ಪ್ರಗತಿವಾಹಿನಿ ಸುದ್ದಿ, ಧಾರವಾಡ : ಜ. ೧೬ರಂದು ಸಂಕ್ರಾಂತಿ ಮರುದಿನ ಧಾರವಾಡ ಬೈಪಾಸ್ ಬಳಿ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿ ಇಂದು ಅವರ ಕುಟುಂಬ ಸದಸ್ಯರು ಅಕ್ಷರಶಃ ಕಣ್ಣೀರ ಧಾರೆ ಹರಿಸಿದರು.
ಈ ಅಪಘಾತದಲ್ಲಿ ತಮ್ಮವರನ್ನು ಕಳೆದುಕೊಂಡಿದ್ದ ಮೃತರ ಸಂಬಂಧಿಗಳ ಆಕ್ರಂದ್ರನ ಮಡುಗಟ್ಟಿತ್ತು. ಇದರಿಂದಾಗಿ ಎರಡೂವರೆ ಗಂಟೆಗಳ ಕಾಲ ಇಡೀ ಬೈಪಾಸ್ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿ ಮೌನ ಆವರಿಸಿತ್ತು.
ವಾಹನಗಳ ಓಡಾಟಿಲ್ಲದ ಆ ರಸ್ತೆಯ ಉದ್ದಕ್ಕೂ ಎಲ್ಲಿ ನೋಡಿದರಲ್ಲಿ ಕಣ್ಣೀರ ಹನಿಯೇ ಕಾಣುತ್ತಿತ್ತು.
ಕಣ್ಣೀರೇ ಸಾಂತ್ವನ ಹಾಗೂ ಕಣ್ಣೀರೇ ವ್ಯವಸ್ಥೆಯ ವಿರುದ್ಧ ಆಕ್ರೋಶವಾಗಿ ಹೊರ ಹೊಮ್ಮಿತ್ತು.
ಜನೆವರಿ ೧೫ರಂದು ಧಾರವಾಡದ ಇಟ್ಟಿಗಟ್ಟಿ ಬೈಪಾಸ್ ನಲ್ಲಿ ನಡೆದ ಟಿಟಿ ಮತ್ತು ಟಿಪ್ಪರ್ ಮಧ್ಯದ
ಅಪಘಾತದಲ್ಲಿ ದಾವಣಗೆರೆ ಮೂಲದ ೧೦ ಮಹಿಳೆಯರು ಸೇರಿ ಒಟ್ಟು ೧೨ ಜನ ಮೃತಪಟ್ಟಿದ್ದರು. ಘಟನೆ ಬಳಿಕ ಈ ಬೈಪಾಸ್ ಅವ್ಯವಸ್ಥೆಯ ವಿರುದ್ಧ ಸಾಕಷ್ಟು ಆಕ್ರೋಶ ಹೊರ ಹೊಮ್ನಿತ್ತು. ಅಂದು ಅಮಾಯಕರ ರಕ್ತ ಹರಿದು ಹೋಗಿದ್ದ ಅದೇ ಕಿಲ್ಲರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಇವತ್ತು ಮೃತರ ಕುಟುಂಬ ಸದಸ್ಯರು ಅವರ ಭಾವಚಿತ್ರಗಳನ್ನು ಇಟ್ಟು ಸಾಮೂಹಿಕ ಪೂಜೆ ಸಲ್ಲಿಸಿ, ಸಾತ್ವಿಕ ಆಕ್ರೋಶ ವ್ಯಕ್ತಪಡಿಸಿದರು.
ಸಾಂಕೇತಿಕ ಪ್ರತಿಭಟನೆಯ ಮೂಲಕ ಅಷ್ಟಪಥ ರಸ್ತೆ ನಿರ್ಮಾಣ, ಅಕ್ಕಪಕ್ಕದ ಹಳ್ಳಿಗಳ ಜಾನುವಾರಗಳಿಗೆ ಸೂಕ್ತ ರಸ್ತೆ, ಅಲ್ಲಿಯ ವರೆಗೆ ಟೋಲ್ ಸಂಗ್ರಹ ಕಡಿವಾಣ ಹಾಕಬೇಕು. ಉತ್ತರಕರ್ನಾಟಕ ಭಾಗದ ಜನಪ್ರತಿನಿಧಿಗಳಿಗೆ ಏನಾಗಿದೆ. ಯಾಕೆ ಮೌನವಹಿಸಿದ್ದಾರೆ ಎಂದು ಕಿಡಿಕಾರಿದರು. ರಸ್ತೆ ಅಗಲೀಕರಣ ಮಾಡದ ಪರಿಣಾಮ ಹಲವು ವರ್ಷಗಳ ಅವ್ಯವಸ್ಥೆಯ ವಿರುದ್ಧ ಆಕ್ರೋಶ ದಾಖಲಿಸಿದರು.
೪೦ಕ್ಕೂ ಹೆಚ್ಚು ವಾಹನಗಳಲ್ಲಿ ದಾವಣಗೆರೆಯಿಂದ ಘಟನಾ ಸ್ಥಳಕ್ಕೆ ಆಗಮಿಸಿದ ಕುಟುಂಬ ಸದಸ್ಯರು
ಹಾಗೂ ಹಿತೈಷಿಗಳು ಅಪಘಾತ ಸ್ಥಳದಲ್ಲೇ ಪೂಜೆ ಮಾಡಿ, ಶಾಂತಿಯುತ ಪ್ರತಿಭಟನೆ ಸಹ ಮಾಡಿ, ಇನ್ನು ಮುಂದೆ ಯಾವುದೇ ಸಾವುಗಳು ಈ ರಸ್ತೆಯಲ್ಲಿ ಆಗದಿರಲಿ. ನಮ್ಮ ಮನೆಯವರನ್ನು ಕಳೆದುಕೊಂಡಿರೋದೇ ಕೊನೆಯಾಗಲಿ, ಬೇಗ ರಸ್ತೆ ಅಗಲೀಕರಣ ಆಗಲಿ ಎಂದು ಕೇಳಿಕೊಂಡರು. ದಾವಣಗೆರೆಯಿಂದ ಆಗಮಿಸಿದ್ದ ಇವರಿಗೆ ಧಾರವಾಡದ ಸ್ಥಳೀಯರು ಸಹ ಬೆಂಬಲ ನೀಡಿದ್ದರು. ಕುಟುಂಬ ಸದಸ್ಯರ ದುಃಖದಲ್ಲಿ ಧಾರವಾಡಿಗರೂ ಸಹ ಭಾಗಿಯಾಗಿ, ರಸ್ತೆ ಅಗಲೀಕರಣಕ್ಕೆ ಆಗ್ರಹಿಸಿ
ಪ್ರತಿಭಟನೆಗೆ ಸಾಥ್ ನೀಡಿದರು. ಸುಮಾರು ಎರಡೂವರೆ ಗಂಟೆ ಕಾಲ ರಾಷ್ಟ್ರೀಯ ಹೆದ್ದಾರಿಯ
ಸಂಚಾರವೂ ಸಹ ಬಂದ್ ಆಗಿತ್ತು. ರಸ್ತೆ ಮಧ್ಯದಲ್ಲೆ ಮೃತಪಟ್ಟವರ ಫೋಟೋಗಳನ್ನಿಟ್ಟು
ಶಾಸ್ತ್ರೋಕ್ತವಾಗಿ ಪೂಜೆ ಮಾಡಿ, ಮೌನಾಚರಣೆಯನ್ನೂ ಮಾಡಿ ಮೃತರ ಆತ್ಮಕ್ಕೆ ಶಾಂತಿ
ಕೋರಿದರು.
ಅವರ ಮುಖಗಳೆಲ್ಲಾ ಬಾಡಿ ಹೋಗಿದ್ದವು. ಕಳೆದುಕೊಂಡವರನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತರು.
ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ತಂಗಿ ಅನಸೂಯಪ್ಪ, ಜಗಳೂರು ಮಾಜಿ ಶಾಸಕ ಟಿ.
ಗುರುಸಿದ್ದನಗೌಡ, ಮಾಜಿ ಶಾಸಕಿ ಸಾವಿತ್ರಿ ಗುಂಡಿ, ಡಾ. ರವಿಕುಮಾರ, ಡಾ. ರಮೇಶ, ಡಾ. ರವಿ, ಡಾ.
ಸುರೇಶ, ಡಾ. ಹಾಲಸ್ವಾಮಿ ಕಂಬಾಳಿಮಠ, ಜೆ.ಎಂ. ರಾಜಶೇಖರ, ಡಾ. ದೀಪಶ್ರೀ ಹೆಚ್.,. ಮಂಜುನಾಥ,
ಸುರೇಶ, ಬಾಬು, ಶಶಿಧರ್ ವೀರೇಶ, ನಟೇಶ್, ಶಿವಕುಮಾರ, ಚಂದ್ರಶೇಖರ ಹೆಚ್. ಸೇರಿದಂತೆ
ಅನೇಕರು ಸಾಮೂಹಿಕ ಪೂಜೆ, ಪ್ರಾರ್ಥನೆಯಲ್ಲಿ ಭಾಗವಹಿಸಿ, ಕೇಂದ್ರ ಹಾಗೂ ರಾಜ್ಯ ಸರಕಾರ ತಕ್ಷಣ
ಇತ್ತ ಗಮನ ಹರಿಸಬೇಕು. ನಮ್ಮ ಕುಟುಂಬಕ್ಕೆ ಆದ ಅನ್ಯಾಯ ಮತ್ತೋಂದು ಕುಟುಂಬಕ್ಕೆ ಆಗಬಾರದು
ಎಂದು ಆಗ್ರಹಿಸಿದರು.
ಹೈಕೋರ್ಟ್ ವಕೀಲ ಪಿ.ಎಚ್. ನೀರಲಕೇರಿ ನೇತೃತ್ವದಲ್ಲಿ ಸ್ಥಳೀಯರು 11 ಕಿಮೀ ಪಾದಯಾತ್ರೆಯ ಮೂಲಕ ಧಾರವಾಡದಿಂದ ಬಂದಿದ್ದರು. ಶಾಂತಿಯುತ ಪ್ರತಿಭಟನೆಯಲ್ಲಿ
ಮಾಜಿ ಸಂಸದ ಐ.ಜಿ. ಸನದಿ, ಕಾಂಗ್ರೆಸ್ ನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ, ಗ್ರಾಮೀಣ ಜಿಲ್ಲಾಧ್ಯಕ್ಷ
ಅನಿಲ್ ಪಾಟೀಲ್, ಹುಡಾ ಮಾಜಿ ಅಧ್ಯಕ್ಷ ಅನ್ವರ್ ಮುಧೋಳ, ಕಾಂಗ್ರೆಸ್ ಮುಖಂಡರಾದ ಬಾಬಾಜಾನ್ ಮುಧೋಳ, ದೇವಕಿ ಯೋಗಾನಂದ, ವಿಜಯಲಕ್ಷ್ಮಿ, ಶಾಕೀರ್ ಸನದಿ, ದಲಾಲ್ ವರ್ತಕರ ಸಂಘದ ಅಧ್ಯಕ್ಷ ಶಿವಶಂಕರ ಹಂಪಣ್ಣವರ, ಧಾರವಾಡ ಹೋಟೆಲ್ ಒಡೆಯರ್ ಸಂಘದ ಅಧ್ಯಕ್ಷ ಮಹೇಶ ಶೆಟ್ಟಿ, ಬಾಲನಂದನ ಟ್ರಸ್ಟ್ ಸದಸ್ಯ ನಾಗರಾಜ ಕಿರಣಗಿ, ಜಯಕರ್ನಾಟಕ ಸಂಘದ ಜಿಲ್ಲಾಧ್ಯಕ್ಷ
ಸುಧೀರ ಮುಧೋಳ, ಗಣೇಶ ಕುಲಕರ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನಿಂಗಯ್ಯ ಹಿರೇಮಠ ಅವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಬಳಿಕ ರಮ್ಯ
ರೆಸಿಡೆನ್ಸಿ ಯಲ್ಲಿ ಹೋಟೆಲ್ ಉದ್ಯಮಿ ಮಹೇಶ ಶೆಟ್ಟಿ ಅವರು ಪ್ರಸಾದ ವ್ಯವಸ್ಥೆ ಮಾಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ