ಪ್ರಗತಿವಾಹಿನಿ ಸುದ್ದಿ: ಬಳ್ಳಾರಿ ನಿಲ್ಲೆಯ ಸಿರಗುಪ್ಪ ತಾಲೂಕಿನ ಹೆರಕಲ್ಲು ಗ್ರಾಮದಲ್ಲಿ ಕಲುಷಿತ ಆಹಾರ ಸೇವಿಸಿ 63ಕ್ಕೂ ಹೆಚ್ಚು ಕುರಿಗಳು ಸಾವಿಗೀಡಾದ ಘಟನೆ ನಡೆದಿದೆ.
ಗ್ರಾಮದ ಗುಮ್ಮಡಿ ರಾಜಶೇಖರ, ಗಾದಿಲಿಂಗ ಹಾಗೂ ಮಂಜಪ್ಪ ಇವರಿಗೆ ಸೇರಿದ ಕುರಿಮಂದೆ ಮಂಗಳವಾರದಿಂದ ಅನಾರೋಗ್ಯಕ್ಕೆ ಈಡಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿಯಿಂದ ಒಂದೊಂದಾಗಿ ಸಾವಿಗೀಡಾಗಿ ಬುಧವಾರ ಸಂಜೆ ವೇಳೆಗೆ 63 ಕುರಿಗಳು ಸತ್ತಿವೆ. ಔಷಧಿ ನೀಡಿದರೂ ಸಾವಿನ ಸಂಖ್ಯೆ ನಿಲ್ಲುತ್ತಿಲ್ಲ ಎಂದು ಕುರಿಗಾಹಿ ಗಾದಿಲಿಂಗ ಆತಂಕ ವ್ಯಕ್ತಪಡಿಸಿದರು.
ಪಶು ಇಲಾಖೆಯ ವೈದ್ಯರಿಗೆ ವಿಷಯ ತಿಳಿದು, ಇಲಾಖೆಯ ಹಿರಿಯ ಉಪನಿರ್ದೇಶಕ ಡಾ. ವಿನೋದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅವರು ಮಾತನಾಡಿ ಭತ್ತದ ಕಟಾವಿನಿಂದ ದೊರೆಯುವ ಹೊಟ್ಟಿನಂತಹ ತ್ಯಾಜ್ಯವನ್ನು ಅತಿಯಾಗಿ ತಿಂದ ಕಾರಣ ಸಾವನ್ನಪ್ಪಿರಬಹುದು ಎಂದು ನಮ್ಮ ಪ್ರಯೋಗಾಲಯ ತಜ್ಞ ಡಾ. ರಾಜಶೇಖರ್ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದ್ದು ಕುರುಗಾಯಿಗಳಿಗೆ ಸೂಕ್ತ ಪರಿಹಾರ ದೊರಕಿಸಲು ಪ್ರಯತ್ನಿಸಲಾಗುವುದು ಅಲ್ಲದೆ ನಮ್ಮ ವೈದ್ಯಾಧಿಕಾರಿಗಳ ತಂಡ ನಿರಂತರವಾಗಿ ನಿಗಾ ವಹಿಸುತ್ತಿದ್ದು ಇನ್ನುಳಿದ ಕುರಿಗಳಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸ್ಥಳಕ್ಕೆ ಸಿರುಗುಪ್ಪ ಪಶು ವೈದ್ಯಾಧಿಕಾರಿ ಡಾ. ವೈ. ಗಂಗಾಧರ, ತೆಕ್ಕಲಕೋಟೆ ಪೊಲೀಸ್ ಠಾಣೆಯ ಪಿಎಸ್ಐ ತಾರಾಬಾಯಿ ಮುಖ್ಯ ಪಶು ವೈದ್ಯಾಧಿಕಾರಿ ಖಾಜಾ ಹುಸೇನ್ ಹಿರಿಯ ವೈದ್ಯಕೀಯ ಪರಿವೀಕ್ಷಕ ಹುಚ್ಚೀರಪ್ಪ, ಸಿಬ್ಬಂದಿಗಳಾದ ಕೆ ದೇವೇಂದ್ರಪ್ಪ ವಿಜಯ ಶಿವಪ್ರಸಾದ್ ರಾಜ ಸುಹಾನ್ ಮಲ್ಲಯ್ಯ ಶಿವರಾಜ್ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ