Kannada NewsKarnataka NewsLatest

ಏಕಕಾಲಕ್ಕೆ ಪಿಎಸ್‌ಐ ಹುದ್ದೆ ಪಡೆದು ಖಾಕಿ ತೊಟ್ಟ ಸೋದರಿಯರು

 

ಅಜಯ ಕೌಲಗಿ,  ಚಿಕ್ಕೋಡಿ :
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಯಲ್ಪಾರಟ್ಟಿ ಎಂಬ ಪುಟ್ಟ ಗ್ರಾಮದ ಸಹೋದರಿಯರಿಬ್ಬರು ಒಂದೇ‌ ಪ್ರಯತ್ನದಲ್ಲಿ ಏಕಕಾಲಕ್ಕೆ ಖಾಕಿ ತೊಟ್ಟು ಪಿಎಸ್‌ಐ ಹುದ್ದೆ ಪಡೆದು ಗಮನ ಸೆಳೆದಿದ್ದಾರೆ.

ದೀಪಾಲಿ ಹಾಗೂ ರೂಪಾಲಿ ಶಿವಾನಂದ ಗೂಡೊಡಗಿ ಆಯ್ಕೆಯಾದ ಸಹೋದರಿಯರು. ಇಬ್ಬರೂ ಒಂದೇ ಸಲ, ಒಂದೇ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿರುವುದು ವಿಶೇಷ.

ಕೃಷಿಕ ಶಿವಾನಂದ ಗೂಡೊಡಗಿ ಅವರ ಪುತ್ರಿಯರಿವರು. ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಯಲ್ಪಾರಟ್ಟಿ ಸ್ವ ಗ್ರಾಮದಲ್ಲಿ ಪಡೆದು, ನಂತರ ಜಮಖಂಡಿಯ ಬಿಎಲ್‌ಡಿ ಸಂಸ್ಥೆಯಲ್ಲಿ ದ್ವಿತೀಯ ಪಿಯು ಶಿಕ್ಷಣ ಪೂರೈಸಿದ್ದಾರೆ. ಬಳಿಕ ಚಿಕ್ಕೋಡಿಯ ಬಸವಪ್ರಭು ಕೋರೆ ಪದವಿ ಕಾಲೇಜಿನಲ್ಲಿ ಬಿಬಿಎ ಪದವಿಯನ್ನು ಪಡೆದುಕೊಂಡಿದ್ದಾರೆ.

Home add -Advt

ಸಾಮಾನ್ಯ ಕೃಷಿ ಕುಟುಂಬದ ಕೇವಲ 7 ನೇ ತರಗತಿಯವರೆಗೆ ಮಾತ್ರ ಶಿಕ್ಷಣ ಪಡೆದಿರುವ ಶಿವಾನಂದ ಗೂಡೊಡಗಿ ಅವರಿಗೆ 3 ಮಕ್ಕಳು. ಆ ಪೈಕಿ ಪುತ್ರ ಕೃಷಿ ಮಾಡಿಕೊಂಡಿದ್ದರೆ. ಇಬ್ಬರು ಪುತ್ರಿಯರು ಪೋಲಿಸ್ ಇಲಾಖೆಯಲ್ಲಿ ಪಿಎಸ್ಐ ಹುದ್ದೆ ಅಲಂಕರಿಸಿದ್ದಾರೆ.

ಸರ್ಕಾರಿ ಹುದ್ದೆ ಪಡೆಯಬೇಕೆಂದು ಪದವಿ ಓದುವಾಗಲೇ ಗುರಿ ಇಟ್ಟುಕೊಂಡಿದ್ದರು. ಜೊತೆಯಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡಿದ್ದರು. ಈಗ ಸಾಧಿಸಿ ತೋರಿಸಿದ್ದಾರೆ. ಈ ಮೂಲಕ ಪೋಷಕರಿಗೆ ಹೆಮ್ಮೆ ತಂದಿದ್ದಾರೆ. ಇದು ಗ್ರಾಮೀಣ ಭಾಗದ ಯುವ ಪೀಳಿಗೆಗೆ ಮಾದರಿಯಾಗಿದ್ದು ಈ ಇಬ್ಬರು ಸಹೋದರಿಯರು ಮತ್ತಷ್ಟು ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ.

ತರಬೇತಿ‌ ಪಡೆದು ಛಲ ಮುಂದುವರೆಸಿದರು :

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಒಬಿಸಿ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಪಡೆದು ಬೆಂಗಳೂರು ಪ್ರತಿಷ್ಠಿತ ಜೈನ್ ಸಂಸ್ಥೆಯಲ್ಲಿ 9 ತಿಂಗಳು ಗುಣಮಟ್ಟದ ತರಬೇತಿ ಪಡೆದಿದ್ದಾರೆ. ಆ ಬಳಿಕ ಊರಿಗೆ ಮರಳದೆ ವಿದ್ಯಾಕಾಶಿ ಧಾರವಾಡದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಓದಿದ್ದಾರೆ.

ಅಕ್ಕ ದೀಪಾಲಿ ಎರಡು ವರ್ಷ ತಂಗಿ ರೂಪಾಲಿ ಒಂಬತ್ತು ತಿಂಗಳು ಆಳವಾಗಿ ಸ್ವ ಅಧ್ಯಯನ್ನು ನಡೆಸಿ ಪ್ರಥಮ ಪ್ರಯತ್ನದಲ್ಲಿ ಪಿಎಸ್ಐ ಪರೀಕ್ಷೆ ಪಾಸಾಗಿ ತಮ್ಮ ಕನಸನ್ನು ನನಸಾಗಿಸಿ ಕೊಂಡಿದ್ದು ಗ್ರಾಮೀಣ ಭಾಗದ ಯುವತಿಯರಿಗೆ ಪ್ರೇರಣೆಯಾಗಿದ್ದಾರೆ.

 

Related Articles

Back to top button