ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ -ರೈತರು ಯಾವುದೇ ಕಾರಣದಿಂದ ಆತ್ಮಹತ್ಯೆಯಂತಹ ದುಷ್ಕೃತ್ಯಕ್ಕೆ ಇಳಿಯಬಾರದು ಎಂದು ಶಾಸಕ ಗಣೇಶ ಹುಕ್ಕೇರಿ ರೈತರಲ್ಲಿ ಮನವಿ ಮಾಡಿದ್ದಾರೆ.
ನೆರೆ ಪ್ರವಾಹದಲ್ಲಿ ಬೆಳೆ ಹಾನಿ ಹಾಗೂ ವಿಪರಿತ ಸಾಲ ಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದ ಯಡೂರವಾಡಿಯ ರೈತ ಜ್ಞಾನದೇವ ರಾ. ಪಿರಾಜಿ ಇವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಧನದ ಚೆಕ್ ವಿತರಿಸಿ ಅವರು ಮಾತನಾಡುತ್ತಿದ್ದರು.
ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ. ಸಮಸ್ಯೆ ಎಲ್ಲರಿಗೂ ಬರುತ್ತದೆ. ಅದನ್ನು ಎದುರಿಸಬೇಕು. ಧೈರ್ಯದಿಂದ ಬದುಕು ಸಾಗಿಸಬೇಕು. ಒಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ಇಡೀ ಕುಟುಂಬ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ಒಮ್ಮೆಮ್ಮೆ ಕಷ್ಟ ಬಂದರೂ ಜೀವನ ಸಾಗಿಸಬೇಕು ಎಂದು ಅವರು ಕರೆ ನೀಡಿದರು.
ರೈತರು ಶ್ರಮ ಜೀವಿಗಳು. ಕಷ್ಟ ನಷ್ಟಗಳನ್ನು ಎದುರಿಸಿ ಜೀವನ ಸಾಗಿಸುವುದು ಗೊತ್ತಿದೆ. ಆದರೆ ಅರೆ ಕ್ಷಣದ ದುಡುಕಿನಿಂದ ಜೀವವನ್ನೇ ಬಲಿಕೊಡುತ್ತಿರುವುದು ವಿಷಾದದ ಸಂಗತಿ. ಕಷ್ಟ ಶಾಶ್ವತವಲ್ಲ. ಒಮ್ಮೆ ಬಂದು ಹೋಗುತ್ತದೆ. ತಾಳ್ಮೆಯಿಂದ ವಿಚಾರಿಸಿದರೆ ಎಲ್ಲದಕ್ಕೂ ಪರಿಹಾರ ಸಿಗುತ್ತದೆ ಎಂದು ಗಣೇಶ ಹುಕ್ಕೇರಿ ಹೇಳಿದರು.
ಶಾಸಕ ಗಣೇಶ ಹುಕ್ಕೇರಿ ಸರಕಾರದ ಮಟ್ಟದಲ್ಲಿ ಪ್ರಯತ್ನ ಮಾಡಿ ಮೃತ ರೈತನ ಕುಟುಂಬಕ್ಕೆ ಪರಿಹಾರ ಬರುವಂತೆ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ