ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾ ಕುರಿತು ಆರೋಗ್ಯ ಇಲಾಖೆ ಇಂದು 12 ಗಂಟೆಯ ನಂತರ ಬಿಡುಗಡೆ ಮಾಡಲಿರುವ ವರದಿ ಬೆಳಗಾವಿ ಜಿಲ್ಲೆಗೆ ಆತಂಕವನ್ನು ತಂದಿಟ್ಟಿದೆ. ಒಟ್ಟಾರೆ 1009 ಜನರ ವರದಿ ಬರಬೇಕಿದ್ದು, ಇದರಲ್ಲಿ ಎಷ್ಟು ಇಂದೇ ಬರಲಿದೆ ಎನ್ನುವುದು ಮತ್ತು ಎಷ್ಟು ಪಾಸಿಟಿವ್, ಎಷ್ಟು ನೆಗೆಟಿವ್ ಬರಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಇದೇ ವೇಳೆ ಈವರೆಗೆ ಪಾಸಿಟವ್ ಬಂದಿರುವ 122 ಜನರ ಪೈಕಿ 93 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು ಸಮಾಧಾನ ತರುವ ವಿಷಯವಾಗಿದೆ. ಇನ್ನು ಜಿಲ್ಲೆಯಲ್ಲಿ 36 ಜನರು ಮಾತ್ರ ಕೊರೋನಾಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಒಟ್ಟೂ 2319 ಜನರು ಹೋಂ ಕ್ವಾರಂಟೈನ್ ನಲ್ಲಿದ್ದರೆ 35 ಜನರು ಆಸ್ಪತ್ರೆಗಳ ಐಸೋಲೇಟೆಡ್ ವಾರ್ಡ್ ಗಳಲ್ಲಿದ್ದಾರೆ.
ಕೇವಲ ವೃದ್ದೆಯೊಬ್ಬಳು ಕೊರೋನಾ ಎಂದು ದೃಢಪಡುವ ಮೊದಲೇ, ಆಸ್ಪತ್ರೆಗೆ ದಾಖಲಾಗುವ ಮೊದಲೇ ಮೃತಪಟ್ಟಿರುವುದನ್ನು ಹೊರತುಪಡಿಸಿದರೆ ಜಿಲ್ಲೆಯಲ್ಲಿ ಯಾರೂ ಕೊರೋನಾದಿಂದ ಸಾವಿಗೀಡಾಗಿಲ್ಲ.
ಇಂದು ಬರಲಿರುವ ಗಂಟಲು ದ್ರವ ಪರೀಕ್ಷಾ ವರದಿ ಜಿಲ್ಲೆಯ ಜನರು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದೆ. ಒಂದರ್ಥದಲ್ಲಿ ಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಕೊರೋನಾ ಯಾವ ವೇಗದಲ್ಲಿ ಹರಡಲಿದೆ ಎನ್ನುವುದರ ದಿಕ್ಸೂಚಿಯಾಗಿ ನಿಲ್ಲಲಿದೆ ಬರಲಿರುವ 1009 ಜನರ ವರದಿಗಳು.
ತಬ್ಲಿಘಿಗಳ ಧಾರ್ಮಿಕ ಸಭೆ, ಆಜ್ಮೀರ್ ಭೇಟಿ ಮತ್ತು ಈಗಿನ ಮಹಾರಾಷ್ಟ್ರ ಸಂಪರ್ಕಗಳು ಜಿಲ್ಲೆಯಲ್ಲಿ ಕೊರೋನಾ ಅಪ್ಪಳಿಸುವಂತೆ ಮಾಡಿ ಆತಂಕ ತಂದಿಟ್ಟವು. ಆದರೆ ಜಿಲ್ಲಾಡಳಿತ ಆರಂಭದಲ್ಲಿ ಒಂದಿಷ್ಟು ಎಡವಿದರೂ ನಂತರದಲ್ಲಿ ಸಮರ್ಪಕವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗಿದೆ.
ಸಂಘ ಸಂಸ್ಥೆಗಳು, ದಾನಿಗಳು ಸಾಕಷ್ಟು ನೆರವು ನೀಡಿದವು. ಜಿಲ್ಲಾಡಳಿತಕ್ಕೆ ಕೊರೋನಾ ಸಂಬಂಧ ಸರಕಾರ ಬಿಡುಗಡೆ ಮಾಡಿರುವ ಹಣದಲ್ಲಿ ಎಷ್ಟು ಖರ್ಚು ಮಾಡಿದೆ, ಯಾವ್ಯಾವುದಕ್ಕೆ ಬಳಸಿದೆ ಎನ್ನುವ ಲೆಕ್ಕವನ್ನು ಈವರೆಗೂ ಕೊಟ್ಟಿಲ್ಲ. ಬಹುತೇಕ ಪಿಪಿಇ ಕಿಟ್, ಮಾಸ್ಕ್, ಸೆನಿಟೈಸರ್ ಸೇರಿದಂತೆ ಸಾಮಗ್ರಿಗಳು ದಾನಿಗಳ ನೆರವಿನಿಂದಲೇ ಬಂದಿವೆ. ಜಿಲ್ಲಾಡಳಿತ ಇದಕ್ಕೆ ಹಣವನ್ನೇ ಬಳಸಿಲ್ಲ ಎನ್ನುವ ಆರೋಪ ಇದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಬೇಕಿದೆ. ಬಂದಿರುವ, ಖರ್ಚಾಗಿರುವ ಹಣದ ವಿವರವನ್ನು ಸಾರ್ವಜನಿಕರೆದುರು ತೆರೆದಿಡಬೇಕಿದೆ.
ಜಿಲ್ಲೆಯ ಬಹುತೇಕ ಎಲ್ಲ ಇಲಾಖೆಗಳ, ಅಧಿಕಾರಿಗಳು, ಸಿಬ್ಬಂದಿ ಕೊರೋನಾ ವಿಷಯದಲ್ಲಿ ಸಂಪೂರ್ಣ ತೊಡಗಿಸಿಕೊಂಡು ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ