ರೈತರಿಗೆ ಅನುಕೂಲವಾಗುವ ಕಾಯ್ದೆಗಳನ್ನು ಪುನ: ಜಾರಿ ಮಾಡದೇ ಹೋದರೆ ಹೋರಾಟ – ಈರಣ್ಣ ಕಡಾಡಿ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಹಿಂದಿನ ಬಿಜೆಪಿ ಸರ್ಕಾರ ಜಾರಿ ಮಾಡಿರುವ ರೈತಪರವಾದ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ರದ್ದು ಮಾಡಿರುವುದನ್ನು ಬಿಜೆಪಿ ರೈತ ಮೋರ್ಚಾ ವಿರೋಧಿಸುತ್ತದೆ. ಬರುವ ದಿನಗಳಲ್ಲಿ ರೈತರಿಗೆ ಅನುಕೂಲವಾಗುವ ಎಲ್ಲ ಕಾಯ್ದೆಯನ್ನು ಪುನ: ಜಾರಿ ಮಾಡದೇ ಹೋದರೆ ಬಿಜೆಪಿ ಇಡೀ ರಾಜ್ಯದ ತುಂಭೆಲ್ಲ ಉಗ್ರವಾದ ಹೋರಾಟ ಮಾಡಲಿದೆ ಎಂದು ರಾಜ್ಯಸಭೆ ಸದಸ್ಯರು ಮತ್ತು ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಈರಣ್ಣಾ ಕಡಾಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.
ಚಿಕ್ಕೋಡಿ ನಗರದ ಸಂಸದರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ರೈತರು ತಾವು ಬೆಳೆದಂತ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವ ಸ್ವಾತಂತ್ರ್ಯ ಇತ್ತು. ಸಾಗಾಣಿಕೆ ವೆಚ್ಚ, ದಲ್ಲಾಳಿಗಳ ಕಮೀಶನ್ ಇತರೆ ಖರ್ಚುಗಳ ಉಳಿತಾಯ ಇತ್ತು. ಆದರೆ ಎಪಿಎಂಸಿ ಕಾಯ್ದೆ ರದ್ದು ಮಾಡಿ ಕೇವಲ ಎಪಿಎಂಸಿಗಳಲ್ಲಿ ಮಾತ್ರ ಮಾರಾಟ ಮಾಡುವ ಹಳೇಯ ಕಾನೂನು ಜಾರಿಗೆ ತರುವದು ಎ? ಸಮಂಜಸ ಎಂದು ಪ್ರಶ್ನಿಸಿದರು.
ಏಕಾಏಕಿ ವಿದ್ಯುತ್ ದರ ಏರಿಕೆಯಿಂದ ಕಾಟನ ಇಂಡಸ್ಟ್ರೀ, ನೇಕಾರರು, ರೈಸ ಮಿಲ್, ಈ ರೀತಿಯಾಗಿ ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ) ಇವುಗಳಿಗೆ ಬಾರಿ ಹೊಡೆತ ಉಂಟಾಗಿದೆ. ಗೃಹ ಬಳಕೆಯ ಪ್ರತಿ ಯುನಿಟ್‌ಗೆ ಸರಾಸರಿ ೭೦ ಪೈಸೆ ದರ ಹೆಚ್ಚಳ ಹಾಗೂ ಮಿನಿಮಮ್ ಚಾರ್ಜ ಬೇಕಾಬಿಟ್ಟಿ ದರ ಏರಿಕೆ ಮಾಡುವ ಮೂಲಕ ಗೃಹ ಬಳಕೆದಾರರಿಗೆ, ಸಣ್ಣ ಉದ್ಯಮದಾರರಿಗೆ ಪೆಟ್ಟು ನೀಡಿದೆ. ರೈತ ವಿದ್ಯಾನಿಧಿ ನಿಲ್ಲಿಸಿದೆ. ಜಿಲ್ಲೆಗೊಂದು ಗೋಶಾಲೆ ಯೋಜನೆ ರದ್ದು ಮಾಡಿ ರೈತಾಪಿ ವರ್ಗದ ಹೊಟ್ಟೆ ಮೇಲೆ ಕಾಂಗ್ರೆಸ್ ಸರ್ಕಾರ ಬರೆ ಎಳೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿ ಮಾಡಿದ ಕಿಸಾನ ಸಮ್ಮಾನ ಯೋಜನೆ ತಡೆ ಹಿಡಿಯಲು ಯೋಚಿಸುತ್ತಿದೆ. ರೈತ ಶಕ್ತಿ ಯೋಜನೆ ಮತ್ತು ಕೃಷಿ ಭೂಮಿ ಮಾರಾಟ ಕಾಯ್ದೆ ರದ್ದುಗೊಳಿಸಲು ಕಾಂಗ್ರೆಸ್ ಸರ್ಕಾರ ನಿರ್ಣಯಿಸಿದೆ. ಅದರಂತೆ ಬಿಜೆಪಿ ಸರ್ಕಾರದಲ್ಲಿ ನೀರಾವರಿ ಯೋಜನೆಗಳಿಗೆ ೨೩ ಸಾವಿರ ಕೋಟಿ ಅನುದಾನ ಒದಗಿಸಿದ್ದು ಅದನ್ನು ಈಗ ೧೯ ಸಾವಿರ ಕೋಟಿ ರೂ.ಗೆ ಇಳಿಸಿ, ಮೇಕೆದಾಟು ಯೋಜನೆಗಾಗಿ ಕಾಂಗ್ರೇಸ್ ಮಾಡಿದ ಪಾದಯಾತ್ರೆ ಕೇವಲ ರಾಜಕೀಯ ಸ್ಪಂಟ್ ಎಂಬುವುದನ್ನು ನಿರೂಪಿಸಿದೆ ಎಂದು ಕಡಾಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಅಥಣಿ ಮಾಜಿ ಶಾಸಕ ಮಹೇಶ ಕುಮಟ್ಟೊಳ್ಳಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೊಳ, ಮಂಡಲ ಅಧ್ಯಕ್ಷ ಸಂಜಯ ಪಾಟೀಲ ಮುಂತಾದವರು ಇದ್ದರು.
ಜೂನ್ ಮುಗಿದು ಜುಲೈ ತಿಂಗಳು ಅರ್ಧ ಮುಗಿದರೂ ಸಮರ್ಪಕ ಮಳೆ ಆಗಿಲ್ಲ, ಹೀಗಿರುವಾಗ ರೈತರು ಸಂಕಷ್ಟದಲ್ಲಿ ಇದ್ದಾರೆ. ಕೂಡಲೇ ಕಾಂಗ್ರೆಸ್ ಸರ್ಕಾರ ಬೆಳಗಾವಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕು.
-ಈರಣ್ಣಾ ಕಡಾಡಿ, ರಾಜ್ಯಸಭೆ ಸದಸ್ಯರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ