Kannada NewsKarnataka News

ನಾನು ಎಂಎಲ್ಸಿ ಇದ್ದಾಗ ಬಿಟ್ಟ 2 ಬಸ್ ಗಳೇ ಇಂದೂ ಓಡಾಡುತ್ತಿವೆ -ಸತೀಶ್

ಪ್ರಗತಿವಾಹಿನಿ ಸುದ್ದಿ, ಗೋಕಾಕ – ಸರ್ಕಾರ ಬೀಳಿಸುವ ಪವರ್ ಇರೋರಿಗೆ ಗೋಕಾಕ ತಾಲೂಕಿನ ಹಳ್ಳಿಗಳಲ್ಲಿ ಒಂದು ಬಸ್ ಬಿಡಿಸುವ ಯೋಗತ್ಯೆ ಇಲ್ಲ. ನಾನು ಎಂಎಲ್ ಸಿ ಆದಾಗ ಬಿಟ್ಟ ಎರಡು ಬಸ್ ಗಳೇ ಇನ್ನೂ ಗೋಕಾಕ ತಾಲೂಕಿನ ಹಳ್ಳಿಗಳಲ್ಲಿ ಓಡಾಡುತ್ತಿವೆ. ಹಳ್ಳಿಗಳಲ್ಲಿ ಬಸ್ ಬಿಡಿಸುವಷ್ಠು ಸಣ್ಣ ಕೆಲಸವು ಇವರಿಂದ ಆಗಿಲ್ಲ ಎಂದು ಶಾಸಕ ಸತೀಶ ಜಾರಕಿಹೊಳಿ, ಸಹೋದರ ರಮೇಶ ಜಾರಕಿಹೊಳಿ ವಿರುದ್ದ ವಾಗ್ದಾಳಿ ನಡೆಸಿದರು.

ಗೋಕಾಕ ಸ್ಥಳೀಯ ಮತದಾರರ ಸಭೆಯಲ್ಲಿ ಮಾತನಾಡಿದ ಅವರು, ಅಭಿವೃದ್ದಿಗಾಗಿ ಪಕ್ಷ ಬದಲಾವಣೆ ಮಾಡಿರುವುದಾಗಿ ಹೇಳುತ್ತಿದ್ದಾರೆ. ಆದ್ರೆ ಯಾರ ಅಭಿವೃದ್ದಿ ಅಂತಾ ಇನ್ನು ಗೊತ್ತಾಗುತ್ತಿಲ್ಲ. ಕಳೆದ ೨೫ ವರ್ಷದಿಂದ ಶಾಸಕನಾಗಿ ಎರಡು ಬಾರಿ ಮಂತ್ರಿ ಆಗಿದ್ದವರಿಂದ ಆಗದ ಅಭಿವೃದ್ದಿ ಮುಂದೆ ಹೇಗಾಗುತ್ತದೆ. ತಮ್ಮ ಮನೆ ಮುಂದಿನ ರಸ್ತೆ ಮಾಡಿಸಿಕೊಳ್ಳೋಕೆ ಅವರಿಗೆ ೫ ವರ್ಷ ಹಿಡಿದಿದೆ. ೨ ಬಾರಿ ಚುನಾವಣೆಯಾದ್ರು ಇನ್ನು ರಸ್ತೆ ಕಾಮಗಾರಿ ಮುಗಿದಿಲ್ಲ. ಸದ್ಯ ನಾಕಾ ಬಳಿ ಬಂದು ನಿಂತಿದೆ. ಇಂತಹವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದ್ರು.

ಜಾರಕಿಹೊಳಿ ಬ್ರ್ಯಾಂಡ್ ಮತ್ತು ಲಖನ್ ಸಹಾಯವಿತ್ತು  

ರಮೇಶ ಜಾರಕಿಹೊಳಿ ೫ ಬಾರಿ ಶಾಸಕರಾಗಿ ಆಯ್ಕೆಯಾಗಲು ಕಾಂಗ್ರೆಸ್ ಪಕ್ಷ, ಜಾರಕಿಹೊಳಿ ಬ್ರ್ಯಾಂಡ್, ಲಖನ್ ಜಾರಕಿಹೊಳಿ ಸಪೋರ್ಟ್ ನಿಂದ ಸುಲಭವಾಗಿ ಗೆಲ್ಲುತ್ತಿದ್ದರು. ಇವು ಇಲ್ಲದೇ ಈ ಭಾರಿ ಅವರ ’ಖರೆ’ ಚುನಾವಣೆ ಆಗಲಿದೆ. ಕಾಂಗ್ರೆಸ್ ಬೆಂಬಲ ರಮೇಶ ರಾಜ್ಯದಲ್ಲಿ ಪ್ರಭಾವಿ ರಾಜಕಾರಣಿಯಾಗಲು ಸಹಕಾರಿಯಾಗಿದೆ. ನೀವು ಅವರ ಮೇಲೆ ತುಂಬಾ ಆತ್ಮೀಯತೆ ಇಟ್ಟುಕೊಂಡಿದ್ದೀರಿ. ಆದ್ರೆ ಆತ ನಿಮ್ಮನ್ನ ಕೇಳದೆ ಪಕ್ಷ ಬಿಟ್ಟಿದ್ದಾನೆ. ನಿಮ್ಮ ಅಭಿಪ್ರಾಯ ಸಂಗ್ರಹಿಸದೇ ತಮ್ಮ ಅಳಿಯನ ಅಭಿಪ್ರಾಯದ ಮೇರೆಗೆ ಬಿಜೆಪಿ ಸೇರಿದ್ದಾರೆ. ಗೋಕಾಕ ಜನತೆ ಈ ಬಾರಿ ಬದಲಾವಣೆ ಬಯಸಿದ್ದು, ಅದು ಕಾರ್ಯರೂಪಕ್ಕೂ ಬರಲಿದೆ ಎಂದರು.

ಮೋದಿ, ಅಮಿತ್ ಶಾರನ್ನ ಬೈದವರೇ ಅಪ್ಪಿಕೊಂಡಿದ್ದಾರೆ 

ಕಳೆದ ಬಾರಿ ವಿಧಾನಸಭೆ ಚುನಾವಣೆ ವೇಳೆ ಗೋಕಾಕನಿಂದ ಸ್ಪರ್ಧಿಸೋಕೆ ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಜಗದೀಶ ಶೆಟ್ಟರ್ ಅವರಿಗೂ ಸೆಡ್ಡು ಹೊಡೆದಿದ್ದರು. ಜೈಲಿಗೆ ಹೋಗಿ ಬಂದಿದ್ದಾರೆ ಅಂತಾ ಬಿ.ಎಸ್. ಯಡಿಯೂರಪ್ಪ ಅವರನ್ನು ನಿಂದಿಸಿದವರು ಇಂದು ಅದೇ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇಂತಹ ಬೇಜವಾಬ್ದಾರಿ ಶಾಸಕನನ್ನು ದೇಶದಲ್ಲಿಯೇ ನಾನೆಲ್ಲಿಯೂ ಕಂಡಿಲ್ಲ. ಅಭಿವೃದ್ದಿ ಮಂತ್ರ ಜಪಿಸುವ ಇವರು ಒಂದು ಬಾರಿಯೂ ಕೆಡಿಪಿ ಸಭೆ ನಡೆಸಿಲ್ಲ ಎಂದು ಟೀಕಿಸಿದರು.

ರಮೇಶ ಸಮಾಜ ಸೇವೆನೂ ಮಾಡಲ್ಲ. ಬ್ಯುಸಿನೆಸ್ ಕೂಡಾ ಮಾಡಲ್ಲ, ಆದ್ರೂ ತುಂಬಾ ಬ್ಯೂಸಿ ಇರ್ತಾನೆ. ಏನ್ ಮಾಡ್ತಾನ್ ಅಂತಾ ತಿಳಿದುಕೊಳ್ಳೋಕೆ ಒಂದು ಸಮಿತಿ ರಚಿಸಬೇಕಿದೆ ಎಂದು ಹೇಳುತ್ತಿದ್ದಂತೆ ಸಭೆಯಲ್ಲಿದ್ದ ಜನರು ನಗೆಗಡಲಲ್ಲಿ ತೇಲುವಂತೆ ಮಾಡಿದರು.

ನಾವು ಸಂಘಟನೆಯನ್ನು ಮಾಡುತ್ತೇವೆ. ಬ್ಯುಸಿನಸ್ ನಡೆಸುತ್ತೇವೆ. ರಾಜ್ಯಾದ್ಯಂತ ಪ್ರವಾಸವೂ ಮಾಡಿ ದಿನನಿತ್ಯ ೨ ಗಂಟೆ ಜನರಿಗಾಗಿ ಮೀಸಲಿಡುತ್ತೇವೆ. ಜನರ ಸೇವೆ ಮಾಡುವುದು ಶಾಸಕನ ಕೆಲಸ. ದುಡ್ಡು ಮಾಡೋಕೆ ಅಂತಾ ಶಾಸಕನಾಗಬಾರದು ಎಂದು ಝಾಡಿಸಿದರು.
ಸಾಮಾನ್ಯ ಜನ ನೇರವಾಗಿ ಶಾಸಕನ ಭೇಟಿಯಾಗುವ ವ್ಯವಸ್ಥೆಯೂ ಗೋಕಾಕನಲ್ಲಿ ಇಲ್ಲ. ಜನ ಬೇಸತ್ತಿದ್ದು, ಬದಲಾವಣೆ ಬಯಸಿದ್ದಾರೆ. ಲಖನ್ ಜಾರಕಿಹೊಳಿ ಅವರ ಪರ ಅಲೆಯಿದೆ. ಹೆಚ್ಚಿನ ಮತ ನೀಡಿ ಜಯಗಳಿಸಲಿದ್ದಾರೆ ಎಂದು ಹೇಳಿದ್ರು.
ಗೋಕಾಕ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಇದ್ದರು.

ಸ್ಥಳಿಯ ಸಮಸ್ಯೆಗಳೆಂದರೆ ಮಾವ, ಅಳಿಯ ಮತ್ತು ಅವರ ತಂಡ


ಅನರ್ಹ ಶಾಸಕ ರಮೇಶ ಜಾರಕಿಹೊಳಿ ಮತ್ತು ತಂಡದ ಅಭಿವೃದ್ಧಿ ಜಪ ಕೇವಲ ಡಿ. ೫ರ ವರೆಗೆ ಮಾತ್ರ, ಹೀಗಾಗಿ ಅವರ ಮಾತುಗಳಿಗೆ ಮರಳಾಗದೆ ಕಾಂಗ್ರೆಸ್ ಗೆಲ್ಲಿಸಿ ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಹಮ್ಮಿಕೊಂಡ ಸ್ಥಳೀಯ ಮತದಾರರ ಸಭೆಯಲ್ಲಿ ಮಾತನಾಡಿದ ಅವರು ನಮ್ಮ ಹೋರಾಟ ಕಾಂಗ್ರೆಸ್ -ಬಿಜೆಪಿ ಅಲ್ಲ, ಕ್ಷೇತ್ರದ ಸ್ಥಳಿಯ ಕ್ಷೇತ್ರದ ಸುಧಾರಣೆಗಾಗಿ ನಮ್ಮ ಹೋರಾಟ ಎಂದರು.
ನಮ್ಮ ಸ್ಥಳಿಯ ಸಮಸ್ಯೆಗಳೆಂದರೆ ಮಾವ, ಅಳಿಯ ಮತ್ತು ಅವರ ತಂಡ. ಇವರನ್ನು ಓಡಿಸಿದಾಗ ಮಾತ್ರ ಗೋಕಾಕ ಕ್ಷೇತ್ರ ಅಭಿವೃದ್ಧಿಗೊಳ್ಳುತ್ತದೆ. ರಮೇಶ ಹಿಂಬಾಲಕರಾದ ನಾಲ್ಕು ಜನ ನಗರಸಭೆ ಸದಸ್ಯರು ಅವರಿಗಿಂತ ಹೆಚ್ಚು ಓಡಾಡಿ ಪ್ರಚಾರ ಮಾಡುತ್ತಿದ್ದಾರೆ. ಏಕೆಂದರೆ ನಾಳೆ ನಾನು ಶಾಸಕನಾದರೆ ಅವರ ಅಭಿವೃದ್ಧಿ ಕುಂಠಿತವಾಗುತ್ತೆ. ಹೀಗಾಗಿ ಅವರ ಮಾತುಗಳಿಗೆ ಮರಳಾಗಬೇಡಿ. ೩೧ ವಾರ್ಡ್ ಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಬೆಂಬಲಿಸಿ ಎಂದು ಮನವಿ ಮಾಡಿಕೊಂಡರು.

ಗೋಕಾಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸತೀಶ ಜಾರಕಿಹೊಳಿ ಅವರ ಕೈ ಬಲಪಡಿಸಬೇಕಾಗಿದೆ. ಬೆಳಗಾವಿ ಬಿಟ್ಟರೆ ಹೆಚ್ಚು ಅಭಿವೃದ್ಧಿಯಾಗಿದೆ ಎಂದರೆ ಸತೀಶ ಅವರ ಕ್ಷೇತ್ರ ಯಮಕನಮರಡಿ. ಗೋಕಾಕ ಕ್ಷೇತ್ರವನ್ನು ಮುಂದೆ ಹೇಗೆ ಅಭಿವೃದ್ಧಿಪಥ ದತ್ತ ಒಯ್ಯಬೇಕು ಎಂದು ಈಗಲೇ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಯೋಜನೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಮತದಾರರ ಸಹಕಾರ ಅಗತ್ಯ ಎಂದರು.

ನಗರದಲ್ಲಿ ಮಾಸ್ಟರ್ ಪ್ಲಾನ್ ಜಾರಿಯಾಗಿ ೫ ವರ್ಷ ಕಳೆದಿವೆ. ಗೋಕಾಕ ವ್ಯಾಪಾರಸ್ಥರು ದಿನಂಪ್ರತಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಧೂಳಿನಿಂದ ಜನರ ಆರೋಗ್ಯ ಹಾಳಾಗಿ ಹೋಗಿದೆ. ನಗರಸಭೆಯಲ್ಲಿ ಭ್ರಷ್ಠಾಚಾರ ತಾಂಡವವಾಡುತ್ತಿದೆ. ನೀರಿನ ಸಮಸ್ಯೆ ಸೇರಿ ವಿವಿಧ ಮೂಲಭೂತ ಸೌಲಭ್ಯಗಳು ನಗರದಲ್ಲಿ ತಲೆದೋರಿವೆ. ೨೫ ವರ್ಷ ಕಳೆದರೂ ನಾವು ಇಂತಹ ಸಮಸ್ಯೆಗಳ ಬಗ್ಗೆ ಮಾತಾಡುವುದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಗೋಕಾಕ ಅಭಿವೃದ್ಧಿಯಾಗಬೇಕೆಂದರೆ ರಮೇಶ ಮತ್ತು ಬಟಾಲಿಯನ್ ಓಡಿಸಲೆಬೇಕು. ಈಗ ಚುನಾವಣೆ ಇರುವುದರಿಂದ ಮತದಾರರನ್ನು ಒಳಗೆ ಬಾ ಎಂಬ ಬೋರ್ಡ್ ಹಾಕಿ ಮತದಾನದ ಬಳಿಕ ನಾಳೆ ಬಾ ಎಂದು ಜಪ ಮಾಡುತ್ತಾರೆ. ಶಾಸಕರನ್ನು ಭೇಟಿಯಾಗಬೇಕೆಂದರೆ ೬ ತಿಂಗಳು  ಕಾಯಬೇಕು. ಇಂತಹದರಲ್ಲಿ ನಿಮ್ಮ ಸಮಸ್ಯೆ ಹೇಗೆ ಬಗೆಹರಿಸುತ್ತಾರೆ ಎಂದು ಪ್ರಶ್ನಿಸಿದರು.

ಶಾಸಕ ಸತೀಶ ಜಾರಕಿಹೊಳಿ, ಜಾವೇದ್ ಗೋಕಾಕ, ಭಗವಂತ ಹುಳ್ಳಿ, ವಿವೇಕ ಜತ್ತಿ, ವಿಜಯ ಜತ್ತಿ, ಮುರಾರಿ, ಬಸವರಾಜ ಸಾಯನ್ನವರ, ಬಸವರಾಜ ದೇಶನೂರ, ಜಾಕೀರ ನದಾಫ, ಅಕ್ಬರ್ ಜಮಾದಾರ್, ಇಲಾಹಿ ಖೈರದಿ, ಮುನ್ನಾ ಖತಿಬ್, ಆರೀಫ್ ಪೀರಜಾದೆ, ಕಲ್ಪನಾ ಜೋಷಿ  ಇತರರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button