*ಬಿಸಿಲಿನ ತೀವ್ರತೆ ಹೆಚ್ಚಳ: ಮುನ್ನೆಚ್ಚರಿಕೆ ಕ್ರಮ ವಹಿಸಲು ತಜ್ಞರ ಸೂಚನೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಇತ್ತೀಚೆಗೆ ಉಷ್ಣತೆಯ ಮಟ್ಟ ಏರಿಕೆಯಾಗುತ್ತಿರುವ ಹಿನ್ನೆಲೆ ‘ಎಲ್ ನಿನೋ’ (El Niño) ಹವಾಮಾನ ಘಟನೆಯ ಪರಿಣಾಮಗಳ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಪೆಸಿಫಿಕ್ ಮಹಾಸಾಗರದ ಮೇಲ್ಮೈ ನೀರಿನ ತಾಪಮಾನ ಏರಿಕೆಯಿಂದ ಉಂಟಾಗುವ ಈ ಘಟನೆಯು ಜಾಗತಿಕ ಹವಾಮಾನ ಮಾದರಿಯಲ್ಲಿ ಬದಲಾವಣೆ ತರಬಹುದು.
ಭಾರತದಲ್ಲಿ ‘ಎಲ್ ನಿನೋ’ ಪರಿಣಾಮದಿಂದ ದಕ್ಷಿಣ-ಪಶ್ಚಿಮ ಮಳೆಗಾಲದ (Monsoon) ಆರಂಭದಲ್ಲಿ ಸ್ವಲ್ಪ ವಿಳಂಬವಾಗುವ ಅಥವಾ ಮಳೆಯ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆ ಇರುವುದಾಗಿ ಹವಾಮಾನ ತಜ್ಞರು ತಿಳಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಕೆಲವು ಪ್ರದೇಶಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ.
ಆರೋಗ್ಯದ ದೃಷ್ಟಿಯಿಂದ ಎಚ್ಚರಿಕೆ
ಹೆಚ್ಚಿದ ಉಷ್ಣತೆಯಿಂದ ದೇಹದ ನೀರಿನ ಕೊರತೆ (Dehydration) ಮತ್ತು ಹೀಟ್ ಸ್ಟ್ರೋಕ್ (Heat Stroke) ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ವೈದ್ಯರು ಸೂಚಿಸಿದ್ದಾರೆ. ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಹೊರಗಡೆ ಕೆಲಸ ಮಾಡುವವರು ಹೆಚ್ಚು ಎಚ್ಚರಿಕೆ ವಹಿಸಬೇಕು.
ಮುನ್ನೆಚ್ಚರಿಕಾ ಕ್ರಮಗಳು
ದಿನದೊಳಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಸೇವಿಸಬೇಕು. ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ನೇರ ಬಿಸಿಲಿನಲ್ಲಿ ಹೆಚ್ಚು ಕಾಲ ಇರುವುದನ್ನು ತಪ್ಪಿಸಬೇಕು. ಹಗುರವಾದ ಮತ್ತು ಹತ್ತಿಯ ಬಟ್ಟೆಗಳನ್ನು ಧರಿಸುವುದು ಸೂಕ್ತ. ಹೊರಗೆ ಹೋಗುವಾಗ ತಲೆ ಮುಚ್ಚಿಕೊಳ್ಳುವುದು, ನೆರಳಿನ ಸ್ಥಳದಲ್ಲಿ ವಿಶ್ರಾಂತಿ ಪಡೆಯುವುದು ಉತ್ತಮವಾಗಿದೆ.
ಹೀಟ್ ಸ್ಟ್ರೋಕ್ ಲಕ್ಷಣಗಳು
ತೀವ್ರ ತಲೆನೋವು, ತಲೆ ಸುತ್ತುವುದು, ವಾಂತಿ, ಮೂರ್ಚೆ ಅಥವಾ ಬೆವರು ಕಡಿಮೆಯಾಗುವುದು ಇತ್ಯಾದಿ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಅಗತ್ಯ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.
ಪ್ರಾಣಿಗಳ ಬಗ್ಗೆ ಇರಲಿ ಕಾಳಜಿ
ಬಿಸಿಲಿನ ತೀವ್ರತೆಯಂದ ಮನೆ ಹಾಗೂ ಬೀದಿ ಪ್ರಾಣಿಗಳಿಗೆ ನೀರು ಮತ್ತು ನೆರಳಿನ ವ್ಯವಸ್ಥೆ ಮಾಡುಬೇಕು. ಸಾರ್ವಜನಿಕರು ಬಿಸಿಲಿನ ತೀವ್ರತೆಯನ್ನು ಲಘುವಾಗಿ ತೆಗೆದುಕೊಳ್ಳದೆ, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವುದು ಒಳಿತು ಎಂದು ತಜ್ಞರು ತಿಳಿಸಿದ್ದಾರೆ.



