಸ್ತುವಾರಿ ಸಚಿವರ ಅನುಮತಿ ಪಡೆಯಬೇಕಾಗುತ್ತದೆ.
ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರೇ ಬೆಳಗಾವಿಯಲ್ಲಿ ಕೊರೋನಾ ನಿಯಂತ್ರಣಕ್ಕೆ ಬಾರದಿರುವುದರಿಂದ ಲಾಕ್ ಡೌನ್ ಮುಂದುವರಿಸಬೇಕು ಎಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದವರು. ಕೊನೆಯ ಪಕ್ಷ 5 ಜಿಲ್ಲೆಗಳಲ್ಲಾದರೂ ಲಾಕ್ ಡೌನ್ ಮುಂದುವರಿಸುವಂತೆ ಕೋರಿದ್ದರು. ಹಾಗಾಗಿ ಅವರೇ ಈಗ ವಾಣಿಜ್ಯೋದ್ಯಮ ಸಂಘದ ಮನವಿಗೆ ಒಪ್ಪುವುದು ಅನುಮಾನ.
ಈ ಕುರಿತು ಪ್ರಗತಿವಾಹಿನಿಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ನನ್ನ ದೃಷ್ಟಿಯಲ್ಲಿ ಇನ್ನೊಂದು ವಾರ ಲಾಕ್ ಡೌನ್ ಮುಂದುವರಿಸಿದರೆ ಕೊರೋನಾ ನಿಯಂತ್ರಣಕ್ಕೆ ಬರಲಿದೆ. ಹಾಗಾಗಿ ಈಗ ಅಂಗಡಿಗಳನ್ನು ತೆರೆಯಲು ಅನುಮತಿ ನೀಡುವುದು ಸರಿಯಲ್ಲ. ಆದರೆ ವಾಣಿಜ್ಯೋದ್ಯಮ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ಅವರು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೂ ಮಾತನಾಡುವುದಾಗಿ ಹೇಳಿದ್ದಾರೆ. ಸಚಿವರು ಯಾವ ರೀತಿಯ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದು ನೋಡೋಣ ಎಂದರು.
ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ಮುಂದಿನ ವಾರ ಮಧ್ಯ ಭಾಗದ ಹೊತ್ತಿಗೆ ಲಾಕ್ ಡೌನ್ ನ್ನು ಸ್ವಲ್ಪ ಮಟ್ಟಿಗೆ ಸಡಿಲಿಸಿ ಅಂಗಡಿಗಳ ತೆರವಿಗೆ ಅನುಮತಿ ನೀಡುವ ಸಾಧ್ಯತೆ ಇದೆ. ಚೆಂಡು ಜಿಲ್ಲಾ ಉಸ್ತುವಾರಿ ಸಚಿವರ ಅಂಗಳದಲ್ಲಿದೆ.
ಬೆಳಗಾವಿ ಸೇರಿ 11 ಜಿಲ್ಲೆಗಳಲ್ಲಿ ಇನ್ನಷ್ಟು ಕಠಿಣ ಲಾಕ್ ಡೌನ್; ಉಳಿದೆಡೆ ಸಡಿಲಿಕೆ
ಬೆಳಗಾವಿಯ 2 ಏರಿಯಾಗಳ ಸೀಲ್ ಡೌನ್ ಗೆ ಜಿಲ್ಲಾಧಿಕಾರಿ ಆದೇಶ
ಬೆಳಗಾವಿ ಜಿಲ್ಲಾದ್ಯಂತ ನಿಷೇಧಾಜ್ಞೆ – ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ