*ಸುವರ್ಣಸೌಧದ ಸಭಾಂಗಣವೇ ರಣಾಂಗಣ*: *ರೈತ ಸಂಘಟನೆಗಳ ಎರಡು ಬಣಗಳ ನಡುವೆ ಮಾರಾಮಾರಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಬ್ಬು ಬೆಳೆಗಾರರ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆಯಬೇಕಿದ್ದ ಮಹತ್ವದ ಸಭೆಗೂ ಮುನ್ನವೇ ಸುವರ್ಣ ವಿಧಾನಸೌಧದ ಸಭಾಂಗಣ ರಣಾಂಗಣವಾಗಿ ಮಾರ್ಪಟ್ಟ ಘಟನೆ ಸೋಮವಾರ ನಡೆದಿದೆ.
ರಾಜ್ಯ ರೈತ ಸಂಘದ ಚೂನಪ್ಪ ಪೂಜೇರಿ ಬಣ ಹಾಗೂ ಕೋಡಿಹಳ್ಳಿ ಚಂದ್ರಶೇಖರ ಬಣದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ತಳ್ಳಾಟ- ನೂಕಾಟದೊಂದಿಗೆ ಮಾರಾಮಾರಿ ನಡೆದಿದೆ.
ಸಭಾಂಗಣದಲ್ಲಿ ಕುಡಿಯುವ ನೀರು ಹಾಗೂ ಚಹಾ ವ್ಯವಸ್ಥೆ ಸರಿಯಾಗಿ ಇಲ್ಲ ಎಂಬ ವಿಚಾರದಿಂದ ಆರಂಭವಾದ ಗಲಾಟೆ, ಕಬ್ಬಿನ ದರದ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ತೀವ್ರ ಸ್ವರೂಪ ಪಡೆದುಕೊಂಡಿತು. ಈ ವೇಳೆ ನೀರು ಕುಡಿಯಲು ಮೇಜಿನ ಮೇಲಿಟ್ಟಿದ್ದ ಗಾಜಿನ ಗ್ಲಾಸ್ಗಳನ್ನು ಪರಸ್ಪರ ಎಸೆದಾಡಲಾಗಿದ್ದು, ಇಬ್ಬರು ರೈತರಿಗೆ ಎದೆಗೆ ಪೆಟ್ಟಾಗಿದೆ ಎನ್ನಲಾಗಿದೆ.

ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಮುಗಿದ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯಲ್ಲಮ್ಮನಗುಡ್ಡಕ್ಕೆ ತೆರಳಿದ್ದರು. ಸಂಜೆ ರೈತ ಮುಖಂಡರ ಸಭೆ ಆರಂಭವಾಗಬೇಕಿದ್ದ ಹಿನ್ನೆಲೆಯಲ್ಲಿ ಸಭಾಂಗಣದಲ್ಲಿ ರೈತ ಸಂಘಟನೆಗಳ ಮುಖಂಡರು ತಮ್ಮ ಬೇಡಿಕೆಗಳ ಕುರಿತು ಚರ್ಚಿಸುತ್ತಿದ್ದರು. ಈ ಸಂದರ್ಭದಲ್ಲಿ ಕೋಡಿಹಳ್ಳಿ ಚಂದ್ರಶೇಖರ ಬಣದ ಮುಖಂಡ ಮಹಾಂತೇಶ ಜಮಾದಾರ ಮಾತನಾಡುತ್ತಿದ್ದಾಗ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಗೊಂದಲ ಆರಂಭವಾಯಿತು.
ಬಳಿಕ ಮಧ್ಯಪ್ರವೇಶಿಸಿದ ಚೂನಪ್ಪ ಪೂಜೇರಿ ರೈತರನ್ನು ಸಮಾಧಾನಪಡಿಸಿ ಮಾತನಾಡಲು ಮುಂದಾದರು. “ಈ ವರ್ಷ ಪ್ರತಿ ಟನ್ ಕಬ್ಬಿಗೆ ₹4,500 ದರ ಪಡೆದೇ ತೀರುತ್ತೇವೆ” ಎಂದು ಹೇಳಿದಾಗ ಕೋಡಿಹಳ್ಳಿ ಬಣದ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
“ಹೊರಗೆ ₹5,500 ದರಕ್ಕಾಗಿ ಹೋರಾಟ ಮಾಡುತ್ತೀರಿ, ಆದರೆ ಸಭೆಯೊಳಗೆ ₹4,500 ಎನ್ನುತ್ತಿದ್ದೀರಿ. ಇದು ಏಕೆ?” ಎಂದು ಪ್ರಶ್ನಿಸಿದ ಕೋಡಿಹಳ್ಳಿ ಬಣದ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಈ ವೇಳೆ ಮಾತಿನ ಚಕಮಕಿ ಮತ್ತಷ್ಟು ಹೆಚ್ಚಾಗಿ, ಎರಡೂ ಬಣಗಳ ಕಾರ್ಯಕರ್ತರು ಪರಸ್ಪರ ವಾಗ್ವಾದಕ್ಕಿಳಿದರು.
ಚೂನಪ್ಪ ಪೂಜೇರಿ ಅವರು ₹4,500 ಕಬ್ಬಿನ ದರವಾಗಿದ್ದು, ರಾಜ್ಯ ಸರ್ಕಾರದ ₹1,000 ಪ್ರೋತ್ಸಾಹಧನ ಸೇರಿದರೆ ರೈತರಿಗೆ ಒಟ್ಟು ₹5,500 ದೊರೆಯಲಿದೆ ಎಂದು ಸ್ಪಷ್ಟನೆ ನೀಡಲು ಯತ್ನಿಸಿದರು. ಆದರೆ, ಎರಡೂ ಬಣಗಳ ನಡುವೆ ಕೂಗಾಟ ಹೆಚ್ಚಾಗಿ ಪರಿಸ್ಥಿತಿ ನಿಯಂತ್ರಣ ತಪ್ಪಿತು.
ಈ ವೇಳೆ ಚೂನಪ್ಪ ಪೂಜೇರಿ ಬಣದ ಕೆಲವರು ಎದುರಾಳಿ ಬಣದತ್ತ ಗಾಜಿನ ಗ್ಲಾಸ್ಗಳನ್ನು ಎಸೆದಿದ್ದಾರೆ ಎನ್ನಲಾಗಿದ್ದು, ಇದರಿಂದ ಆಕ್ರೋಶಗೊಂಡ ಕೋಡಿಹಳ್ಳಿ ಬಣದ ರೈತರು ಎದುರಾಳಿ ಗುಂಪಿನ ಮೇಲೆ ಮುಗಿಬಿದ್ದರು. ಸಭಾಂಗಣದಲ್ಲಿ ಕೆಲಕಾಲ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಸೇರಿದಂತೆ ಕೆಲವರು ಮಧ್ಯಪ್ರವೇಶಿಸಿ ಎರಡೂ ಬಣಗಳ ಕಾರ್ಯಕರ್ತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೂ ಗಲಾಟೆ ಮುಂದುವರಿದ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಗಲಾಟೆಯಲ್ಲಿ ತೊಡಗಿದ್ದ ಇಬ್ಬರು ರೈತರನ್ನು ಸಭಾಂಗಣದಿಂದ ಹೊರಗೆ ಕರೆದೊಯ್ದರು.
ಪೊಲೀಸರ ಮಧ್ಯಪ್ರವೇಶದ ಬಳಿಕ ಪರಿಸ್ಥಿತಿ ತಿಳಿಗೊಂಡಿತು. ಕಬ್ಬಿನ ದರ ನಿಗದಿ ಕುರಿತು ಸರ್ಕಾರದೊಂದಿಗೆ ಮಹತ್ವದ ಚರ್ಚೆ ನಡೆಯಬೇಕಿದ್ದ ಸಂದರ್ಭದಲ್ಲಿ ರೈತ ಸಂಘಟನೆಗಳ ಮುಖಂಡರ ನಡುವೆಯೇ ನಡೆದ ಈ ಗಲಾಟೆ ಸಭೆಯ ವಾತಾವರಣವನ್ನು ಮತ್ತಷ್ಟು ಉದ್ವಿಗ್ನಗೊಳಿಸಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




