*ಹೆಚ್ಚುವರಿ ವಿದ್ಯುತ್ ಡಿಸ್ಕಾಮ್ ಗಳಿಗೆ ಮಾರಾಟ ಮಾಡಲು ಅವಕಾಶ: ಪ್ರಲ್ಹಾದ ಜೋಶಿ*
ಪ್ರಗತಿವಾಹಿನಿ ಸುದ್ದಿ: ಸೂರ್ಯ ಘರ್ ದೀರ್ಘಾವಧಿಯಲ್ಲಿ ಒಂದು ಉಚಿತ ವಿದ್ಯುತ್ ಯೋಜನೆಯಾಗಿದ್ದು, ಈಗಾಗಲೇ 1.3 ಕೋಟಿ ನೋಂದಣಿ ಮಾಡಲಾಗಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ವಿವರಿಸಿದ ಸಚಿವರು, ಫೆ.29ರಂದು ಆರಂಭಿಸಿದ ಸೂರ್ಯ ಘರ್ ಯೋಜನೆ ಅನುಷ್ಠಾನ ಕಳೆದೊಂದು ತಿಂಗಳಿಂದ ಚುರುಕಾಗಿದೆ. ಇದು ಬಡವರಿಗೆ ಮತ್ತು ಮಾಧ್ಯಮ ವರ್ಗಕ್ಕೆ ಅತ್ಯುಪಯುಕ್ತ ಯೋಜನೆಯಾಗಿದೆ ಎಂದರು.
ಸೂರ್ಯ ಘರ್ ಯೋಜನೆಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಬೇರೆ ವಿಭಾಗಗಳಿಲ್ಲ. ಸೌರಶಕ್ತಿ ಘಟಕ ಸ್ಥಾಪಿಸಲು ಬಯಸುವ ಎಲ್ಲರಿಗೂ ಬೆಂಬಲ ನೀಡುತ್ತಿದ್ದೇವೆ. ಎಲ್ಲಾ ರಾಜ್ಯಗಳಲ್ಲಿ ತ್ವರಿತವಾಗಿ ಜಾರಿಗೆ ತರಲು ಡಿಸ್ಕಾಮ್ ಗಳಿಗೆ ನಿರ್ದೇಶಸಿದ್ದೇವೆ ಎಂದರು.
ಈ ಯೋಜನೆಯಡಿ 3 KW ಘಟಕ ಸ್ಥಾಪನೆಗೆ ಕೇಂದ್ರ ಸರ್ಕಾರ 78,000 ರೂ. ಸಬ್ಸಿಡಿ ನೀಡುತ್ತಿದೆ. ಜತೆಗೆ ಬ್ಯಾಂಕ್ ಸಾಲ ಸೌಲಭ್ಯವೂ ಇರುತ್ತದೆ ಎಂದು ಹೇಳಿದರು.
ಸಾಮಾನ್ಯವಾಗಿ 3 KW ಘಟಕ 300 ಯೂನಿಟ್ ವಿದ್ಯುತ್ ಉತ್ಪಾದನೆ ಮಾಡುತ್ತದೆ. ಸೂರ್ಯ ಘರ ಘಟಕಕ್ಕೆ ಮೇಲ್ಛಾವಣಿ ಸ್ಥಾಪನೆಗೆ 1.5 ಲಕ್ಷ ರೂ. ವೆಚ್ಚವಾಗಲಿದೆ. 78,000 ರೂ. ಸಬ್ಸಿಡಿ ಲಭ್ಯವಿದ್ದು, ಉಳಿದ ಬಂಡವಾಳಕ್ಕೆ ಫಲಾನುಭವಿಗಳು ಬ್ಯಾಂಕ್ ಸಾಲ ಪಡೆಯಬಹುದು. 300 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸಿದಲ್ಲಿ, ಹೆಚ್ಚುವರಿ ವಿದ್ಯುತ್ ಅನ್ನು ಡಿಸ್ಕಾಮ್ ಗಳಿಗೆ ಮಾರಾಟ ಮಾಡಿ ಹಣ ಪಡೆದುಕೊಳ್ಳಲು ಅವಕಾಶವಿದೆ ಎಂದು ವಿವರಿಸಿದರು.
ಸಾಮಾನ್ಯ 5 ಜನರಿರುವ ಮಧ್ಯಮ ವರ್ಗದವರ ಮನೆಗಳಿಗೆ 300 ಯೂನಿಟ್ ವಿದ್ಯುತ್ ಸಾಕಷ್ಟಾಗುತ್ತದೆ ಎಂದು ಅಭಿಪ್ರಾಯ ಮಂಡಿಸಿದ ಸಚಿವರು, ಡಿಸ್ಕಾಮ್ ಗಳು ನವೀಕರಿಸಬಹುದಾದ ಇಂಧನವನ್ನು ಖರೀದಿಸುವ ಬಾಧ್ಯತೆ ಹೊಂದಿದ್ದು, ಇದಕ್ಕಾಗಿ ಕುಟುಂಬಗಳಿಗೆ ಮರುಪಾವತಿ ಮಾಡಲಾಗುತ್ತದೆ ಮತ್ತು ದೀರ್ಘಾವಧಿಯಲ್ಲಿ ಅದು ಮಧ್ಯಮವರ್ಗಕ್ಕೆ ಉಚಿತವಾಗುತ್ತದೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ