ಬಾಣಂತಿಗೆ ಮೆದುಳಿನ ಪಾರ್ಶ್ವ ವಾಯು: ಕೆಎಲ್ಇ ಯಳ್ಳೂರು ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಒಂದೂವರೆ ದಿನದ ಬಾಣಂತಿಯೊಬ್ಬಳಲ್ಲಿ ಉಂಟಾದ ಮೆದುಳಿನ ಪಾರ್ಶ್ವವಾಯು ರೋಗಕ್ಕೆ ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಪ್ರಸಿದ್ದ ವೈದ್ಯ ಡಾ. ಬಿ ಶ್ರೀನಿವಾಸ ಚಿಕಿತ್ಸೆ ನೀಡಿ ಗುಣಮುಖರಾಗುವಂತೆ ಮಾಡಿದ್ದಾರೆ.
ಕಳೆದ ತಿಂಗಳ ೨೮ನೇ ತಾರೀಖಿನಂದು ಕಿತ್ತೂರು ತಾಲೂಕಿನಲ್ಲಿ ಸಾಮಾನ್ಯ ಹೆರಿಗೆಗೆ ಒಳಗಾದ ೨೬ ವರ್ಷದ ಬಾಣಂತಿಯು ಹೆರಿಗೆಯ ನಂತರದಲ್ಲಿ ತನ್ನ ವಿಚಿತ್ರ ವರ್ತನೆಯಿಂದ ಮನೆ ಮಂದಿಗೆಲ್ಲ ಭೀತಿ ಹುಟ್ಟಿಸಿದ್ದಳು. ಮನೆಯ ಜನರು ಅವಳನ್ನು ಅವಳ ಹೆರಿಗೆಯಾದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸಿದ್ದಾರೆ. ಇದರಿಂದ ಗುಣಮುಖರಾಗದ ಮಹಿಳೆಯನ್ನು ಬೆಳಗಾವಿ ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಡಾ. ಬಿ ಶ್ರೀನಿವಾಸ ಅವರಲ್ಲಿಗೆ ಕರೆದುಕೊಂಡ ಬಂದ ನಂತರ ಅವಳಿಗೆ ಎಮ್ ಆರ್ ಐ ಪರೀಕ್ಷೆ ಮಾಡಲಾಗಿ ಅವಳ ಮಿದುಳಿನಲ್ಲಿ ಸುಮಾರು ೬ ಸೆಂಟಿಮೀಟರಿನಷ್ಟು ದೊಡ್ಡದಾದ ರಕ್ತ ಹೆಪ್ಪುಗಟ್ಟಿದ ಗಡ್ಡೆ ಕಾಣಿಸಿಕೊಂಡಿದೆ.
ವೈದ್ಯರು ಅವಳಿಗೆ ೨ ದಿನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿ ನಂತರ ಉಳಿದ ದಿನಗಳಿಗೆ ಸಾಮಾನ್ಯ ವಾರ್ಡನಲ್ಲಿ ಚಿಕಿತ್ಸೆ ನೀಡಿ ಗುಣಮುಖಳನ್ನಾಗಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಚಿಕಿತ್ಸೆ ನೀಡಿದ ವೈದ್ಯ ಡಾ. ಬಿ ಶ್ರೀನಿವಾಸ ಅವರು ಮಾತನಾಡುತ್ತ ಈ ತೆರನಾ ಪ್ರಕರಣಗಳು ಬಹಳ ವಿರಳವಾಗಿದ್ದು ಗರ್ಭಾವಸ್ಥೆಯಲ್ಲಿ ಉಂಟಾದ ಭಯ ಭೀತಿಗಳು, ಮಧುಮೇಹಿಗಳು, ಬೇಡದಾದ ಗರ್ಭ ಈ ಸಂದರ್ಭಗಳಲ್ಲಿ ಮಹಿಳೆಯರಲ್ಲಿ ಉಂಟಾಗುವ ಹಾರ್ಮೋನುಗಳ ಬದಲಾವಣೆ ಅತಿಯಾದ ಅಂಜಿಕೆ ಹಾಗೂ ಆರೋಗ್ಯದ ಬಗ್ಗೆ ಅಲಕ್ಷ್ಯತನ ಮತ್ತು ತಡವಾದ ಗರ್ಭಧಾರಣೆಗಳು ಕಾರಣವಾಗಬಹುದಾಗಿದೆ. ಆದ್ದರಿಂದ ಮಹಿಳೆಯರು ಗರ್ಭಾವಸ್ಥೆಯಲ್ಲಿ ತಮ್ಮ ದೈಹಿಕ ಆರೋಗ್ಯದ ಜೊತೆಗೆ ಮಾಸಿಕ ಆರೊಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ. ಆರ್ ಆರ್ ವಾಳ್ವೆಕರ ಅವರು ಚಿಕಿತ್ಸೆ ನೀಡಿದ ವೈದ್ಯರಾದ ಡಾ. ಬಿ ಶ್ರೀನಿವಾಸ ಅವರು ಹಾಗೂ ವಾರ್ಡಗಳಲ್ಲಿ ಕಾರ್ಯನಿರ್ವಹಿಸುವ ದಾದಿಯರು ಮತ್ತು ತಂತ್ರಜ್ಞರ ಕುರಿತು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.
ಈ ಚಿಕಿತ್ಸೆಯನ್ನು ನೀಡಿದ ವೈದ್ಯರಿಗೆ ಅಭಿನಂದಿಸುತ್ತ ಮಾತನಾಡಿದ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಅವರು, ಇಂತಹ ಪ್ರಕರಣಗಳು ಒಂದು ಲಕ್ಷ ಮಂದಿಯಲ್ಲಿ ಹತ್ತು ಜನರಲ್ಲಿ ಕಾಣಬಹುದಾಗಿದೆ. ಇಂತಹ ರೋಗಿಗಳಿಗೆ ಯಾವುದೇ ಶಸ್ತ್ರಚಿಕಿತ್ಸೆಯಿಲ್ಲದೇ ಗುಣಮುಖರನ್ನಾಗಿ ಮಾಡಿದ ವೈದ್ಯರು ನಿಜಕ್ಕೂ ಅಭಿನಂದನಾರ್ಹರಾಗಿದ್ದಾರೆ ಎಂದು ಕೋರಿದ್ದಾರೆ.
ಇಂತಹ ವಿರಳ ಪ್ರಕರಣಕ್ಕೆ ಸರಳವಾಗಿ ಚಿಕಿತ್ಸೆ ನೀಡಿದ ಡಾ. ಬಿ ಶ್ರೀನಿವಾಸ ಅವರ ಕಾರ್ಯಕ್ಕೆ ಯು ಎಸ್ ಎಮ್ ಕೆ ಎಲ್ ಇ ಯ ನಿರ್ದೇಶಕರಾದ ಡಾ. ಹೆಚ್ ಬಿ ರಾಜಶೇಖರ ಅವರು ಹಾಗೂ ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಅಭಿನಂದಿಸಿ ಸಂತಸ ವ್ಯಕ್ತ ಪಡಿಸಿದ್ದಾರೆ.
ವಿಚಾರಣೆಗೆ ಹಾಜರಾಗದ ಅಧಿಕಾರಿಗಳನ್ನು ಬಂಧಿಸಿ ಕರೆತನ್ನಿ; ಹೈಕೋರ್ಟ್ ಖಡಕ್ ಸೂಚನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ