ಅಕ್ಟೋಬರ್ ನಲ್ಲಿ ಮತ್ತೆ ನಡೆಯುತ್ತಾ ಶಿಕ್ಷಕರ ವರ್ಗಾವಣೆ?
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
3 ವರ್ಷ ವಿವಿಧ ಕಾರಣದಿಂದಾಗಿ ನಡೆಯದ ಶಿಕ್ಷಕರ ವರ್ಗಾವಣೆ ಈ ವರ್ಷ ಕೇವಲ ಕಾಟಾಚಾರಕ್ಕೆನ್ನುವಂತೆ ನಡೆದಿದೆ. ಇದರಿಂದಾಗಿ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದ ಶಿಕ್ಷಕರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎನ್ನುವಂತಾಗಿದೆ.
ಶಿಕ್ಷಕರ ವರ್ಗಾವಣೆಯಲ್ಲಿ ಇದ್ದ ತೀವ್ರ ಗೊಂದಲ ನಿವಾರಿಸುವ ಹಿನ್ನೆಲೆಯಲ್ಲಿ 3 ವರ್ಷದ ಹಿಂದೆ ವರ್ಗಾವಣೆ ಕಾನೂನಿಗೆ ಸಮಗ್ರ ತಿದ್ದುಪಡಿ ತರಲಾಗಿತ್ತು. ಇದಕ್ಕಾಗಿ 2 ವರ್ಷ ವರ್ಗಾವಣೆ ಪ್ರಕ್ರಿಯೆಯನ್ನೇ ತಡೆಹಿಡಿಯಲಾಗಿತ್ತು. ನಂತರ ಒಂದು ವರ್ಷ ರಾಜಕೀಯ ಗೊಂದಲದಿಂದಾಗಿ ವರ್ಗಾವಣೆ ನಡೆಯಲಿಲ್ಲ. ಈ ವರ್ಷವೂ 9 ಬಾರಿ ತಡೆದು ತಡೆದು ವರ್ಗಾವಣೆ ನಡೆಸಲಾಗುತ್ತಿದೆ.
ವರ್ಷಕ್ಕೆ ಶೇ.4ರಷ್ಟು ಶಿಕ್ಷಕರ ವರ್ಗಾವಣೆ ಮಾಡಬೇಕೆನ್ನುವುದು ನಿಯಮ. ವಿವಿಧ ಕಾರಣಗಳಿಂದಾಗಿ 3 ವರ್ಷ ವರ್ಗಾವಣೆ ನಡೆಯದ್ದರಿಂದ ಈ ಬಾರಿ ಅವೆಲ್ಲವನ್ನೂ ಸೇರಿಸಿ ಶೇ.16 ರಷ್ಟು ಶಿಕ್ಷಕರ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕೆನ್ನುವುದು ಶಿಕ್ಷಕರ ಬೇಡಿಕೆಯಾಗಿತ್ತು.
ಇದನ್ನೂ ಓದಿ – ಇದ್ಯಾವ ವರ್ಗಾವಣೆ ನೀತಿ ?- ಶಿಕ್ಷಕರ ಆಕ್ರೋಶ
ಆದರೆ ಈ ವರ್ಷ ಮಾಡಿದ್ದೂ ಕೇವಲ ಶೇ.4 ರಷ್ಟು ಮಾತ್ರ. ಅದೂ ಒಟ್ಟೂ ಶಿಕ್ಷಕರಲ್ಲಿ (ಅರ್ಜಿ ಸಲ್ಲಿಸದವರೂ ಸೇರಿ) ಪ್ರತಿಶತ 4 ರಷ್ಟು ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಶಿಕ್ಷಕರು ಅರ್ಜಿ ಸಲ್ಲಿಸಿದ್ದರೂ ಕೌನ್ಸಿಲಿಂಗ್ ಗೆ ಹಾಜರಾಗುವುದಕ್ಕೇ ಅವಕಾಶ ಸಿಗಲಿಲ್ಲ. ಉದಾಹರಣೆಗೆ, ಧಾರವಾಡ ವಿಭಾಗದಲ್ಲಿ ಅರ್ಜಿ ಸಲ್ಲಿಸಿದವರು 4561 ಶಿಕ್ಷಕರು, ವರ್ಗಾವಣೆಗೊಂಡವರು 323!
ವರ್ಗಾವಣಯನ್ನು ಶೇ.4ಕ್ಕೇ ಸ್ಥಗಿತಗೊಂಡಿದ್ದರಿಂದ ಶಿಕ್ಷಕರು ಪ್ರತಿಭಟನೆ ನಡೆಸಿದರು, ಕಣ್ಣೀರು ಹಾಕಿದರು. ನೂರಾರು ಕಿಮೀ ದೂರದಿಂದ ವರ್ಗಾವಣೆ ನಿರೀಕ್ಷೆಯೊಂದಿಗೆ ಶಿಕ್ಷಕರು ಆಗಮಿಸಿದ್ದರು. ಪತಿ ಎಲ್ಲೋ ಕೆಲಸ ಮಾಡುತ್ತಾರೆ. ಪತ್ನಿ ಇನ್ನೆಲ್ಲೋ ಕೆಲಸ ಮಾಡುತ್ತಿದ್ದಾರೆ. ಮಕ್ಕಳು ಅತಂತ್ರರಾಗಿದ್ದಾರೆ. ದಯವಿಟ್ಟು ವರ್ಗಾವಣೆಗೆ ಅವಕಾಶ ಮಾಡಿಕೊಡಿ ಎಂದು ಬೇಡಿಕೊಂಡರು.
ಇದನ್ನೂ ಓದಿ – ಶಿಕ್ಷಕರ ವರ್ಗಾವಣೆಯಲ್ಲಿ ಭಾರಿ ಗೋಲ್ ಮಾಲ್
ಅಧಿಕಾರಿಗಳು, ಶಿಕ್ಷಕರ ಸಂಘದ ಪದಾಧಿಕಾರಿಗಳ ವಿರುದ್ಧ ತೀವ್ರವಾಗಿ ಕಿಡಿಕಾರಿದರು. ವರ್ಗಾವಣೆ ಪ್ರಮಾಣವನ್ನು ಹೆಚ್ಚಿಸಬೇಕು, ಹೊಸದಾಗಿ ವರ್ಗಾವಣೆ ಮಾಡಬೇಕು ಎಂದು ಶಿಕ್ಷಕರು ಆಗ್ರಹಿಸಿದರು. ಲಿಮಿಟ್ ಬದಲು ಚೈನ್ ಸಿಸ್ಟಂ ಪ್ರಕಾರ ವರ್ಗಾವಣೆ ಮಾಡಲಿ. ಕಳೆದ 4 ವರ್ಷದಿಂದ ನಾವು ಕಾಯುತ್ತಿದ್ದೇವೆ. ಈ ಬಾರಿಯೂ ಅನ್ಯಾಯವಾಗಿದೆ ಎಂದು ಕಿಡಿಕಾರಿದರು.
ಅಧಿಕಾರಿಗಳೇ ಕಾರಣ
ಕಳೆದ ಸುಮಾರು 3 ತಿಂಗಳಿನಿಂದ ರಾಜ್ಯದಲ್ಲಿ ಸರಕಾರ ಅತಂತ್ರವಾಗಿದೆ. ಹಾಗಾಗಿ ವರ್ಗಾವಣೆಯಲ್ಲಾಗಿರುವ ವೈಫಲ್ಯಕ್ಕೆ ಅಧಿಕಾರಿಗಳೇ ಹೊಣೆ ಎಂದು ಶಿಕ್ಷಕರು ಆರೋಪಿಸಿದರು. ಮೊದಲನೆಯದಾಗಿ ವರ್ಗಾವಣೆ ನಿಯಮಾವಳಿಯೇ ಸರಿ ಇಲ್ಲ, ಇದರ ಜೊತೆಗೆ ಅಧಿಕಾರಿಗಳು ತಮಗೆ ಬೇಕಾದಂತೆ ಅದನ್ನು ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ಶಿಕ್ಷಕರ ಆರೋಪ.
ಇದನ್ನೂ ಓದಿ – ಶಿಕ್ಷಕರ ವರ್ಗಾವಣೆ 3ನೇ ವರ್ಷವೂ ಅಯೋಮಯ! ಅದಕ್ಕಿದೆ 3 ಕಾರಣ!!
ಕಳೆದ 3 ವರ್ಷ ವರ್ಗಾವಣೆಯಾಗದ್ದರಿಂದ ಈ ಬಾರಿ ಶೇ.16ರಷ್ಟು ವರ್ಗಾವಣೆಗೆ ಅವಕಾಶ ಕಲ್ಪಿಸಿಕೊಡಬೇಕಿತ್ತು. ಅಲ್ಲದೆ ಶಿಕ್ಷಕರ ಸಂಘದ ಕೆಲವರ ಮತ್ತು ತಪ್ಪು ಮಾಹಿತಿ ನೀಡಿ ಅರ್ಜಿ ಸಲ್ಲಿಸಿರುವವರ ಮರ್ಜಿ ಕಾಯಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಶಿಕ್ಷಕರು ಪ್ರಗತಿವಾಹಿನಿ ಎದುರು ಕಿಡಿಕಾರಿದರು.
ಈ ಬಾರಿಯ ವರ್ಗಾವಣೆ ಪ್ರಕ್ರಿಯೆ ಬಗ್ಗೆ ಬಹುಪಾಲು ಶಿಕ್ಷಕರು ಅತೃಪ್ತರಾಗಿದ್ದಾರೆ. ಹಾಗಾಗಿ ಬಿಜೆಪಿ ಸರಕಾರದ ಮಂತ್ರಿ ಮಂಡಳ ರಚನೆಯಾಗಿ ಹೊಸ ಶಿಕ್ಷಣ ಸಚಿವರು ಅಧಿಕಾರ ವಹಿಸಿಕೊಂಡ ನಂತರ ಅವರನ್ನು ಭೇಟಿಯಾಗಿ ವಿಷಯ ಮನದಟ್ಟು ಮಾಡಲು ನಿರ್ಧರಿಸಿದ್ದೇವೆ ಎಂದು ಶಿಕ್ಷಕರೊಬ್ಬರು ಪ್ರಗತಿವಾಹಿನಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ – ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಹಠಾತ್ ಸ್ಥಗಿತ
ಬಿಜೆಪಿಯ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಸಹ ಸಧ್ಯದ ವರ್ಗಾವಣೆ ನೀತಿ ಬಗ್ಗೆ ಅಸಮಾಧಾನಹೊಂದಿದ್ದು, ಅವರು ನೊಂದ ಶಿಕ್ಷಕರ ಪರವಾಗಿ ನಿಲ್ಲುತ್ತಾರೆ ಎನ್ನುವ ವಿಶ್ವಾಸವನ್ನು ಶಿಕ್ಷಕರು ಹೊಂದಿದ್ದಾರೆ. ವರ್ಗಾವಣೆ ನಿಯಮಾವಳಿಯಲ್ಲಿರುವ ಲೋಪದೋಷಗಳನ್ನು ಬದಲಾಯಿಸಲು ಒತ್ತಡ ಹೇರಲು ಶಿಕ್ಷಕರು ನಿರ್ಧರಿಸಿದ್ದಾರೆ.
ಈ ಮಧ್ಯೆ ಹೊಸ ಶಿಕ್ಷಣ ಸಚಿವರು ಅಧಿಕಾರ ವಹಿಸಿಕೊಂಡ ನಂತರ ಮತ್ತೆ ವರ್ಗಾವಣೆ ಪ್ರಕ್ರಿಯೆ ನಡೆಸುತ್ತಾರೆ ಎನ್ನುವ ಸುದ್ದಿ ಹರಡಿದೆ. ಅಕ್ಟೋಬರ್ ತಿಂಗಳಲ್ಲಿ ಮತ್ತೊಮ್ಮೆ ವರ್ಗಾವಣೆ ನಡೆಯುತ್ತದೆ ಎನ್ನುವ ಸುದ್ದಿ ದಟ್ಟವಾಗಿ ಹರಡಿದೆ.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲ ಗ್ರುಪ್ ಗಳಿಗೆ ಶೇರ್ ಮಾಡಿ)
ಸಂಬಂಧಿಸಿದ ಸುದ್ದಿಗಳು –
ಶಿಕ್ಷಕರ ವರ್ಗಾವಣೆ ತಿದ್ದುಪಡಿ ವಿಧೇಯಕ: ಕೊನೆಗೂ ಲಾಬಿಗೆ ಮಣಿದ ಸರಕಾರ!
ವರ್ಗಾವಣೆಗೆ ನಿರ್ಲಕ್ಷ್ಯ :ಸರಕಾರದ ವಿರುದ್ಧ ಶಿಕ್ಷಕರ ಕಿಡಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ