
ಪ್ರಗತಿವಾಹಿನಿ ಸುದ್ದಿ, ಲಕ್ನೋ: ಗಣ್ಯರ ಭಾವಚಿತ್ರಗಳನ್ನು ಕಸದ ಗಾಡಿಯಲ್ಲಿಟ್ಟು ಸಾಗಿಸುತ್ತಿದ್ದ ಪೌರ ಕಾರ್ಮಿಕ ಕೆಲಸ ಕಳೆದುಕೊಂಡಿದ್ದಾನೆ.
ಉತ್ತರ ಪ್ರದೇಶದ ಮಥುರಾ ನಗರದಲ್ಲಿ ಈ ಘಟನೆ ನಡೆದಿದೆ. ಬಾಬಿ (38) ಎಂದಿನಂತೇ ಕಸ ತುಂಬಿಕೊಂಡು ಸಾಗಿಸುವ ತನ್ನ ಕರ್ತವ್ಯ ನಿಭಾಯಿಸುವ ವೇಳೆ ನಡೆದ ಅಚಾತುರ್ಯ ಆತನ ಕೆಲಸಕ್ಕೆ ಕುತ್ತು ತಂದಿದೆ.
ಭಾನುವಾರ ಬೆಳಗ್ಗೆ ಈತ ಕಸ ಸಾಗಿಸುತ್ತಿದ್ದ ಕೈಗಾಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಅಬ್ದುಲ್ ಕಲಾಂ ಮತ್ತಿತರ ಗಣ್ಯರ ಚಿತ್ರಗಳಿದ್ದವು. ಆತ ಕೈಗಾಡಿ ದೂಡಿಕೊಂಡು ಸಾಗುತ್ತಿದ್ದ ಮಾರ್ಗ ಮಧ್ಯೆ ಕೆಲವರು ಇದನ್ನು ಕಂಡು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ವೇಳೆ ರಾಜಸ್ಥಾನ ಆಲ್ವಾರ್ ಮೂಲದ ವ್ಯಕ್ತಿಯೊಬ್ಬರು ಎಲ್ಲ ಗಣ್ಯರ ಫೋಟೊಗಳನ್ನು ಕಸದ ಗಾಡಿಯಿಂದ ತೆಗೆದು ಸ್ವಚ್ಛಗೊಳಿಸಿ ಕೊಂಡೊಯ್ದಿದ್ದಾಗಿ ಮೂಲಗಳು ತಿಳಿಸಿವೆ.
ಈ ಕುರಿತ ಫೋಟೊ, ವಿಡಿಯೋಗಳು ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಘಟನೆ ನಡೆದ ಕೆಲವೇ ಸಮಯದಲ್ಲೇ ಮಥುರಾ- ವೃಂದಾವನ ಮುನ್ಸಿಪಲ್ ಕಾರ್ಪೋರೇಷನ್ ಮೇಯರ್ ಮುಖೇಶ ಆರ್ಯ ಬಂಧು ಅವರು ವಿವಾದಿತ ಕಾರ್ಮಿಕನನ್ನು ಕೆಲಸದಿಂದ ಕಿತ್ತೆಸೆಯಲು ಆದೇಶಿಸಿದ್ದಾರೆ.
ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕ ಅನಕ್ಷರಸ್ಥನಾಗಿದ್ದು ಅರಿವಿಲ್ಲದೆ ಈ ಕೃತ್ಯವೆಸಗಿದ್ದಾನೆ. ಜನರ ಆಕ್ರೋಶವೇ ಆತನಿಗಾದ ಗರಿಷ್ಠ ಶಿಕ್ಷೆ ಎಂದು ನಂಬಿದ್ದೇನೆ. ಗಣ್ಯರ ಫೋಟೊಗಳನ್ನು ತಿಪ್ಪೆಗೆಸೆದವರ ಕುರಿತು ಸೂಕ್ತ ತನಿಖೆಗೆ ಆದೇಶಿಸಲಾಗಿದೆ ಎಂದು ಮಥುರಾ- ವೃಂದಾವನ ಮುನ್ಸಿಪಲ್ ಕಾರ್ಪೋರೇಷನ್ ಹೆಚ್ಚುವರಿ ಆಯುಕ್ತ ಸತ್ಯೇಂದ್ರಕುಮಾರ ತಿವಾರಿ ತಿಳಿಸಿದ್ದಾರೆ.
“ಸುಭಾಷ ಇಂಟರ್ ಕಾಲೇಜು ಬಳಿ ಬಿದ್ದಿದ್ದ ಎಲ್ಲ ಕಸವನ್ನೂ ನಾನು ಎತ್ತಿ ಗಾಡಿಯಲ್ಲಿಟ್ಟುಕೊಂಡು ಹೋಗುತ್ತಿದ್ದೆ. ತನಗೆ ಹಾಗೆ ಕೊಂಡೊಯ್ಯಬಾರದೆಂಬುದು ಗೊತ್ತಿರಲಿಲ್ಲ. ಕೆಲವರು ಬಂದು ತಗಾದೆ ತೆಗೆದ ಮೇಲೆಯೇ ಗೊತ್ತಾಯಿತು. ನನ್ನನ್ನು ಕ್ಷಮಿಸುವಂತೆ ಪಾಲಿಕೆ ಹಿರಿಯ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಕೇಳಿಕೊಂಡಿದ್ದೇನೆ” ಎಂದು ಪೌರಕಾರ್ಮಿಕ ಹೇಳಿಕೊಂಡಿದ್ದಾನೆ.
ನರ್ಮದಾ ನದಿಗೆ ಉರುಳಿ ಬಿದ್ದ ಬಸ್; 13 ಪ್ರಯಾಣಿಕರ ದುರ್ಮರಣ