Kannada NewsKarnataka NewsLatest

*ರೇಣುಕಾಸ್ವಾಮಿ ಕೊಲೆ ಪ್ರಕರಣ: ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಕೃತ್ಯದ ಹಿಂದೆ ಪ್ರಭಾವಿ ಮಹಿಳೆ ಕೈವಾಡ*

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿಯಲ್ಲಿ ಮಹತ್ವದ ಮಾಹಿತಿ ಲಭ್ಯವಾಗಿದೆ.

ಪ್ರಕರಣದ 49ನೇ ಸಾಕ್ಷಿ ಸಂದೀಪ್‌ಗೆ ಕಿಡ್ನಾಪ್ ಮಾಡಿ ಜೀವ ಬೆದರಿಕೆ ಹಾಕಿದ ಕೃತ್ಯದ ಹಿಂದೆ ಪ್ರಭಾವಿ ಮಹಿಳೆಯೊಬ್ಬರ ಹಸ್ತಕ್ಷೇಪವಿರುವುದು ಮತ್ತು ಮಾಸ್ಟರ್ ಪ್ಲಾನ್ ನಡೆದಿರುವುದು ತಾಂತ್ರಿಕ ತನಿಖೆಯಲ್ಲಿ ಸಾಬೀತಾಗಿದೆ.

ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಹಾಗೂ ನಟ ದರ್ಶನ್‌ ಕುಟುಂಬಕ್ಕೆ ಅತ್ಯಾಪ್ತನಾಗಿದ್ದ ಪುನೀತ್ ಎಂಬಾತನ ಮೂಲಕ ಸಾಕ್ಷಿ ಸಂದೀಪ್‌ಗೆ ಬೆದರಿಕೆ ಹಾಕಿಸಲಾಗಿತ್ತು. ಅಪಹರಣ ಮತ್ತು ಬೆದರಿಕೆ ಕೃತ್ಯ ನಡೆಯುತ್ತಿದ್ದ ಸಮಯದಲ್ಲಿ ಪುನೀತ್, ಕಿರಣ್ ಹಾಗೂ ಗೌರವ್ ಶೆಟ್ಟಿ ಮೂವರೂ ವಾಟ್ಸಪ್ ಕಾನ್ಫರೆನ್ಸ್ ಕಾಲ್‌ನಲ್ಲಿದ್ದರು. ಕಾಲ್‌ನಲ್ಲಿದ್ದುಕೊಂಡೇ ಕಿರಣ್ ಮತ್ತು ಗೌರವ್ ಶೆಟ್ಟಿ, ಸಾಕ್ಷಿಯನ್ನು ಹೇಗೆ ಹೆದರಿಸಬೇಕು ಎಂಬುದರ ಕುರಿತು ಪುನೀತ್ ಆಂಡ್ ಟೀಮ್‌ಗೆ ಹಂತ ಹಂತವಾಗಿ ಮಾರ್ಗದರ್ಶನ ನೀಡುತ್ತಿದ್ದರು.

ಎಫ್‌ಎಸ್‌ಎಲ್ ವರದಿಯ ಪ್ರಕಾರ, ಈ ಕೃತ್ಯ ನಡೆಯುವ ಮುನ್ನ ಪುನೀತ್‌ಗೆ ಪ್ರಭಾವಿ ಮಹಿಳೆಯೊಬ್ಬರಿಂದ ಕರೆ ಬಂದಿತ್ತು. ಗೌರವ್ ಶೆಟ್ಟಿ ಏನು ಹೇಳುತ್ತಾನೋ ಅದನ್ನು ಚಾಚೂ ತಪ್ಪದೇ ಮಾಡು ಎಂದು ಆ ಪ್ರಭಾವಿ ಮಹಿಳೆ ಪುನೀತ್‌ಗೆ ಸೂಚನೆ ನೀಡಿದ್ದಳು ಎಂಬುದು ವರದಿಯಿಂದ ತಿಳಿದುಬಂದಿದೆ. ಆದರೆ ಆ ಪ್ರಭಾವಿ ಮಹಿಳೆ ಯಾರು? ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button