*ಮಕ್ಕಳು ಸೇರಿದಂತೆ ಇಂಟರ್ನೆಟ್ ಪ್ರತಿಯೊಬ್ಬರ ಮೂಲಭೂತ ಹಕ್ಕು*: *ಆದರೆ….. ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು*

ಪ್ರಗತಿವಾಹಿನಿ ಸುದ್ದಿ: ಇಂಟರ್ನೆಟ್ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇಂಟರ್ನೆಟ್ ಪ್ರವೇಶಿಸುವುದು ಮತ್ತು ಬಳಸುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು ಎಂದು ಘೋಷಿಸಿದೆ.
ಮಕ್ಕಳು ಸೇರಿದಂತೆ ಎಲ್ಲರಿಗೂ ಇಂತರ್ನೆಟ್ ಬಳಕೆ ಮೂಲಭೂತ ಹಕ್ಕು. ಮಕ್ಕಳಿಂದ ಈ ಹಕ್ಕನ್ನ ಸಂಪೂರ್ಣವಾಗಿ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸುರಕ್ಷತೆಯ ಹಿತದೃಷ್ಟಿಯಿಂದ ಮಕ್ಕಳನ್ನು ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳಿಂದ ಸಂಪೂರ್ಣವಾಗಿ ದೂರವಿಡಬೇಕೇ?ʼ ಎನ್ನುವ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು ಈ ತೀರ್ಪು ನೀಡಿದೆ.
ಇಂಟರ್ನೆಟ್ ಬಳಕೆಯನ್ನ ಮಕ್ಕಳಿಗೆ ಸಂಪೂರ್ಣವಾಗಿ ನಿರಾಕರಿಸುವುದು, ಅವರಿಗೆ ರಕ್ಷಿಸಬೇಕಾದ ವಿವೇಕವಿಲ್ಲ ಅಥವಾ ವ್ಯಕ್ತಪಡಿಸಬೇಕಾದ ವಾಕ್ಸ್ವಾತಂತ್ರ್ಯವಿಲ್ಲ ಎಂದು ಹೇಳಿದಂತೆಯೇ ಆಗುತ್ತದೆ. ಮಕ್ಕಳ ಸುರಕ್ಷತೆ ಮತ್ತು ಅವರ ಸ್ವಾತಂತ್ರ್ಯ ಪರಸ್ಪರ ವಿರುದ್ಧವಾದವುಗಳಲ್ಲ. ನಮ್ಮ ಮಕ್ಕಳು ಈ ಎರಡೂ ಹಕ್ಕುಗಳಿಗೆ ಅರ್ಹರಾಗಿದ್ದಾರೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಸಂವಿಧಾನದ 19(1)(ಎ) ವಿಧಿಯ ಅಡಿಯಲ್ಲಿ ಬರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನಲ್ಲಿ, ವಿಷಯಗಳನ್ನ ತಿಳಿದುಕೊಳ್ಳುವ, ಮಾಹಿತಿ ಪಡೆಯುವ ಹಾಗೂ ವಿಚಾರಗಳನ್ನ ಹಂಚಿಕೊಳ್ಳುವ ಹಕ್ಕುಗಳೂ ಸೇರಿವೆ ಎಂದು ಕೋರ್ಟ್ ಗಮನಸೆಳೆಯಿತು. ಇಂಟರ್ನೆಟ್ ಅನ್ನು ವಿಚಾರಗಳು, ಸೃಜನಶೀಲ ಅಭಿವ್ಯಕ್ತಿ ಮತ್ತು ಮಾಹಿತಿಯ ಒಂದು ವೇದಿಕೆ (ಮಾರುಕಟ್ಟೆ) ಎಂದು ಬಣ್ಣಿಸಿದ ಕೋರ್ಟ್, ಇದರ ಮೌಲ್ಯವು ಕೇವಲ ಅದರಲ್ಲಿರುವ ವಿಷಯಗಳಲ್ಲಿ ಮಾತ್ರವಲ್ಲದೇ, ವಯಸ್ಕರು ಮತ್ತು ಮಕ್ಕಳು ಇಬ್ಬರಿಗೂ ಅದು ಒದಗಿಸುವ ಪ್ರವೇಶಾವಕಾಶದಲ್ಲೂ ಅಡಗಿದೆ ಎಂದು ಹೇಳಿದೆ.
ವಿಶೇಷವಾಗಿ ದೂರದ ಪ್ರದೇಶಗಳಲ್ಲಿ ವಾಸಿಸುವ ಅನೇಕ ಮಕ್ಕಳಿಗೆ ಕಲಿಕೆ ಮತ್ತು ಮಾಹಿತಿ ಪಡೆಯಲು ಇಂಟರ್ನೆಟ್ ಬಹುತೇಕ ಏಕೈಕ ಮೂಲವಾಗಿದೆ. ವಿಶೇಷ ಅಗತ್ಯಗಳಿರುವ ಮಕ್ಕಳಿಗೂ ಆನ್ಲೈನ್ ವೇದಿಕೆಗಳು ಮಹತ್ವದ ಅವಕಾಶಗಳನ್ನು ಒದಗಿಸಬಹುದು. ಇಂತಹ ವೇದಿಕೆಗಳ ಮೂಲಕ ಅವರು ಸ್ನೇಹಿತರನ್ನ ಕಂಡುಕೊಳ್ಳಬಹುದು ಹಾಗೂ ತಮ್ಮಂತೆಯೇ ಇರುವ ಇತರರೊಂದಿಗೆ ಸಂಪರ್ಕ ಬೆಳೆಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿದೆ.
ಆನ್ಲೈನ್ನಲ್ಲಿ ಆಮಿಷಕ್ಕೆ ಒಳಗಾಗುವ, ಬೆದರಿಕೆ ಎದುರಿಸುವ ಅಥವಾ ಶೋಷಣೆಗೆ ಒಳಗಾಗುವ ಮಕ್ಕಳು, ಇಂಟರ್ನೆಟ್ ಬಳಸಿದ್ದಕ್ಕಾಗಿ ಪೋಷಕರು, ಪಾಲಕರು ಅಥವಾ ತಮಗೆ ನಂಬಿಕಸ್ಥರಾದ ವಯಸ್ಕರು ಬೈಯಬಹುದು ಎಂಬ ಭಯದಿಂದ ಘಟನೆಗಳನ್ನ ವರದಿ ಮಾಡಲು ಹಿಂಜರಿಯಬಹುದು. ಹಾಗಾಗಿ, ಮಕ್ಕಳ ಇಂಟರ್ನೆಟ್ ಬಳಕೆಯ ಮೇಲೆ ಸಂಪೂರ್ಣ ನಿರ್ಬಂಧ ಹೇರುವುದರಿಂದ ಇಂತಹ ಘಟನೆಗಳನ್ನು ಬಹಿರಂಗಪಡಿಸುವುದಕ್ಕೂ ಅಡ್ಡಿಯಾಗಬಹುದು ಎಂದು ತಿಳಿಸಿದೆ. ಇದರೊಂದಿಗೆ ವಯಸ್ಸಿನ ಆಧಾರದ ಮೇಲೆ ನಿರ್ಬಂಧಗಳನ್ನು ಜಾರಿಗೊಳಿಸುವುದರಿಂದ, ಬಳಕೆದಾರರ ವಯಸ್ಸನ್ನು ಗುರುತಿಸುವುದು ಮತ್ತು ನಿರಂತರವಾಗಿ ಪರಿಶೀಲಿಸುವುದು ಅನಿವಾರ್ಯವಾಗಬಹುದು ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಇಂತಹ ವ್ಯವಸ್ಥೆಗಳಲ್ಲಿ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದು ಮತ್ತು ಮೇಲ್ವಿಚಾರಣೆ ನಡೆಸುವುದು ಅಗತ್ಯವಾಗಬಹುದು. ಇದರಿಂದ ಮಾಹಿತಿ ದುರುಪಯೋಗ ಹಾಗೂ ವ್ಯಕ್ತಿಗಳ ಮೇಲೆ ನಿಗಾ ಇಡುವ ಅಪಾಯಗಳು ಉಂಟಾಗಬಹುದು ಎಂದು ಪೀಠ ಎಚ್ಚರಿಸಿದೆ.
ಸುಪ್ರೀಂ ಕೋರ್ಟ್ ಸೂಚನೆ:
ಮಕ್ಕಳ ಇಂಟರ್ನೆಟ್ ಬಳಕೆಯ ಮೇಲೆ ಸಂಪೂರ್ಣ ನಿರ್ಬಂಧ ತಿರಸ್ಕರಿಸಿದರೂ, ಅವರ ಸುರಕ್ಷತೆಗಾಗಿ ವಯಸ್ಸಿಗೆ ಅನುಗುಣವಾದ ರಕ್ಷಣಾತ್ಮಕ ಕ್ರಮಗಳನ್ನ ಜಾರಿಗೊಳಿಸುವುದಕ್ಕೆ ಕೋರ್ಟ್ ಸಹಮತ ವ್ಯಕ್ತಪಡಿಸಿದೆ.
ಮಕ್ಕಳು ಸಾಮಾಜಿಕ ಮಾಧ್ಯಮ ಬಳಸುವಾಗ ಪೋಷಕರ ಒಪ್ಪಿಗೆ, ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಗೆ ಹೆಚ್ಚಿನ ಆದ್ಯತೆ ನೀಡಬಹುದು. ಮಕ್ಕಳ ಖಾತೆಗಳಿಗಾಗಿ ಪ್ರತ್ಯೇಕ ‘ಚೈಲ್ಡ್ ಮೋಡ್’ (ಮಕ್ಕಳ ಸುರಕ್ಷತಾ ಮೋಡ್) ಪರಿಚಯಿಸುವ ಸಾಧ್ಯತೆಯನ್ನೂ ಪ್ರಸ್ತಾಪಿಸಿದೆ.
ಜೊತೆಗೆ ಮಕ್ಕಳ ಖಾತೆಗಳನ್ನು ಆರಂಭದಿಂದಲೇ ಖಾಸಗಿಯಾಗಿ ಇರಿಸುವುದು. ಅಪರಿಚಿತ ವಯಸ್ಕರು ಮಕ್ಕಳಿಗೆ ಸಂದೇಶ ಕಳುಹಿಸುವುದು ಅಥವಾ ಸಂಪರ್ಕ ಸಾಧಿಸುವುದರ ಮೇಲೆ ನಿರ್ಬಂಧಗಳನ್ನ ವಿಧಿಸುವುದು. ಮಕ್ಕಳಿಗೆ ತೋರಿಸಲಾಗುವ ಜಾಹೀರಾತುಗಳು ಹಾಗೂ ಆನ್ಲೈನ್ ವಿಷಯಗಳನ್ನ ನಿಯಂತ್ರಿಸುವುದು. ವಿಶೇಷವಾಗಿ ಹದಿಹರೆಯಕ್ಕೆ ಮುನ್ನದ ವಯಸ್ಸಿನ ಮಕ್ಕಳಿಗೆ ಸೂಕ್ತವಾದ ಸುರಕ್ಷತಾ ಕ್ರಮಗಳನ್ನು ರೂಪಿಸುವುದು. ಸಮಂಜಸವಾದ ಮತ್ತು ಅಗತ್ಯಕ್ಕೆ ಅನುಗುಣವಾದ ವಿಧಾನಗಳ ಮೂಲಕ ಪೋಷಕರ ಒಪ್ಪಿಗೆ ಪರಿಶೀಲಿಸುವುದು. ಈ ಕ್ರಮಗಳನ್ನು ಹೇಗೆ ಜಾರಿಗೊಳಿಸಬೇಕು ಎಂಬುದರ ವಿವರಗಳನ್ನು ರೂಪಿಸುವ ಜವಾಬ್ದಾರಿಯನ್ನು ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಬಿಟ್ಟಿದೆ ಎಂದು ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



