
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿವಾಹವಾಗುವುದಾಗಿ ನಂಬಿಸಿ, ಬಳಿಕ ದೈಹಿಕವಾಗಿ ಬಳಸಿಕೊಂಡ ಪ್ರಿಯಕರ ವಂಚಿಸಿ ಕೈಕೊಟ್ಟ ಹಿನ್ನಲೆಯಲ್ಲಿ ನೊಂದ ಕನ್ನಡ ಕಿರುತೆರೆ ನಟಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಚಂದನಾ (29) ವಿಷಸೇವಿಸಿ ಆತ್ಮಹತ್ಯೆಗೆ ಶರಣಾದ ನಟಿ. ಬೆಂಗಳೂರಿನ ತಾವರೆಕೆರೆ ಕೃಷ್ಣಮೂರ್ತಿ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ಚಂದನಾ ಹಲವಾರು ಧಾರಾವಾಹಿ ಹಾಗೂ ಜಾಹೀರಾತುಗಳಲ್ಲಿ ಅಭಿನಯಿಸಿದ್ದರು.
ಕಳೆದ 5 ವರ್ಷಗಳಿಂದ ದಿನೇಶ್ ಹಾಗೂ ನಟಿ ಚಂದನಾ ಪ್ರೀತಿಸುತ್ತಿದ್ದರು. ದಿನೇಶ್ ಮದುವೆಯಾಗುವುದಾಗಿಯೂ ನಂಬಿಸಿದ್ದ. ದೈಹಿಕವಾಗಿಯೂ ಆಕೆಯನ್ನು ಬಳಸಿಕೊಂಡಿದ್ದ. ಆದರೆ ಇತ್ತೀಚೆಗೆ ಮದುವೆಯಾಗಲು ನಿರಾಕರಿಸಿದ್ದನಲ್ಲದೇ ಚಂದನಾ ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆ ಗರ್ಭಪಾತವನ್ನೂ ಮಾಡಿಸಿದ್ದ. ಇದರಿಂದ ಚಂದನಾ ಮಾನಸಿಕವಾಗಿ ತುಂಬಾ ನೊಂದಿದ್ದಳು.
ಕಳೆದ ಮೂರು ದಿನಗಳ ಹಿಂದೆ ವೀಡೀಯೋ ಸೆಲ್ಫೀ ಮಾಡಿ, ಪ್ರಿಯಕರನಿಂದ ತನಗಾದ ಮೋಸ, ಲಕ್ಷ ಲಕ್ಷ ಹಣ ಪಡೆದು ವಂಚಿಸಿದ್ದ ವಿಚಾರ ಎಲ್ಲವನ್ನೂ ಹೇಳಿ ಕಣ್ಣೀರಿಟ್ಟು ವಿಷ ಸೇವಿಸಿದ್ದಳು. ಚಂದನಾ ವಿಷ ಸೇವಿಸಿದ ವಿಷಯ ತಿಳಿಯುತ್ತಿದ್ದಂತೆಯೇ ದಿನೇಶ್ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದ. ಮೂರು ದಿನಗಳಿಂದ ಸಾವುಬದುಕಿನ ಜತೆ ಹೋರಾಟ ನಡೆಸಿದ್ದ ನಟಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದಿನೇಶ್ ಬಂಧನಕ್ಕಾಗಿ ಹುಡುಕಾಟ ನಡೆಸಿದ್ದಾರೆ.