Belagavi NewsBelgaum NewsKannada NewsKarnataka NewsLatestPolitics

*ನಾನು ಮಾಡುತ್ತಿರುವುದು ನಿಜವಾದ ಹಿಂದುತ್ವದ ಕೆಲಸ : ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಎಲ್ಲ ಜಾತಿ, ಜನಾಂಗಗಳನ್ನು ಒಟ್ಟುಗೂಡಿಸಿಕೊಂಡು, ಕ್ಷೇತ್ರದಲ್ಲಿ ನೂರಾ ಐವತ್ತಕ್ಕೂ ಹೆಚ್ಚು ದೇವಸ್ಥಾನಗಳನ್ನು ನಿರ್ಮಾಣ ಮಾಡಿ ಸರ್ವ ರೀತಿಯಿಂದಲೂ ಕ್ಷೇತ್ರದ ಅಭಿವೃದ್ಧಿ ಮಾಡುತ್ತಿರುವುದು ನಿಜವಾದ ಹಿಂದುತ್ವದ ಕೆಲಸ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

Home add -Advt

ಉಚಗಾಂವ್ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರು ಮಂತ್ರಿಯಾಗಬೇಕೆನ್ನುವ ಜನರ ಕನಸು ಈಗ ನನಸಾಗಿದೆ. ಜನರ ನಿರೀಕ್ಷೆಯಂತೆ ಕೆಲಸ ಮಾಡುತ್ತಿದ್ದೇನೆ. ಆದರೆ ಬಿಜೆಪಿಯವರು ಕೇವಲ ಟೀಕೆ ಮಾಡುತ್ತಾರೆ. ಟೀಕೆ ಮಾಡುವ ಮೊದಲು ತಮ್ಮ ಅವಧಿಯಲ್ಲಿ ಏನೇನು ಕೆಲಸ ಮಾಡಿದ್ದಾರೆ ಎನ್ನುವ ಲಿಸ್ಟ್ ಕೊಡಲಿ ಎಂದು ಸವಾಲೆಸೆದರು.

ಅವರು ಕೇವಲ ಹಿಂದುತ್ವದ ಭಾಷಣ ಮಾಡುತ್ತಾರೆ. ಹಿಂದುತ್ವಕ್ಕಾಗಿ ಅವರು ಏನು ಮಾಡಿದ್ದಾರೆ ಹೇಳಲಿ.ಅವರಿಗೆ ಅಧಿಕಾರ ಮಾತ್ರ ಬೇಕಾಗಿದೆ. ಹಿಂದು – ಮುಸ್ಲಿಂ, ಭಾರತ -ಪಾಕಿಸ್ತಾನ ಬಿಟ್ಟರೆ ಅವರದ್ದು ಏನೂ ಇಲ್ಲ. ನಾನು ನಿಜವಾದ ಹಿಂದುತ್ವದ ಕೆಲಸ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.

ಛತ್ರಪತಿ ಶಿವಾಜಿ ಮಹಾರಾಜರಿಂದ ಹಿಡಿದು ಎಲ್ಲ ಮಹಾನ್ ವ್ಯಕ್ತಿಗಳ ಪುತ್ಥಳಿ ಸ್ಥಾಪನೆ ಮಾಡಿದ್ದೇನೆ. ಸರ್ವ ಜನಾಂಗದವರಿಗೂ ಗೌರವ ನೀಡುತ್ತಿದ್ದೇನೆ. ಸಣ್ಣಪುಟ್ಟ ಸಮಸ್ಯೆಗಳಿಗೂ ಜನರು ನನಗೆ ಫೋನ್ ಮಾಡುತ್ತಾರೆ. ಏನೇ ಸಮಸ್ಯೆ ಬಂದರೂ ನಾನಿದ್ದೇನೆ ಎನ್ನುವ ಧೈರ್ಯ ಜನರಲ್ಲಿದೆ. ರಸ್ತೆ, ಗಟಾರದ ಕೆಲಸದಿಂದ ಹಿಡಿದು ಗ್ಯಾಸ್ ಖಾಲಿಯಾದರೂ ನನಗೆ ಫೋನ್ ಮಾಡುತ್ತಾರೆ. ನಾನು ಅಧಿವೇಶನದಲ್ಲಿದ್ದರೂ ಹೊರಗೆ ಬಂದು ಮಾತನಾಡಿ ಕ್ಷೇತ್ರದ ಜನರ ಸಮಸ್ಯೆಗೆ ಸ್ಪಂದಿಸುತ್ತೇನೆ ಎಂದು ಸಚಿವರು ಹೇಳಿದರು.

ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖ್ಯಮಂತ್ರಿಗಳು ಆದರ್ಶವಾದ ಕೆಲಸ ಮಾಡಿದ್ದಾರೆ. ಶಾಲಾ ಮಕ್ಕಳಿಗೆ ಬಿಸಿಯೂಟ, ಸಮವಸ್ತ್ರ, ಮೊಟ್ಟೆ ಹೀಗೆ ಹತ್ತು ಹಲವು ಯೋಜನೆ ಜಾರಿಗೆ ತಂದಿದ್ದಾರೆ.ಪಂಚ ಗ್ಯಾರಂಟಿ ಯೋಜನೆ ಜಾರಿ ಮಾಡಿದರೂ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ನಿಂತಿಲ್ಲ ಎನ್ನುತ್ತಿದ್ದಂತೆ ಸೇರಿದ್ದ ಜನರು ಡಬಲ್ ಅಭಿವೃದ್ಧಿ ಆಗುತ್ತಿದೆ ಎಂದು ಕೂಗಿದರು.

ಕಳೆದ ಬಜೆಟ್ ನಲ್ಲಿ ಕ್ಷೇತ್ರಕ್ಕೆ ಪದವಿ ಕಾಲೇಜು, ಖುಸ್ತಿ ಆಖಾಡ, ಶ್ರಮಿಕ ಮಕ್ಕಳ ಶಾಲೆ, ವಸತಿ ನಿಲಯ ಮೊದಲಾದವು ಮಂಜೂರಾಗಿದೆ. ಕೇವಲ ರಸ್ತೆಗಾಗಿಯೇ 200 ಕೋಟಿಗೂ ಹೆಚ್ಚು ವೆಚ್ಚ ಮಾಡಲಾಗಿದೆ. ನನ್ನ ಹೃದಯದಲ್ಲಿ ಕ್ಷೇತ್ರ, ಕ್ಷೇತ್ರದ ಜನರೇ ಇದ್ದಾರೆ ಎಂದರು.

ಯುವ ಮುಖಂಡ ಮೃಣಾಲ್‌ ಹೆಬ್ಬಾಳಕರ್ ಮಾತನಾಡಿ, ಪಕ್ಷ ಸಂಘಟನೆ ಬಲಪಡಿಸಲು ಪ್ರತಿ ಬ್ಲಾಕ್ ಸಭೆ ಮಾಡಲಾಗುತ್ತಿದೆ. ಕಳೆದ ಒಂದು ದಶಕದಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಪಕ್ಷ ಸಾಕಷ್ಟು ಬಲಗೊಂಡಿದೆ ಎಂದರು.

ದೇಶದ ಇತಿಹಾಸವೇ ಕಾಂಗ್ರೆಸ್ ಇತಿಹಾಸ. ಕಾಂಗ್ರೆಸ್ ಎಂದೂ ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಐಟಿ, ಇಡಿ ಗಳನ್ನು ದುರುಪಯೋಗ ಪಡಿಸಿಕೊಂಡು ವಿರೋಧಿಗಳಿಗೆ ಹಿಂಸೆ ನೀಡುತ್ತಿದೆ. ಬಿಜೆಪಿ ಸೇರಿದರೆ ಎಲ್ಲ ಅಕ್ರಮಗಳೂ ಸಕ್ರಮವಾಗುತ್ತವೆ. ಬಿಜೆಪಿ ದೇಶವನ್ನು ಅಧೋಗತಿಗೆ ತಳ್ಳುತ್ತಿದೆ. ಆದರೆ ಕಾಂಗ್ರೆಸ್ ಅಂಬೇಡ್ಕರ್ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಂಡು ಮುನ್ನಡೆಯುತ್ತಿದೆ ಎಂದು ಹೇಳಿದರು.

ವಿವಿಧ ಭಾಗಗಳ ಅನ್ಯ ಪಕ್ಷಗಳ ಮುಖಂಡರು ಈ ಸಂದರ್ಭದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಬಾಳು ದೇಸೂರಕರ್ ನೂತನ ಅಧ್ಯಕ್ಷರಾಗಿ ಆಧಿಕಾರ ವಹಿಸಿಕೊಂಡರು.


ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕಾಡಾ ಅಧ್ಯಕ್ಷ ಯುವರಾಜ ಕದಂ, ಶಂಕರಗೌಡ ಪಾಟೀಲ, ಮನೋಹರ ಬೆಳಗಾಂವ್ಕರ್, ಗಾಯತ್ರಿ ಪಾಟೀಲ, ರೇಖಾ ನಾಯಕ್ ಮೊದಲಾದವರಿದ್ದರು.

Related Articles

Back to top button