ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು: ದೈಹಿಕ ಶಿಕ್ಷಕನ ವಿರುದ್ಧ ರೊಚ್ಚಿಗೆದ್ದ ಪೋಷಕರು; ಶಿಕ್ಷಕನ ಮೇಲೆ ಹಲ್ಲೆ

ಪ್ರಗತಿವಾಹಿನಿ ಸುದ್ದಿ: ವಸತಿ ಶಾಲೆಯೊಂದರಲ್ಲಿ ವಿದ್ಯಾರ್ಥಿಯೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಶಾಲೆಗೆ ದೌಡಾಯಿಸಿರುವ ಪೋಷಕರು ಪ್ರತಿಭಟನೆ ತೀವ್ರಗೊಳಿಸಿದ್ದು, ದೈಹಿಕ ಶಿಕ್ಷಕಕನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಬೆಂಗಳೂರು ಉತ್ತರ ತಾಲೂಕಿನ ಕಾಡಯರಪ್ಪನಹಳ್ಳಿಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಯೋರ್ವ ಅನುಮಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಕಾಡಯರಪ್ಪನಹಳ್ಳಿಯ ಸ್ಟ್ರಲಿಂಗ್ ಇಂಗ್ಲೀಷ್ ವಸತಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದ ಗುರು ಕಿರಣ್ ಎಂಬ ವಿದ್ಯಾರ್ಥಿ ಮೃತ ಬಾಲಕ.
ಹುಷಾರಿಲ್ಲ ಎಂದು ಆಸ್ಪತ್ರೆಗೆ ಸೇರಿಸಿರೋದಾಗಿ ಶಿಕ್ಷಕರು ವಿದ್ಯಾರ್ಥಿ ಪೋಷಕರಿಗೆ ಕರೆ ಮಾಡಿ ತಿಳಿಸಿದ್ದಾರೆ. ಆದ್ರೆ, ಪೋಷಕರು ಬರುವಷ್ಟರಲ್ಲೇ ವಿದ್ಯಾರ್ಥಿ ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ದೈಹಿಕ ಶಿಕ್ಷಕ ನಾರಾಯಣ ಎಂಬುವವರು ವಿದ್ಯಾರ್ಥಿ ತಲೆಗೆ ರಾಡ್ ನಿಂದ ಹೊಡೆದಿದ್ದರಂತೆ. ಹಲ್ಲೆ ಮಾಡಿದ್ದಕ್ಕೆ ಗುರುಕಿರಣ್ ಸಾವನ್ನಪ್ಪಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ. ಇದರಿಂದ ಆಕ್ರೋಶಗೊಂಡಿರುವ ಪೋಷಕರು, ಶಿಕ್ಷಕ ನಾರಾಯಣ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ನಾರಾಯಣನನ್ನು ಸುಟ್ಟು ಹಾಕುವುದಾಗಿ ಪೆಟ್ರೋಲ್ ತಂದಿದ್ದಾರೆ. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ವಸತಿ ಶಾಲೆಯ ವಿದ್ಯಾರ್ಥಿಯೋರ್ವ ಹೇಳುವ ಪ್ರಕಾರ, ಇಂದು ಬೆಳಗ್ಗೆ ಎಂದಿನಂತೆ 5 ಗಂಟೆಗೆ ನಿದ್ದೆಯಿಂದ ಗುರುಕಿರಣ್ ಎದ್ದಿದ್ದ. ಗ್ರೌಂಡ್ಗೆ ಬರುವ ಮುನ್ನ ಶೌಚಾಲಯಕ್ಕೆ ಅಂತ ಗುರು ಕಿರಣ್ ಹೋಗಿದ್ದ. ಶೌಚಾಲಯಕ್ಕೆ ಹೋಗಿದ್ದಕ್ಕೆ ದೈಹಿಕ ಶಿಕ್ಷಕ ನಾರಾಯಣ್ ಅವರು ಹೊಡೆದಿದ್ದಾರೆ. ಗುರುಕಿರಣ್ ಕುತ್ತಿಗೆ ಮೇಲೆ ತಲ್ಲೆ ಬಗ್ಗಿಸಿ ಹೊಡೆದರು. ಹೊಡೆದ ನಂತರ ಗ್ರೌಂಡ್ಗೆ ಕರೆಸಿ ಎರಡು ರೌಂಡ್ ಓಡುವಂತೆ ಹೇಳಿದ್ದರು. ಅದರಂತೆ ಓಡುವ ವೇಳೆ ಗುರುಕಿರಣ್ ಕುಸಿದು ಬಿದ್ದ ಎಂದು ಘಟನೆ ಬಗ್ಗೆ ವಿವರಿಸಿದ್ದಾನೆ.
ಯಾವಾಗಲೂ ಸಣ್ಣ ವಿಚಾರಕ್ಕೂ ದೈಹಿಕ ಶಿಕ್ಷಕರು ಮಕ್ಕಳನ್ನ ಹೊಡೆಯುತ್ತಾರೆ. ರಾಡ್ ಮತ್ತು ಬಿದರಿನಿಂದ ಹೊಡೆಯುತ್ತಾರೆ. ರೂಂ ನಲ್ಲಿ ಕೂಡಿಹಾಕಿ ಹೊಡೆದು ಟಾರ್ಚರ್ ಮಾಡುತ್ತಾರೆ. ಊಟದಲ್ಲಿ ಕಲ್ಲು ಕೂದಲು ಎಲ್ಲಾ ಸಿಗುತ್ತದೆ ಎಂದು ಗಂಭೀರ ಆರೋಪ ಮಾಡಿದ್ದಾನೆ. ಇದರಿಂದ ಆಕ್ರೋಶಗೊಂಡ ಮೃತ ವಿದ್ಯಾರ್ಥಿ ಗುರುಕಿರಣ್ ಕುಟುಂಬಸ್ಥರು, ದೈಹಿಕ ಶಿಕ್ಷಕ ನಾರಾಯಣನ ಮೇಲೆ ಹಲ್ಲೆ ಮಾಡಿದ್ದಾರೆ.
ಆಕ್ರೋಶಗೊಂಡಿರು ಪೋಷಕರು ದೈಹಿಕ ಶಿಕ್ಷಕ ನಾರಾಯಣನನ್ನು ಹಿಡಿದು ಥಳಿಸಿದ್ದಾರೆ. ನಾರಾಯಣಗೌಡ ತಪ್ಪಿಸಿಕೊಂಡು ಓಡಿದರೂ ಸಹ ಬಿಡದೇ ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಬಳಿಕ ಮಧ್ಯೆ ಪ್ರವೇಶಿಸಿದ ಬಾಗಲೂರು ಪೊಲೀಸರು, ನಾರಾಯಣನ್ನು ರಕ್ಷಿಸಿ ಜೀಪ್ನಲ್ಲಿ ಕೂರಿಸಿದ್ದಾರೆ. ಆದರೂ ಬಿಡದ ಪೋಷಕರು, ತಮ್ಮ ವಶಕ್ಕೆ ಕೊಡಿ ಎಂದು ಮತ್ತೆ ಹಲ್ಲೆಗೆ ಮುಂದಾಗಿದ್ದಾರೆ. ಅಲ್ಲದೇ ದೈಹಿಕ ಶಿಕ್ಷಕನ್ನು ಸುಟ್ಟು ಹಾಕುತ್ತೇವೆಂದು ಪೆಟ್ರೋಲ್ ಹಿಡಿದುಕೊಂಡು ಬಂದಿದ್ದಾರೆ. ಇದರಿಂದ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆಯೇ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.



