ಎಂ.ಕೆ.ಹೆಗಡೆ, ಪ್ರಗತಿವಾಹಿನಿ, ಬೆಳಗಾವಿ –
ಆರಂಭದಿಂದಲೂ ಬಾಲಗ್ರಹಪೀಡೆಯಿಂದ ಬಳಲುತ್ತಿರುವ ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ ಸರಕಾರದ ಎಡವಟ್ಟಿನಿಂದ ಈಗ ಮತ್ತೊಂದು ಬಿಕ್ಕಟ್ಟಿಗೆ ಸಿಲುಕುವ ಲಕ್ಷಣ ಕಾಣುತ್ತಿದೆ.
ಸ್ಮಾರ್ಟ್ ಸಿಟಿ ಸ್ಪೆಷಲ್ ಪರ್ಪಸ್ ವೆಹಿಕಲ್ ಸ್ಥಾಪನೆಯಲ್ಲಿ ವಿಳಂಬ, 4 ಬಾರಿ ಎಂಡಿಗಳ ಬದಲಾವಣೆ, ಹಲವು ಬಾರಿ ಯೋಜನೆಗಳ ತಿದ್ದುಪಡಿ, ಜನಪ್ರತಿನಿಧಿಗಳ ಬದಲಾವಣೆ, ಅಧಿಕಾರ ಹಂಚಿಕೆ ವಿವಾದ ಮೊದಲಾದ ಕಾರಣಗಳಿಂದಾಗಿ ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ 4 ವರ್ಷದಲ್ಲಿ ಕೇವಲ 4 ಕೋಟಿ ರೂ. ಕಾಮಗಾರಿ ಮಾತ್ರ ಮಾಡಲು ಸಾಧ್ಯವಾಗಿದೆ.
ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಎಂಡಿ ಹುದ್ದೆಗೆ ಐಎಎಸ್ ಶ್ರೇಣಿಯ ಅಧಿಕಾರಿಯನ್ನು ನೇಮಕ ಮಾಡಬೇಕು. ಮೊದಲು ಐಎಎಸ್ ಅಧಿಕಾರಿ ಹಾಕಿದ್ದ ಸರಕಾರ ನಂತರ ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿ ನೇಮಿಸಿತ್ತು. ಆ ನಂತರ ಪುನಃ ಹಿರಿಯ ಐಎಎಸ್ ಅಧಿಕಾರಿ ನೇಮಕ ಮಾಡಿತ್ತು.
ಆದರೆ ಇದೀಗ ಕೆಎಂಎಎಸ್ (ಕರ್ನಾಟಕ ಮುನ್ಸಿಪಲ್ ಅಡ್ಮಿನಿಸ್ಟ್ರೇಟಿವ್ ಸರ್ವೀಸ್) ಗ್ರೇಡ್ ಅಧಿಕಾರಿಯನ್ನು ಎಂಡಿಯನ್ನಾಗಿ ನೇಮಕ ಮಾಡಲಾಗಿದೆ. ಶಿರಿನ್ ನದಾಫ್ ಎಂಜಿನಿಯರಿಂಗ್ ಪದವೀಧರರಾಗಿದ್ದು, ಬೆಳಗಾವಿಯಲ್ಲೇ ಕಲಿತವರು. ಇವರ ನೇಮಕದ ಮೂಲಕ ಸ್ಮಾರ್ಟ್ ಸಿಟಿ ಎಂಡಿ ಹುದ್ದೆಯನ್ನು ಐಎಎಸ್ ನಿಂದ ಕೆಎಂಎಎಸ್ ಗ್ರೇಡ್ ಗೆ ಇಳಿಸಲಾಗಿದೆ.
ಸಾವಿರಾರು ಕೋಟಿ ರೂ. ಯೋಜನೆಗೆ ಹಲವು ಬಾರಿ ಅಧಿಕಾರಿ ಬದಲಾವಣೆ ಮಾಡಿರುವ ಜೊತೆಗೆ ಹೀಗೆ ಕೆಳ ಶ್ರೇಣಿಯ ಅಧಿಕಾರಿ ನೇಮಕವೂ ವಿವಾದಕ್ಕೊಳಗಾಗಿದೆ. ಇವರನ್ನು ನಗರಾಭಿವೃದ್ಧಿ ಇಲಾಖೆ ನೇಮಕ ಮಾಡಿದೆ. ಡಿಪಿಎಆರ್ ನಿಂದ ಈ ನೇಮಕವಾಗಿಲ್ಲ.
ಜಂಟಿ ಎಂಡಿ ಕೆಎಎಸ್!:
ಇದಕ್ಕಿಂತ ವಿಪರ್ಯಾಸವೆಂದರೆ ಜಂಟಿ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಕೆಎಎಸ್ ಅಧಿಕಾರಿಯನ್ನು ನೇಮಿಸಿರುವುದು. ಕೆಎಎಸ್ ಅಧಿಕಾರಿ, ಅಥಣಿ ಮೂಲದ ಹರ್ಷ ಶೆಟ್ಟಿ ಅವರನ್ನು ನೇಮಿಸಲಾಗಿದೆ. ಇವರನ್ನು ಡಿಪಿಎಆರ್ ನಿಂದ ನೇಮಿಸಲಾಗಿದೆ. ಕೆಎಎಸ್ ಅಧಿಕಾರಿ ಕೆಎಂಎಎಸ್ ಅಧಿಕಾರಿಯ ಕೆಳಗೆ ಕೆಲಸ ಮಾಡಬೇಕಾಗಿದೆ.
ಅಲ್ಲದೆ ಸ್ಮಾರ್ಟ್ ಸಿಟಿ ಸ್ಪೆಷಲ್ ಪರ್ಪಸ್ ವೆಹಿಕಲ್ ಗೆ ಐಎಎಸ್ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿಯೂ ಸದಸ್ಯರಾಗಿರುತ್ತಾರೆ. ಸ್ಮಾರ್ಟ್ ಸಿಟಿ ಎಂಡಿ ಅಧ್ಯಕ್ಷತೆಯಲ್ಲಿ ನಡೆಸಲಾಗುವ ಸಭೆಗೆ ಜಿಲ್ಲಾಧಿಕಾರಿ ಸದಸ್ಯರಾಗಿ ಹಾಜರಾಗಬೇಕು!
ಒಂದಕ್ಕಿಂತ ಒಂದು ವಿಪರ್ಯಾಸ. ಈ ಎಲ್ಲ ಬಿಕ್ಕಟ್ಟಿನ ನಡುವೆ ಸ್ಮಾರ್ಟ್ ಸಿಟಿ ಯೋಜನೆ ದಡ ಹತ್ತಲಿದೆಯೋ… ಹಳ್ಳ ಹಿಡಿಯಲಿದೆಯೋ ಕಾದು ನೋಡಬೇಕಿದೆ.
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರನ್ನು ಕೇಳಿದಾಗ, ಗೊಂದಲದಿಂದ ಈ ನೇಮಕವಾಗಿರಬಹುದು. ಕೆಲವೊಮ್ಮೆ ಒಂದು ಇಲಾಖೆಯವರು ನೇಮಕ ಮಾಡಿದ್ದು ಇನ್ನೊಂದು ಇಲಾಖೆ ಗೊತ್ತಿರುವುದಿಲ್ಲ. ಈ ಬಗ್ಗೆ ವಿಚಾರಿಸುತ್ತೇನೆ ಎಂದರು.
ಅಧಿಕಾರಿಗಳು ಒಳ್ಳೆಯವರಿರಬಹುದು, ಆದರೆ ಶಿಷ್ಠಾಚಾರ ಪಾಲನೆ ಮಾಡದಿರುವುದು ಬಿಕ್ಕಟ್ಟಿಗೆ ಎಡೆಮಾಡಿಕೊಡಬಾರದೆನ್ನುವುದಷ್ಟೆ ಆಶಯ. ಹಾಗಾದಲ್ಲಿ ಮಹತ್ವಾಕಾಂಕ್ಷಿ ಯೋಜನೆ ಮತ್ತೆ ಮತ್ತೆ ದಾರಿ ತಪ್ಪಬಹುದು.
ಒಂದು ವಿಶೇಷವೆಂದರೆ ಈ ಇಬ್ಬರು ಅಧಿಕಾರಿಗಳೂ ಬೆಳಗಾವಿ ಜಿಲ್ಲೆಯವರು! ಸ್ವಂತ ಜಿಲ್ಲೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದರಿಂದ ಹೆಚ್ಚು ಕಾಳಜಿಯಿಂದ ಕೆಲಸಮಾಡಲೆಂದು ಆಶಿಸಬಹುದು.
ಇದನ್ನೂ ಓದಿ –
ಶಿರೀನ್ ನದಾಫ್ ಸ್ಮಾರ್ಟ್ ಸಿಟಿ ಎಂಡಿ
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಶೇರ್ ಮಾಡಿ) (ಪ್ರತಿಕ್ರಿಯೆ ಕಳುಹಿಸಿ – [email protected])
ಗೊಂದಲದಿಂದ ಈ ರೀತಿ ನೇಮಕವಾಗಿರಬಹುದು. ಈ ಬಗ್ಗೆ ವಿಚಾರಿಸುತ್ತೇನೆ
-ಸತೀಶ್ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ