*ನ್ಯಾಯಾಲಯದ ಆದೇಶ ನಿರ್ಲಕ್ಷಿಸಿದ ಐಎಎಸ್ ಅಧಿಕಾರಿ*: *ಜಿಲ್ಲಾಧಿಕಾರಿಗೆ 6 ತಿಂಗಳ ಜೈಲು ಶಿಕ್ಷೆ!*

ಪ್ರಗತಿವಾಹಿನಿ ಸುದ್ದಿ: ನ್ಯಾಯಾಲಯದ ಆದೇಶವನ್ನು ಉದ್ದೇಶಪೂರ್ವಕವಾಗಿ ಪಾಲಿಸದ ಆರೋಪದ ಮೇಲೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲಾಧಿಕಾರಿ ಸಿ. ನಾರಾಯಣ ರೆಡ್ಡಿ ಅವರಿಗೆ ಹೈಕೋರ್ಟ್ ಆರು ತಿಂಗಳ ಸರಳ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ₹2,000 ದಂಡವನ್ನೂ ಪಾವತಿಸುವಂತೆ ಆದೇಶಿಸಿದೆ. ಐಎಎಸ್ ಅಧಿಕಾರಿಯೊಬ್ಬರಿಗೆ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಇಂತಹ ಶಿಕ್ಷೆ ವಿಧಿಸಿರುವುದು ಗಮನ ಸೆಳೆದಿದೆ.
ಆದರೆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ ಉದ್ದೇಶದಿಂದ ಜೈಲು ಶಿಕ್ಷೆಯ ಜಾರಿಗೆ ನಾಲ್ಕು ವಾರಗಳ ಕಾಲ ತಡೆ ನೀಡಲಾಗಿದೆ. ಈ ಅವಧಿಯಲ್ಲಿ ಜಿಲ್ಲಾಧಿಕಾರಿ ತೀರ್ಪನ್ನು ಪ್ರಶ್ನಿಸಬಹುದು. ದಂಡದ ಮೊತ್ತವನ್ನು ನಾಲ್ಕು ವಾರಗಳೊಳಗೆ ಪಾವತಿಸುವಂತೆ ನ್ಯಾಯಾಲಯ ಸೂಚಿಸಿದೆ.
ಅಷ್ಟಕ್ಕೂ ಜಿಲ್ಲಾಧಿಕಾರಿಗೆ ಇಂತಹ ಶಿಕ್ಷೆ ವಿಧಿಸಲು ಕಾರಣವೇನು? ರಂಗಾರೆಡ್ಡಿ ಜಿಲ್ಲೆಯ ತುರ್ಕಯಾಂಜಲ್ನ ಮನ್ನೆ ಮುತ್ತ್ಯಾಲಮ್ಮ ಕುಂಟ ಪ್ರದೇಶದಲ್ಲಿರುವ ಎರಡು ನಿವೇಶನಗಳ ವಿವಾದವೇ ಇದಕ್ಕೆ ಮೂಲ ಕಾರಣ. ಪಿ. ಶಿವಲೀಲಾ ಮತ್ತು ಅವರ ಪತಿ ಪಿ. ವೆಂಕಟೇಶ್ವರ್ಲು ತಮ್ಮ ನಿವೇಶನಗಳನ್ನು ನಿಷೇಧಿತ ಆಸ್ತಿಗಳ ಪಟ್ಟಿಯಿಂದ ಕೈಬಿಡುವಂತೆ 2024ರ ಮಾರ್ಚ್ 14ರಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು.
ಆದರೆ ಮನವಿಗೆ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ದಂಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು. 2025ರ ಆಗಸ್ಟ್ 5ರಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, 60 ದಿನಗಳೊಳಗೆ ಮನವಿಯ ಕುರಿತು ನಿರ್ಧಾರ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿತ್ತು. ಮನವಿ ತಿರಸ್ಕರಿಸುವುದಾದರೆ ಅದಕ್ಕೆ ಸೂಕ್ತ ಕಾರಣಗಳನ್ನು ಒಳಗೊಂಡ ವಿವರವಾದ ಆದೇಶ ನೀಡಬೇಕೆಂದೂ ಸ್ಪಷ್ಟಪಡಿಸಿತ್ತು.
ಆದರೆ ನಿಗದಿತ ಅವಧಿಯಲ್ಲಿ ಜಿಲ್ಲಾಧಿಕಾರಿ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾದ ಬಳಿಕ 2026ರ ಫೆಬ್ರವರಿ 26ರಂದು ದಂಪತಿಯ ಮನವಿಯನ್ನು ತಿರಸ್ಕರಿಸಿದ್ದರು. ನಂತರ ಜುಲೈ 8ರಂದು ಮತ್ತೊಂದು ಆದೇಶ ಹೊರಡಿಸಿದ್ದರು. ನ್ಯಾಯಾಂಗ ನಿಂದನೆ ನೋಟಿಸ್ ಬಂದ ನಂತರವೇ ಕ್ರಮ ಕೈಗೊಂಡಿರುವುದನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.
ಇನ್ನೊಂದು ಪ್ರಮುಖ ಅಂಶವೆಂದರೆ, ಇದೇ ಬಡಾವಣೆಯಲ್ಲಿರುವ ಕೆಲವು ಅಕ್ಕಪಕ್ಕದ ನಿವೇಶನಗಳನ್ನು ನಿಷೇಧಿತ ಆಸ್ತಿಗಳ ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಆದರೆ ಈ ದಂಪತಿಯ ನಿವೇಶನಗಳ ವಿಚಾರದಲ್ಲಿ ಮಾತ್ರ ವಿಭಿನ್ನ ನಿರ್ಧಾರ ಕೈಗೊಳ್ಳಲಾಗಿತ್ತು. ಇದಕ್ಕೆ ಸೂಕ್ತ ಕಾರಣಗಳನ್ನೂ ಜಿಲ್ಲಾಧಿಕಾರಿ ನೀಡಿಲ್ಲ ಎಂದು ನ್ಯಾಯಮೂರ್ತಿ ಕೆ. ಲಕ್ಷ್ಮಣ್ ಗಮನಿಸಿದ್ದಾರೆ.
ನ್ಯಾಯಾಲಯದ ಹಿಂದಿನ ಆದೇಶ ತಪ್ಪಾಗಿದೆ ಎಂದು ಅಧಿಕಾರಿಗೆ ಅನಿಸಿದರೆ ಅದನ್ನು ಮೇಲ್ಮನವಿ ಮೂಲಕ ಪ್ರಶ್ನಿಸಬೇಕು. ಆದೇಶವನ್ನು ನಿರ್ಲಕ್ಷಿಸುವ ಅಧಿಕಾರ ಯಾರಿಗೂ ಇಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯ ನಡೆ ಉದ್ದೇಶಪೂರ್ವಕ ನ್ಯಾಯಾಂಗ ನಿಂದನೆ ಎಂದು ತೀರ್ಮಾನಿಸಿ ಶಿಕ್ಷೆ ವಿಧಿಸಿದೆ.
ಅಂದಹಾಗೆ, ನೋಂದಣಿ ಕಾಯ್ದೆಯ ಸೆಕ್ಷನ್ 22-A ಅಡಿಯಲ್ಲಿ ಕೆಲವು ಆಸ್ತಿಗಳನ್ನು ನಿಷೇಧಿತ ಆಸ್ತಿಗಳ ಪಟ್ಟಿಗೆ ಸೇರಿಸಲಾಗುತ್ತದೆ. ಇಂತಹ ಆಸ್ತಿಗಳ ಮಾರಾಟ, ಖರೀದಿ ಮತ್ತು ನೋಂದಣಿಗೆ ನಿರ್ಬಂಧಗಳಿರುತ್ತವೆ. ಈ ಪಟ್ಟಿಯಿಂದ ತಮ್ಮ ನಿವೇಶನಗಳನ್ನು ಕೈಬಿಡುವಂತೆ ದಂಪತಿ ಸಲ್ಲಿಸಿದ್ದ ಮನವಿಯ ವಿಚಾರದಲ್ಲಿ ನ್ಯಾಯಾಲಯದ ನಿರ್ದೇಶನ ಪಾಲಿಸದಿರುವುದೇ ಜಿಲ್ಲಾಧಿಕಾರಿಗೆ ಸಂಕಷ್ಟ ತಂದಿದೆ.




