
ಪ್ರಗತಿವಾಹಿನಿ ಸುದ್ದಿ, ಮುಂಬೈ – ಖ್ಯಾತ ಸಂಗೀತ ನಿರ್ದೇಶಕ ಬಪ್ಪಿ ಲಹರಿ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ.
ಬಪ್ಪಿ ಲಹರಿ ಅವರು ಒಂದು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿದ್ದರು. ಆದರೆ ಮಂಗಳವಾರ ಅವರ ಆರೋಗ್ಯ ಸ್ಥಿತಿ ಮತ್ತೆ ಹದಗೆಟ್ಟಿತ್ತು.
ಅಪರೇಶ್ ಲಹಿರಿ ಮತ್ತು ಬಾನ್ಸುರಿ ಲಹಿರಿ ದಂಪತಿಯ ಪುತ್ರನಾಗಿ 1952ರಲ್ಲಿ ಅವರು ಜನಿಸಿದರು. ತಮ್ಮ 21ನೇ ವಯಸ್ಸಿನಲ್ಲಿ ಬಾಲಿವುಡ್‌ನ ‘ನನ್ಹಾ ಶಿಕಾರಿ’ ಸಿನಿಮಾಕ್ಕೆ ಬಪ್ಪಿ ಸಂಗೀತ ನೀಡಿದ್ದರು. ಬಪ್ಪಿ ಲಹಿರಿ ಅವರ ಪೋಷಕರು ಕೂಡ ಸಂಗೀತ ಹಿನ್ನಲೆಯವರಾಗಿದ್ದರು. ಈ ದಂಪತಿಗೆ ಬಪ್ಪಿ ಒಬ್ಬರೇ ಪುತ್ರನಾಗಿದ್ದರು. ತಮ್ಮ ಮೂರನೇ ವಯಸ್ಸಿನಲ್ಲೇ ಹಾಡುಗಾರಿಕೆ ಶುರು ಮಾಡಿದ್ದ ಬಪ್ಪಿ, ಆರಂಭದಲ್ಲಿ ಅಪ್ಪ-ಅಮ್ಮನಿಂದಲೇ ತರಬೇತಿ ಪಡೆದುಕೊಂಡರು. ಬಪ್ಪಿ ಅವರಿಗೆ ಬಪ್ಪಾ ಲಹಿರಿ ಮತ್ತು ರೀಮಾ ಲಹಿರಿ ಎಂಬಿಬ್ಬರು ಮಕ್ಕಳಿದ್ದಾರೆ.
ಅವರು ಸಂಗೀತ ನೀಡಿದ ಅನೇಕ ಹಾಡುಗಳನ್ನು ಇಂದಿಗೂ ಬಾಲಿವುಡ್‌ನಲ್ಲಿ ಮರುಬಳಕೆ ಮಾಡಿಕೊಳ್ಳಲಾಗುತ್ತಿದೆ. ಹಿಂದಿ ಬಿಟ್ಟರೆ ಅವರು ಅತೀ ಹೆಚ್ಚು ಸಂಗೀತ ನಿರ್ದೇಶನ ಮಾಡಿದ್ದು ತೆಲುಗು ಸಿನಿಮಾಗಳಿಗೆ. ತಮಿಳಿನ 3-4 ಸಿನಿಮಾಗಳಿಗೆ ಬಪ್ಪಿ ಲಹಿರಿ ಸಂಗೀತ ನೀಡಿದ್ದಾರೆ. ಕನ್ನಡದಲ್ಲೂ ಅನೇಕ ಹಾಡುಗಳಿಗೆ ನಿರ್ದೇಶನ ನೀಡಿದ್ದಾರೆ. ನಟ/ನಿರ್ದೇಶಕ ದ್ವಾರಕೀಶ್ ನಿರ್ಮಿಸಿ, ನಿರ್ದೇಶಿಸಿದ್ದ ‘ಆಫ್ರಿಕಾದಲ್ಲಿ ಶೀಲಾ’ ಚಿತ್ರಕ್ಕೆ ಬಪ್ಪಿ ಲಹಿರಿ ಸಂಗೀತ ನೀಡಿದ್ದರು. 1986ರಲ್ಲಿ ತೆರೆಕಂಡ ಆ ಸಿನಿಮಾದ ಮೂಲಕ ಮೊದಲ ಬಾರಿಗೆ ಅವರು ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದರು. ನಂತರ ವಿಷ್ಣುವರ್ಧನ್ ಅವರ ‘ಕೃಷ್ಣ ನೀ ಬೇಗನೇ ಬಾರೋ’, ‘ಪೊಲೀಸ್ ಮತ್ತು ದಾದಾ’, ಅಂಬರೀಷ್ ನಟಿಸಿದ್ದ ‘ಗುರು’ ಸಿನಿಮಾಗಳಿಗೆ ಸಂಗೀತ ನೀಡಿದ್ದರು. ಸತೀಶ್ ನೀನಾಸಂ ಹೀರೋ ಆಗಿದ್ದ ‘ಲವ್ ಇನ್ ಮಂಡ್ಯ’ ಚಿತ್ರದ ‘ಕರೆಂಟ್ ಹೋದ ಟೈಮಲಿ..’ ಹಾಡನ್ನು ಬಪ್ಪಿ ಹಾಡಿದ್ದರು.