Karnataka News

*ಸಾಲ ತೀರಿಸಲಾಗದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನ: ಇಬ್ಬರು ಸಾವು*

ಪ್ರಗತಿವಾಹಿನಿ ಸುದ್ದಿ : ಸಾಲ ತೀರಿಸಲಾಗದೆ ಮರ್ಯಾದೆಗೆ ಅಂಜಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿದ್ದು, ಇಬ್ಬರು ಸಾವನ್ನಪ್ಪಿದರೆ, ಓರ್ವನ ಸ್ಥಿತಿ ಚಿಂತಾಜನಕವಾಗಿದೆ. 

ಕುಂದಾಪುರದ ತೆಕ್ಕಟ್ಟೆಯಲ್ಲಿ ಡೆತ್ ನೋಟ್ ಬರೆದಿಟ್ಟು ಅಪ್ಪ ಮಗ ಮೃತಪಟ್ಟಿದ್ದರೆ, ತಾಯಿಯ ಸ್ಥಿತಿ ಗಂಭೀರವಾಗಿದೆ.

ಮೃತರನ್ನು ಕಂಚುಗಾರುಬೆಟ್ಟು ನಿವಾಸಿ ಮಾಧವ ದೇವಾಡಿಗ (56) ಹಾಗೂ ಗಿರೀಶ್ ದೇವಾಡಿಗ (22) ಎಂದು ಗುರುತಿಸಲಾಗಿದೆ. ಇನ್ನು ಪತ್ನಿ ತಾರಾ ದೇವಾಡಿಗ ಸ್ಥಿತಿ ಗಂಭೀರವಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಧವ ಹಾಗೂ ಗಿರೀಶ್ ಮೊದಲು ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದರು. ಪತಿ ಹಾಗೂ ಮಗ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದು ಅದೇ ಬಾವಿಗೆ ತಾರಾ ಕೂಡ ಹಾರಿದ್ದು ಈ ವೇಳೆ ಕಿರುಚಾಟ ಕೇಳಿ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ.

ಕೂಡಲೇ ತಾರಾ ಅವರನ್ನು ರಕ್ಷಣೆ ಮಾಡಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಗಂಭೀರವಾಗಿದೆ. ಇನ್ನು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಇಬ್ಬರ ಮೃತದೇಹವನ್ನು ಮೇಲಕ್ಕೆ ಎತ್ತಿದ್ದಾರೆ.

ಮಾಧವ ಎಂಬುವವರು ಪೆಟ್ರೋಲ್ ಬಂಕ್ ವೊಂದರಲ್ಲಿ ಕೆಲಸ ಮಾಡುತ್ತಿದ್ದು ಮೈತುಂಬ ಸಾಲ ಮಾಡಿಕೊಂಡಿದ್ದರು. ಇನ್ನೊಂದೆಡೆ ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್ ಗಳು ನೋಟಿಸ್‌ ನೀಡಿದ್ದವು. ಇದರಿಂದ ಮರ್ಯಾದೆಗೆ ಅಂಜಿ ಡೆತ್ ನೋಟ್ ಬರೆದಿಟ್ಟು ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button