*BREAKING: ಡಿಸಿಎಂ ಡಿ.ಕೆ.ಶಿವಕುಮಾರ್ ನಡಿಗೆ ಕಾರ್ಯಕ್ರಮದಲ್ಲಿ ಹೈಡ್ರಾಮಾ: ವೇದಿಕೆಗೆ ನುಗ್ಗಿ ಪ್ರತಿಭಟನೆ ನಡೆಸಿದ ಶಾಸಕ ಮುನಿರತ್ನ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ನಡೆಸುತ್ತಿದ್ದ ನಡಿಗೆ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಮುನಿರತ್ನ ವೇದಿಕೆಗೆ ನುಗ್ಗಿ ಗಲಾಟೆ ಮಾಡಿದ್ದು, ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ಬೆಂಗಳೂರಿನ ಮತ್ತಿಕೆರೆ ಜೆ.ಪಿ.ಪಾರ್ಕ್ ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಸಾರ್ವಜನಿಕರ ಕುಂದು ಕೊರತೆ ಆಲಿಸಲು, ಅಹವಾಲು ಸ್ವೀಕರಿಸುವ ನಿಟ್ಟಿನಲ್ಲಿ ಸಂವಾದ ಕಾರ್ಯಕ್ರಮ ಹಾಗೂ ನಡಿಗೆ ಕಾರ್ಯಕ್ರ ಆರಂಭಿಸಿದ್ದರು. ಈ ವೇಳೆ ಸಂವಾದ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಏಕಾಏಕಿ ವೇದಿಕೆಗೆ ಆಗಮಿಸಿದ ಶಾಸಕ ಮುನಿರತ್ನ, ಇದು ಸರ್ಕಾರದ ಕಾರ್ಯಕ್ರಮವಲ್ಲ, ಬರಿ ಕಾಂಗ್ರೆಸ್ ಕಾರ್ಯಕ್ರಮ. ಸಂಸದರಿಗಾಗಲಿ, ಶಾಸಕರಿಗಾಗಲಿ ಆಹ್ವಾನ ನೀಡಿಲ್ಲ, ಆಹ್ವಾನ ನೀಡಿದ್ದರೆ ಬ್ಯಾನರ್ ನಲ್ಲಿ ಈ ಭಾಗದ ಸಂಸದರ ಹಾಗೂ ಶಾಸಕರ ಫೋಟೋ ಇರುತ್ತಿತ್ತು. ನಮಗ್ಯಾರಿಗೂ ಆಹ್ವಾನಿಸದೇ ಡಿಸಿಎಂ ಡಿ.ಕೆ.ಶಿವಕುಮಾರ್, ತಮ್ಮ ಪಕ್ಷದ ಕಾರ್ಯಕ್ರಮ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇವರಿಗೆ ಸಾರ್ವಜನಿಕರ ಸಮಸ್ಯೆ ಆಲಿಸಿ ಪರಿಹರಿಸುವುದು ಬೇಕಿಲ್ಲ. ಈಗ ಪಾಲಿಕೆ ಚುನಾವಣೆ ಬಂತಲ್ಲ ಅದಕ್ಕಾಗಿ ರಾಜಕೀಯ ಮಾಡಲು ಬಂದಿದ್ದಾರೆ. ಸರ್ಕಾರದ ಈ ನಡೆಗೆ ಧಿಕ್ಕಾರ ಎಂದು ಕೂಗಿ ಪ್ರತಿಭತನೆ ನಡೆಸಿದರು. ವೇದಿಕೆ ಮೇಲೆ ಹೈಡ್ರಾಮಾ ನಡೆದಿದೆ. ಈ ವೇಳೆ ಈರಡು ಗುಂಪುಗಳ ನಡುವೆ ಗಲಾಟೆ ನಡೆದು ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೂ ತಲುಪಿತು. ಸ್ಥಳದಲ್ಲಿದ್ದ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸಿದರು.