ಸೆ.8ರಂದೇ ಸುರೇಶ ಅಂಗಡಿಗೆ ಜ್ವರ ಬಂದಿತ್ತು, ಹೇಳಿದರೂ ಪರೀಕ್ಷೆ ಮಾಡಿಸಿಕೊಳ್ಳಲಿಲ್ಲ – ಅಳಿಯನ ಬೇಸರ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇತ್ತೀಚೆಗೆ ಕೊರೋನಾದಿಂದ ನಿಧನರಾದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ಸೆ.8ರಂದೇ ಜ್ವರ ಬಂದಿತ್ತು. ಆದರೆ ನಾವೆಲ್ಲರೂ ಹೇಳಿದರೂ ಅವರು ಪರೀಕ್ಷೆ ಮಾಡಿಕೊಳ್ಳದೆ ನಿರ್ಲಕ್ಷ್ಯ ಮಾಡಿದರು. ಗುಳಿಗೆ ನುಂಗಿ ಮಲಗಿದರು. ನಿರ್ಲಕ್ಷ್ಯ ಮಾಡದಿದ್ದರೆ ನಾವು ಅವರನ್ನು ಕಳೆದುಕೊಳ್ಳುವ ಸಂದರ್ಭ ಬರುತ್ತಿರಲಿಲ್ಲ ಎಂದು ಅವರ ಅಳಿಯ ರಾಹುಲ್ ಪಾಟೀಲ ಬಹಿರಂಗಪಡಿಸಿದರು.
ಭಾನುವಾರ ಸಂಜೆ ಸಂತಮೀರಾ ಶಾಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೇತೃತ್ವದಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ, ಎಬಿವಿಪಿ, ರಾಷ್ಟ್ರ ಸೇವಿಕಾ ಸಮಿತಿ, ಉದ್ಯೋಗ ಭಾರತಿ, ವಿದ್ಯಾಭಾರತಿ, ಭಾರತೀಯ ಜನತಾ ಪಾರ್ಟಿಗಳ ವತಿಯಿಂದ ಸಂಘಟಿಸಲಾಗಿದ್ದ ಶೃದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಬೆಳಗಾವಿ – ಧಾರವಾಡ ನೇರ ರೈಲ್ವೆ ಮಾರ್ಗಕ್ಕೆ ಮಂಜೂರಿ ದೊರಕಿದ್ದಕ್ಕೆ ಅವರು ಬಹಳ ಖುಷಿಪಟ್ಟಿದ್ದರು. ಆ ಸಂತಸದಲ್ಲಿ ಎಲ್ಲ ನೋವು, ಮುನ್ನೆಚ್ಚರಿಕೆಗಳನ್ನೂ ಮರೆತರು. ಹಾಗಾಗಿ ಪರಿಸ್ಥಿತಿ ಕೈಮೀರಿ ಹೋಯಿತು ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಕೈಗಾರಿಕೆ ಸಚಿವರೂ, ಅಂಗಡಿಯವರ ಬೀಗರೂ ಆದ ಜಗದೀಶ ಶೆಟ್ಟರ್ ಮಾತನಾಡಿ, ಸುರೇಶ ಅಂಗಡಿ ಬೆಳಗಾವಿ ಜಿಲ್ಲೆಯಲ್ಲಿ ಕೆಳಮಟ್ಟದಿಂದ ಪಕ್ಷ ಕಟ್ಟಿ ಬೆಳೆಸಿದ್ದರು. ಮಾಸ್ಕ್ ಧರಿಸದೆ ನಿರ್ಲಕ್ಷ್ಯವಹಿಸಿದರು. ಹಲವು ಬಾರಿ ಹೇಳಿದರೂ ನನ್ನ ಆರೋಗ್ಯ ಚೆನ್ನಾಗಿದೆ. ನನಗೆ ಏನೂ ಆಗುವುದಿಲ್ಲ ಎನ್ನುತ್ತಿದ್ದರು ಎಂದು ನೋಂದು ನುಡಿದರು.
ರಾಜ್ಯಸಭೆ ಮಾಜಿ ಸದಸ್ಯ, ಕೆಎಲ್ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ನಾವುಬ್ಬರೂ ಜೊತೆಯಾಗಿ ಯಾವುದೇ ಕೆಲಸವಿದ್ದರೂ ಮಾಡುತ್ತಿದ್ದೆವು. ಏನೇ ಹೇಳಿದರೂ ಬೇಸರಿಸಿಕೊಳ್ಳುತ್ತಿರಲಿಲ್ಲ. ಅನೇಕ ಬಾರಿ ನಾನು ಎಚ್ಚರಿಸಿದರೂ ಅವರು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ ಎಂದರು.
ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಒಬ್ಬ ಜನಪ್ರತಿನಿಧಿ ಹೇಗಿರಬೇಕು ಎನ್ನುವುದಕ್ಕೆ ಆದರ್ಶರಾಗಿ ಬದುಕಿದ್ದ ಸುರೇಶ ಅಂಗಡಿ, ಆದರ್ಶ ವ್ಯಕ್ತಿಯಾಗಿ ಜೀವಿಸಿದ್ದರು ಎಂದು ಸ್ಮರಿಸಿದರು.
ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಶಾಸಕ ಅನಿಲ ಬೆನಕೆ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ, ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ್, ವಿದ್ಯಾಭಾರತಿಯ ರಾಜ್ಯಾಧ್ಯಕ್ಷ ಪರಮೇಶ್ವರ ಹೆಗಡೆ, ರಾಘವೇಂದ್ರ ಕಾಗವಾಡ , ಸಚಿನ್ ಸಬ್ನಿಸ್, ಪೃಥ್ವಿ ಕುಮಾರ್, ಡಾ.ಬಾಗೋಜಿ, ಬಾಳಣ್ಣ ಕಗ್ಗಣಗಿ, ಅಂಗಡಿಯವರ ಪುತ್ರಿ ಶೃದ್ಧಾ, ಇನ್ನೋರ್ವ ಅಳಿಯ ಸಂಕಲ್ಪ ಶೆಟ್ಟರ್ ಸೇರಿದಂತೆ ಹಲವಾರು ಜನರು ಪಾಲ್ಗೊಂಡಿದ್ದರು.
(ಸುರೇಶ ಅಂಗಡಿ ಸೆ.11ರಂದು ನವದೆಹಲಿಗೆ ತೆರಳಿದ್ದರು. ಅಲ್ಲಿ ಲೋಕಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕಿದ್ದರಿಂದ, ಅಧಿವೇಶನಕ್ಕೆ ಮುನ್ನ ಕೊರೋನಾ ಟೆಸ್ಟ್ ಕಡ್ಡಾಯ ಮಾಡಿದ್ದರಿಂದ ಪರೀಕ್ಷೆ ಮಾಡಿಸಿಕೊಂಡರು. ಆಗಲೇ ಅವರಿಗೆ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಆದರೂ ತಮಗೆ ರೋಗಲಕ್ಷಣಗಳಿಲ್ಲ ಎಂದು ಟ್ವೀಟ್ ಮಾಡಿದ್ದರು. ಆದರೆ ಅದಕ್ಕೂ ಬಹಳದಿನ ಮೊದಲೇ ಕೊರೋನಾ ದಾಳಿ ಮಾಡಿತ್ತು ಎನ್ನುವುದು ಈಗ ಬಹಿರಂಗವಾಗಿದೆ. ಸ್ವಲ್ಪ ಕಾಳಜಿ ವಹಿಸಿದ್ದರೆ ಅವರು ಬೆಳಗಾವಿಯಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದರೆನಿಸುತ್ತದೆ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ