ಸ್ವಿಸ್ ಬ್ಯಾಂಕ್ ಖಾತೆಗಳು ಇನ್ನು ರಹಸ್ಯವಲ್ಲ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಸ್ವಿಸ್ ಬ್ಯಾಂಕ್ – ಭಾರತದಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾಗುತ್ತಿರುವ ವಿಷಯ. ರಾಜಕಾರಣಿಗಳು, ಉದ್ಯಮಿಗಳು ಭಾರತದ ದುಡ್ಡನ್ನೆಲ್ಲ ಒಯ್ದು ಸ್ವಿಸ್ ಬ್ಯಾಂಕ್ ನಲ್ಲಿಡುತ್ತಾರೆ, ತೆರಿಗೆ ವಂಚನೆ ಮಾಡುತ್ತಾರೆ. ಭಾರತದ ಆರ್ಥಿಕತೆಗೆ ದೊಡ್ಡ ಹೊಡೆತ ನೀಡುತ್ತಾರೆ ಎನ್ನುವ ಆರೋಪವಿದೆ.
ನರೇಂದ್ರ ಮೋದಿ ಭಾರತದ ಪ್ರಧಾನಿ ಆದ ನಂತರ ಈ ವಿಷಯ ಇನ್ನಷ್ಟು ಚರ್ಚೆಗೆ ಒಳಗಾಗಿದೆ. ಸ್ವಿಸ್ ಬ್ಯಾಂಕ್ ನಲ್ಲಿರುವ ಹಣವನ್ನು ಮರಳಿ ತರುವುದಾಗಿ ಬಿಜೆಪಿ ನೀಡಿದ್ದ ವಾಗ್ದಾನವೇ ಇದಕ್ಕೆ ಕಾರಣ. ಸ್ವಿಸ್ ಬ್ಯಾಂಕ್ ಹಣ ವಾಪಸ್ ತಂದು ಭಾರತೀಯರ ಖಾತೆಗಳ ತಲಾ 15 ಲಕ್ಷ ರೂ. ಹಾಕಲಾಗುತ್ತದೆ ಎನ್ನುವ ವದಂತಿಯೂ ಹರಡಿತ್ತು.
ಈಗ ಸ್ವಿಸ್ ಬ್ಯಾಂಕ್ ವಿವಾದಕ್ಕೆ ಹೊಸತಿರುವು ಸಿಕ್ಕಿದೆ. ಸ್ವಿಸ್ ಬ್ಯಾಂಕ್ ತೆರಿಗೆಗಳ್ಳರಿಗೆ ಇನ್ನು ಸೇಫ್ ಅಲ್ಲ. ಅಲ್ಲಿನ ಯಾವ ಮಾಹಿತಿಯೂ ಇನ್ನು ಮುಂದೆ ರಹಸ್ಯವಲ್ಲ.
ಭಾರತ ಮಾಡಿಕೊಂಡಿರುವ ಐತಿಹಾಸಿಕ ಒಪ್ಪಂದದ ಅನ್ವಯ ಇನ್ನು ಮುಂದೆ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರು ಹಣ ಇಟ್ಟರೆ ಅದು ಸರಕಾರಕ್ಕೆ ತಿಳಿಯುತ್ತದೆ. ಅಲ್ಲಿ ಖಾತೆ ಇರುವವರ ಮಾಹಿತಿ, ಖಾತೆಗೆ ಹಣ ವರ್ಗಾವಣೆಗೊಂಡಿರುವ ಮಾಹಿತಿ, ಖಾತೆ ರದ್ದು ಮಾಡಿದ ಮಾಹಿತಿ ಎಲ್ಲವೂ ತಿಳಿಯುತ್ತದೆ. ಅದನ್ನು ಕಾಲಕಾಲಕ್ಕೆ ಭಾರತ ಸರಕಾರಕ್ಕೆ ತಿಳಿಸಲಾಗುತ್ತದೆ. ಇದು 2018ರಿಂದಲೇ ಪುರ್ವಾನ್ವಯವಾಗಿ ಜಾರಿಯಾಗಲಿದೆ.
ಆದರೆ, ಮೂಲಗಳ ಪ್ರಕಾರ ಈ ಒಪ್ಪಂದ ಜಾರಿಗೆ ಬರುತ್ತಿದ್ದಂತೆ ರಾಜಕಾರಣಿಗಳು ಜಾಗ್ರತರಾಗಿದ್ದಾರೆ. ಈಗಾಗಲೆ ಅಲ್ಲಿರುವ ಹಣವನ್ನು ಹಿಂದಕ್ಕೆ ಪಡೆದಿದ್ದಾರೆ ಇಲ್ಲವೆ ಬೇರೆಡೆಗೆ ವರ್ಗಾವಣೆ ಮಾಡಿದ್ದಾರೆ. ಸಧ್ಯಕ್ಕೆ ಸ್ವಿಸ್ ಬ್ಯಾಂಕ್ ನಲ್ಲಿ ಕೇವಲ 2500 ರಿಂದ 3 ಸಾವಿರ ಕೋಟಿಯಷ್ಟು ಮಾತ್ರ ಭಾರತೀಯರ ಹಣವಿದೆ ಎನ್ನಲಾಗುತ್ತಿದೆ. ಮೊದಲೆಲ್ಲ ಲಕ್ಷ ಕೋಟಿ ಲೆಕ್ಕದಲ್ಲಿ ಹೇಳಲಾಗುತ್ತಿತ್ತು.
ಏನೇ ಆದರೂ ಭಾರತೀಯ ಹಣ ಇನ್ನು ಮುಂದೆ ಸ್ವಿಸ್ ಬ್ಯಾಂಕ್ ನತ್ತ ಹೋಗುವುದಂತೂ ಕಡಿಮೆಯಾಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ