ಪ್ರಗತಿವಾಹಿನಿ ಸುದ್ದಿ, ಮೈಸೂರು : ಶನಿವಾರ ಹುಣಸೂರು ಬಳಿ ಅಥಣಿ ತಾಲೂಕಿನ ಐಗಳಿ ಮೂಲದ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ತನಿಖೆ ಚುರುಕುಗೊಂಡಿದೆ.
ಯುವತಿಯ ಮೊಬೈಲ್ ನ್ನು ವಶಕ್ಕೆ ಪಡೆದಿರುವ ಪೊಲೀಸರು ಆಕೆ ಸಾವಿಗೂ ಮುನ್ನ ಜೋರಾಗಿ ಮಾತನಾಡಿರುವುದು ಯಾರೊಂದಿಗೆ ಎನ್ನುವುದನ್ನು ಪತ್ತೆ ಮಾಡಿ, ತನಿಖೆ ನಡೆಸುತ್ತಿದ್ದಾರೆ.
ಇದೊಂದು ವರದಕ್ಷಿಣೆ ಕಿರುಕುಳ ಪ್ರಕರಣ ಎನ್ನುವ ಶಂಕೆ ವ್ಯಕ್ತವಾಗಿದೆ.
ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಐಗಳಿ ಮೂಲದ ಮಹಿಳಾ ಗ್ರಾಮ ಲೆಕ್ಕಾಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಣಸೂರಿನ ಬಿಳಿಕೆರೆ ಹೋಬಳಿಯ ಗ್ರಾಮ ಲೆಕ್ಕಾಧಿಕಾರಿ ಕೃಷ್ಣಾಭಾಯಿ ತುಕಾರಾಮ ಪಡ್ಕೆ (25) ಆತ್ಮಹತ್ಯೆಗೆ ಶರಣಾದವರು. ಅವರ ಮೃತದೇಹ ಅವರು ವಾಸವಿದ್ದ ಬಾಡಿಗೆ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬಿಳಿಕೆರೆಯ ಎಸ್.ಬಿ.ಐ ಹಿಂದೆ ಬಾಡಿಗೆ ಮನೆಯೊಂದರಲ್ಲಿ ಚೈತ್ರಾ ಮತ್ತು ಅವರ ತಾಯಿ ಜೊತೆ ಅವರು ವಾಸವಾಗಿದ್ದರು. ಹನೂರಿನಲ್ಲಿ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಬೆಳಗಾವಿ ಮೂಲದ ಸುಭಾಷ್ ಬೋಸ್ಲೆ ಎಂಬುವವರನ್ನು ಒಂದು ತಿಂಗಳ ಹಿಂದಷ್ಟೇ ಕೃಷ್ಣಾಬಾಯಿ ವಿವಾಹವಾಗಿದ್ದರು. ರಜೆಯ ನಂತರ 4 ದಿನಗಳ ಹಿಂದೆ ಕೆಲಸಕ್ಕೆ ಹಾಜರಾಗಿದ್ದರು.
ಶನಿವಾರ ಬೆಳಗ್ಗೆ ಯಾರೊಂದಿಗೋ ಜೋರಾಗಿ ಫೋನ್ ನಲ್ಲಿ ಮಾತಾಡಿದ ನಂತರ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡು ನೇಣು ಹಾಕಿಕೊಂಡಿದ್ದಾರೆ. ಎಷ್ಟೇ ಕರೆದರೂ ಮಾತನಾಡದಿದ್ದಾಗ ಅಕ್ಕಪಕ್ಕದವರ ನೆರವಿನಿಂದ ಬಾಗಿಲು ಒಡೆದು ನೋಡಿದಾಗ ಕೊಠಡಿಯ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಕೃಷ್ಣಾಭಾಯಿ ಶವ ಪತ್ತೆಯಾಗಿತ್ತು.
ಬಿಳಿಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ