ಜಯಶ್ರೀ ಜೆ. ಅಬ್ಬಿಗೇರಿ, ಬೆಳಗಾವಿ
ಭೂಮಿಯ ಮೇಲಿರುವವರ ಬದುಕು ಒಂದೇ ತೆರನಾಗಿಲ್ಲ. ಬದುಕಿನ ಬಂಡಿ ಒಬ್ಬೊಬ್ಬರಿಗೆ ಒಂದೊಂದು ರೀತಿ ಪಯಣದ ಅನುಭವ ನೀಡುತ್ತದೆ. ಎಲ್ಲರಿಗೂ ಒಂದೇ ತರ ಕಾಣಿಸದ ಜೀವನ ಒಂದು ಬಹುಮುಖಿ ವೇಷಧಾರಿ ಎಂದೆನಿಸಿದಿರದು. ಸಾವಿರ ಜನರಿಗೆ ಸಾವಿರ ಪ್ರಕಾರದ ಬದುಕು. ಇಲ್ಲಿ ಒಬ್ಬರಂತೆ ಒಬ್ಬರಿಲ್ಲ. ಕೆಲವರಿಗೆ ಇಷ್ಟವಾದದ್ದು ಹಲವರಿಗೆ ಕಷ್ಟ. ಒಬ್ಬರಿಗೆ ಅಂದವೆನಿಸಿದ್ದು ಇನ್ನೊಬ್ಬರಿಗೆ ಕುರೂಪ. ಒಬ್ಬರಿಗೆ ಜಟಿಲವೆನಿಸಿದ್ದು ಮತ್ತೊಬ್ಬರಿಗೆ ಹಗುರ. ನಡೆವ ಘಟನೆಗಳಿಗೆ ಪ್ರತಿಯೊಬ್ಬರ ಪ್ರತಿಕ್ರಿಯೆಯೂ ಭಿನ್ನ ವಿಭಿನ್ನವೇ. ಅವಘಡದ ಪರಿಸ್ಥಿತಿಗೆ ಒಬ್ಬರು ಹೊಸ ಬದುಕು ಕಟ್ಟಿಕೊಂಡು ಮುಗುಳ್ನಗುತ್ತಾರೆ. ಮತ್ತೆ ಹಲವರು ಇನ್ನೇನಿಲ್ಲ ಎಲ್ಲ ಮುಗಿಯಿತು ಎಂದು ಜೀವನ ಪೂರ್ತಿ ಕಣ್ಣೀರಿಡುತ್ತಾರೆ. ಹೀಗೆ ಇಷ್ಟ, ಆಯ್ಕೆ ಪ್ರತಿಕ್ರಿಯೆ, ಸ್ಪಂದನ ಎಲ್ಲವೂ ಭಿನ್ನ!
ಇದೆಲ್ಲ ಗಮನಿಸಿದಾಗ ಎಲ್ಲರಂತೆ ಎಲ್ಲರಿಲ್ಲ ಎಂದೆನಿಸದೇ ಇರುವುದಿಲ್ಲ. ಇಲ್ಲಿ ನಾನು ನೀನು ಅವನು ಅವಳು ಎಲ್ಲರೂ ಬೇರೆ ಬೇರೆ. ಭಿನ್ನವಾದರೂ ’ಕೂಡಿ ಬಾಳಿದರೆ ಸ್ವರ್ಗ ಸುಖ’ ಅನ್ನೋದು ಸತ್ಯದ ಮಾತು. ಜೀವನ ತೆರೆದಿಟ್ಟ ಪುಸ್ತಕವಲ್ಲ. ಹಿತವಾದ ಪುಟದ ಮೇಲಷ್ಟೇ ಕಣ್ಣು ಹಾಯಿಸಿ ಹಾಯಾಗಿರೋಕೆ ಬಿಡುವುದಿಲ್ಲ. ಎಲ್ಲ ಗುಟ್ಟುಗಳನ್ನು ಮುಚ್ಚಿಟ್ಟುಕೊಂಡಿದೆ. ಎಷ್ಟು ಪರಿಪರಿಯಾಗಿ ಬೇಡಿಕೊಂಡರೂ ಮುಂದಿನ ಪುಟದ ಚಿತ್ರಣ ತೋರಿಸುವುದೇ ಇಲ್ಲ. ಒಮ್ಮೊಮ್ಮೆ ಅಕಸ್ಮಾತ್ತಾಗಿ ಎಲ್ಲರ ಮುಂದೆ ಪುಟ ತೆರೆದಿಟ್ಟು ನಮ್ಮ ದೌರ್ಬಲ್ಯ ಮರೆಮಾಚಲು ಬಿಡದೇ ರಟ್ಟು ಮಾಡಿ ಬಯಲಿಗೆಳಿಯುತ್ತದೆ. ಬದುಕಿನ ಪ್ರತಿ ಹೀಗೆಲ್ಲ ಗೋಳಿಡುವುದು ಸಾಮಾನ್ಯವೆನಿಸಿದೆ.
ಗುಣ ನಡತೆ ವಿಶೇಷತೆಗಳಿಂದ ನಮ್ಮ ಬದುಕು ನಮ್ಮ ಮಕ್ಕಳಿಗೆ ಮಾದರಿಯಾಗುತ್ತಿದೆಯೋ ಇಲ್ಲ ಎಚ್ಚರಿಕೆಯ ಗಂಟೆಯಾಗುತ್ತಿದೆಯೋ? ಎಂಬುದನ್ನು ಮಾತ್ರ ಎಡೆಬಿಡದೇ ಪ್ರಶ್ನಿಸಿಕೊಂಡು ಬದುಕುವುದು ಇಂದಿನ ಅನಿವಾರ್ಯ. ಸ್ವಾಸ್ಥ್ಯ ಸಮಾಜ ಸ್ವಚ್ಛ ಪರಿಸರವನ್ನು ಮಕ್ಕಳ ಕೈಗಿತ್ತು ತೆರಳಬೇಕಿದೆ. ಬದುಕಿನ ಸುಂದರ ಪವಾಡಗಳೇ ಮಕ್ಕಳು. ’ದಿ ಪ್ರಾಫೆಟ್‌ನಲ್ಲಿ ಖಲೀಲ್ ಗಿಬ್ರಾನ್ ಹೇಳುವಂತೆ,’ ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ. ಅವರು ತನಗಾಗಿ ಹಂಬಲಿಸುತ್ತಿರುವ ಬದುಕಿನ ಮಗ/ಳು.’ ಈ ಮಹತ್ತರ ಅಂಶ ತಿಳಿದು ಮಕ್ಕಳೆಂಬ ಸಸಿಗಳಿಗೆ ನೀರುಣಿಸಬೇಕಿದೆ. ಬದುಕು ನಮ್ಮ ಆಯ್ಕೆ ಮತ್ತು ಬದ್ಧತೆ ಮೇಲೆ ಅವಲಂಬಿತವಾಗಿದೆ.
ಸಣ್ಣ ಪುಟ್ಟ ತಪ್ಪುಗಳು ದೊಡ್ಡ ನೋವಿಗೆ ತಳ್ಳುತ್ತವೆ. ಸುಖದ ಸವಿ ದಾರಿಯಲಿ ಮೈಮರೆತು ನಡೆವಾಗ ದಪ್ ಎಂದು ನುಂಗಲಾರದ ಕಡು ಕಷ್ಟ ಹಾಜರಿ ಹಾಕುತ್ತದೆ. ಗಾಬರಿ, ಆತಂಕ, ಹತಾಶೆ, ಖಿನ್ನತೆ, ಭಯ ಮೆಲ್ಲ ಮೆಲ್ಲನೇ ಬದುಕನ್ನು ಆವರಿಸಿಕೊಂಡು ಬಿಡುತ್ತದೆ. ಸಿಂಬಳು ಹುಳುವಿನಂತೆ ಕ್ರಮಿಸಿದ ಹಾದಿಯಲೆಲ್ಲ ಕಣ್ಣೀರಿನ ಕೋಡಿಯ ಗುರುತು ಚೆಲ್ಲುವಂತೆ ಮಾಡುತ್ತದೆ.ಇವೆಲ್ಲ ಮೈಮರೆವಿನಿಂದಲೇ ನಡೆಯುವಂಥವು. ಎಷ್ಟೆಲ್ಲ ಗೋಜಲಿದೆ ಜೀವನದಲ್ಲಿ ಎಂದು ಗೊಣಗುವುದಕ್ಕಿಂತ ಬದುಕಿನೆಡೆ ನಮ್ಮ ದೃಷಿಕೋನ ಬದಲಿಸಿ ಬಂದದ್ದನ್ನು ಸುವರ್ಣಾವಕಾಶದಂತೆ ಸ್ವೀಕರಿಸುವ ಮನಸ್ಸಿದ್ದರೆ ಬದುಕು ಸುಂದರ ಹೂದೋಟವಾಗುತ್ತದೆ. ನೋವೇ ನಲಿವಾಗಿ ಬದಲಾಗುತ್ತದೆ. ದಿನೇ ದಿನೇ ಹೊಸ ಹೊಸ ಕುಸುಮಗಳು ಅರಳಿ ನಿಲ್ಲುತ್ತವೆ. ಬದುಕು ತಾಜಾ ಹೂವಿನಂತೆ ನಗೆ ಚೆಲ್ಲುತ್ತದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ