![](https://pragativahini.com/wp-content/uploads/2022/07/Dogs.jpg)
ಪ್ರಗತಿವಾಹಿನಿ ಸುದ್ದಿ: ಬಿಬಿಎಂಪಿ ವ್ಯಾಪ್ತಿಯಲ್ಲಿ 1.84 ಲಕ್ಷ ಬೀದಿ ನಾಯಿಗಳಿಗೆ “ಸಂಯುಕ್ತ ಲಸಿಕೆ” ಹಾಕುವ ಗುರಿ ಹೊಂದಲಾಗಿದೆ ಎಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮುದಾಯ ನಾಯಿಗಳಿಗೆ “ಸಂಯುಕ್ತ ಲಸಿಕೆ”(Combined Vaccine) ಅಳವಡಿಸುವ ಕಾರ್ಯಕ್ರಮಕ್ಕೆ ಪಾಲಿಕೆ ಕೇಂದ್ರ ಕಛೇರಿ ಆವರಣದಲ್ಲಿ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಇಡೀ ದೇಶದಲ್ಲಿಯೇ ಮೊದಲಬಾರಿಗೆ ಪಾಲಿಕೆ ವತಿಯಿಂದ ಸಂಯುಕ್ತ ಲಸಿಕೆ ನೀಡಲಾಗುತ್ತಿದೆ ಎಂದು ಹೇಳಿದರು.
ಪಾಲಿಕೆ ವ್ಯಾಪ್ತಿಯಲ್ಲಿ 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ವ್ಯಾಕ್ಸಿನ್ ಮತ್ತು ಕೋಲ್ಡ್ ಸ್ಟೋರೇಜ್ ಗಾಗಿ 4.98 ಕೋಟಿ ರೂ. ವ್ಯಯಿಸಲಾಗುತ್ತಿದೆ ಎಂದು ತಿಳಿಸಿದರು.
ಪಶುಪಾಲನಾ ವಿಭಾಗ ಬಿಬಿಎಂಪಿ ವತಿಯಿಂದ ಪ್ರಸ್ತುತ ಪಾಲಿಕೆ ವ್ಯಾಪ್ತಿಯಲ್ಲಿನ ಬೀದಿನಾಯಿಗಳಲ್ಲಿ ಸಂತಾನಹರಣ ಶಸ್ತ್ರ(ABC) ಚಿಕಿತ್ಸೆ ಹಾಗೂ ರೇಬೀಸ್ ರೋಗ ನಿರೋಧಕ ಲಸಿಕೆಯನ್ನು(ARV) ಯಶಸ್ವಿಯಾಗಿ ನಿಯಮಾನುಸಾರ ನಿರ್ವಹಿಸಲಾಗುತ್ತಿರುತ್ತದೆ.
ರೇಬೀಸ್ ಲಸಿಕೆ ಹೊರತು ಪಡಿಸಿ ಬೀದಿನಾಯಿಗಳಲ್ಲಿ ಹಲವು ಮಾರಾಣಾಂತಿಕ ಸಾಂಕ್ರಾಮಿಕ ರೋಗಗಳನ್ನು ಹಾಗೂ ಮನುಷ್ಯರಿಗೆ ನಾಯಿಗಳಿಂದ ಹರಡಬಹುದಾದ ರೋಗಗಳನ್ನು ತಡೆಗಟ್ಟಲು ಸಂಯುಕ್ತ ಲಸಿಕೆ ಕಾರ್ಯಕ್ರಮವನ್ನು ನಿರ್ವಹಿಸುವುದು ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಅತ್ಯಗತ್ಯವಾಗಿರುತ್ತದೆ.
ಬೀದಿ ನಾಯಿಗಳಿಗೆ ಮಾರಕವಾಗಿರುವ ರೋಗಗಳಲ್ಲಿ ಐದು ರೋಗಗಳು ತುಂಬಾ ಮಾರಕವಾಗಿರುತ್ತದೆ. ಈ ರೋಗಗಳಿಂದ ಬೀದಿ ನಾಯಿಗಳನ್ನು ರಕ್ಷಿಸಲು ಹಾಗೂ ನಾಯಿಗಳಿಂದ ಮಾನವನಿಗೆ ಹರಡಬಹುದಾದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು 5 ರೋಗಗಳಿಗೆ ಈ ಸಂಯುಕ್ತ ಲಸಿಕೆಯು ಅತ್ಯವಶ್ಯಕವಾಗಿರುತ್ತದೆ.
ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುವಂತಹ ನಾಗರಿಕರ ಆರೋಗ್ಯ ಕಾಪಾಡುವುದು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಆದ್ಯ ಕರ್ತವ್ಯವಾಗಿರುತ್ತದೆ. ಇದೇ ರೀತಿ ಪಾಲಿಕೆ ವ್ಯಾಪ್ತಿಯ ಬೀದಿನಾಯಿಗಳ ಆರೋಗ್ಯ ಕಾಪಾಡವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ವ್ಯಾಪ್ತಿಯ ಬೀದಿನಾಯಿಗಳಲ್ಲಿ ಕಾಣಿಸಿಕೊಳ್ಳುವಂತಹ ಮಾರಕ ರೋಗಗಳ ವಿರುದ್ಧ ಲಸಿಕೆ ಹಾಕುವುದರಿಂದ ಈ ಮಾರಕ ರೋಗಗಳ ಹರಡುವಿಕೆ ಹಾಗು ತಡೆಗಟ್ಟುವಲ್ಲಿ ಸಂಯುಕ್ತ ಲಸಿಕೆ ಕಾರ್ಯಕ್ರಮವು ಉಪಯುಕ್ತವಾಗಲಿದೆ.
ಪಾಲಿಕೆಯ ವ್ಯಾಪ್ತಿಯಲ್ಲಿ 2023ನೇ ಸಾಲಿನ ಬೀದಿ ನಾಯಿ ಸಮೀಕ್ಷೆಯಲ್ಲಿ ಅಂದಾಜಿಸಲಾಗಿರುವ 2.79 ಲಕ್ಷ ಬೀದಿನಾಯಿಗಳಲ್ಲಿ ಶೇ. 50ಕ್ಕೂ ಹೆಚ್ಚು ಬೀದಿನಾಯಿಗಳಿಗೆ ಪ್ರಸಕ್ತ ಸಾಲಿನಲ್ಲಿ ಸಂಯುಕ್ತ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.
ನಾಯಿಗಳಿಗೆ ಮಾರಕವಾಗಿರುವ ಐದು ರೋಗಗಳ ವಿವರ:
- ಕೆನೈನ್ ಡಿಸ್ಟೆಂಪರ್(Canine Distemper)
- ಕೆನೈನ್ ಹೆಪಟೈಟಿಸ್(Canine hepatitis)
- ಕೆನೈನ್ ಪಾರ್ವವೈರಸ್(Canine Parvovirus)
- ಕ್ಯಾನೈನ್ ಪ್ಯಾರಾ ಇನ್ಫ್ಲುಯೆನ್ಸ(Canine para influenza)
- ನಾಯಿಗಳಲ್ಲಿ ಲೆಪ್ಟೊಸ್ಪೈರೋಸಿಸ್(Canine Leptospirosis)-(2 ಸ್ಟೈನ್) (ನಾಯಿಗಳಿಂದ ಮನುಷ್ಯರಿಗೆ ಹರಡಬಹುದಾದ ರೋಗ)
ಈ ವೇಳೆ ಪಶು ಸಂಗೋಪನಾ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್, ಯಲಹಂಕ ವಲಯ ಆಯುಕ್ತರಾದ ಕರೀಗೌಡ, ಜಂಟಿ ನಿರ್ದೇಶಕರಾದ ಡಾ. ಚಂದ್ರಯ್ಯ, ಎಲ್ಲಾ ವಲಯಗಳ ಸಹಾಯಕ ನಿರ್ದೇಶಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ