*ಪತಿಯನ್ನು ಕೊಂದ ಶಿಕ್ಷಕಿ ಹಾಗೂ ಆಕೆಯ ಪ್ರಿಯಕರನಿಗೆ ಮರಣದಂಡನೆ ವಿಧಿಸಿದ ಕೋರ್ಟ್*

ಪ್ರಗತಿವಾಹಿನಿ ಸುದ್ದಿ: 2016 ರಲ್ಲಿ ಪ್ರಿಯಕರನ ಜೊತೆ ಸೇರಿ ಶಿಕ್ಷಕ ಪತಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಶಿಕ್ಷಕಿ ಪತ್ನಿ ಹಾಗೂ ಆಕೆಯ ಪ್ರಿಯತಮನನ್ನು ಮರಣದಂಡನೆ ಶಿಕ್ಷೆ ನೀಡಿ ಕೋರ್ಟ್ ಆದೇಶ ನೀಡಿದೆ.
ಶಿವಮೊಗ್ಗದ ಭದ್ರಾವತಿಯ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚಿಟ್ಟಿಯಾರ ಅವರು ಇಂದು ತೀರ್ಪು ಪ್ರಕಟಿಸಿದ್ದಾರೆ.
2016ರ ಜುಲೈ 7ರಂದು ಜನ್ನಾಪುರದಲ್ಲಿ ಶಿಕ್ಷಕ ಇಮ್ಮಿಯಾಜ್ ಎಂಬುವವರನ್ನು ಹತ್ಯೆ ಮಾಡಲಾಗಿತ್ತು. ಅವರ ಮೃತದೇಹವನ್ನು ನೈನಾಲ್ ದಾರದಲ್ಲಿ ಕಟ್ಟಿ ಭದ್ರಾವತಿ ಹೊಸ ಸೇತುವೆ ಸಮೀಪ ಭದ್ರಾ ನದಿಯಲ್ಲಿ ಎಸೆಯಲಾಗಿತ್ತು. ತನಿಖೆ ನಡೆಸಿದ ನ್ಯೂಟೌನ್ ಠಾಣೆ ಪೊಲೀಸರು ಶಿಕ್ಷಕ ಇಮ್ಮಿಯಾಜ್ ಪತ್ನಿ ಲಕ್ಷ್ಮಿ, ಆಕೆಯ ಪ್ರಿಯಕರ ಕೃಷ್ಣಮೂರ್ತಿ ಅಲಿಯಾಸ್ ಕಿಟ್ಟಿ, ಶಿವರಾಜ್ ಅಲಿಯಾಸ್ ಶಿವು ಎಂಬಾತರನ್ನು ಬಂಧಿಸಿದ್ದರು.
ಶಿಕ್ಷಕಿ ಲಕ್ಷ್ಮಿ ಮತ್ತು ಚಾಲಕ ಕೃಷ್ಣಮೂರ್ತಿ ಸಲುಗೆಯಿಂದ ಇದ್ದರು. ಪತಿ ಇಮ್ಮಿಯಾಜ್ ಇದನ್ನು ವಿರೋಧಿಸಿದ್ದರು. ಇದೇ ಕಾರಣಕ್ಕೆ ಲಕ್ಷ್ಮಿ ಮತ್ತು ಕೃಷ್ಣಮೂರ್ತಿ, ಜನ್ನಾಪುರದ ಮನೆಯಲ್ಲಿ ಇಮ್ಮಿಯಾಜ್ ತಲೆಗೆ ರಾಡ್ ಮತ್ತು ಸುತ್ತಿಗೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಹತ್ಯೆ ಬಳಿಕ ನೈಲಾನ್ ದಾರ, ಬೆಡ್‌ಶೀಟ್‌ನಿಂದ ಮೃತದೇಹವನ್ನು ಸುತ್ತಿ ಇನ್ನೋವಾ ಕಾರಿನಲ್ಲಿ ಕೊಂಡೊಯ್ದು ಭದ್ರಾವತಿ ಹೊಸ ಸೇತುವೆ ಬಳಿ ಭದ್ರಾ ನದಿಗೆ ಎಸೆದಿದ್ದರು. ಮೃತದೇಹ ಸಾಗಿಸಲು ಶಿವರಾಜ್‌ನ ನೆರವು ಪಡೆದಿದ್ದರು ಎಂದು ಆರೋಪಿಸಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ನ್ಯೂಟೌನ್ ಠಾಣೆ ಇನ್ಸ್‌ಪೆಕ್ಟರ್ ಚಂದ್ರಶೇಖರ.ಟಿ.ಕೆ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಭದ್ರಾವತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಕೊಲೆ ಆರೋಪ ಸಾಬೀತಾಗಿದೆ. ಈ ಹಿನ್ನೆಲೆ ಶಿಕ್ಷಕಿ ಲಕ್ಷ್ಮಿ ಮತ್ತು ಕೃಷ್ಣಮೂರ್ತಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಸಾಕ್ಷಿ ನಾಶಕ್ಕೆ ನೆರವಾದ ಶಿವರಾಜ್‌ಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಇನ್ನು, ಮೃತ ಶಿಕ್ಷಕ ಇಮ್ಮಿಯಾಜ್ ಅವರ ತಾಯಿಗೆ 10 ಲಕ್ಷ ಪರಿಹಾರ ನೀಡುವಂತೆ ಆದೇಶಿಸಲಾಗಿದೆ.