Belagavi NewsBelgaum NewsEducationKannada NewsKarnataka News

*ದೇಶದ ಉಜ್ವಲ ಭವಿಷ್ಯ ಶಿಕ್ಷಕರ ಕೈಯಲ್ಲಿದೆ: ಬ್ರಿಗೇಡಿಯರ್ ಜಾಯ್‌ದೀಪ್ ಮುಖರ್ಜಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಶಿಕ್ಷಕರು ಕೇವಲ ಪುಸ್ತಕದ ಜ್ಞಾನವನ್ನಷ್ಟೇ ನೀಡುತ್ತಿಲ್ಲ, ಬದಲಾಗಿ ಅವರು ಮುಂದಿನ ಪೀಳಿಗೆ ಮತ್ತು ದೇಶದ ಭವಿಷ್ಯವನ್ನು ರೂಪಿಸುವ ಮಹತ್ತರ ಕೆಲಸ ಮಾಡುತ್ತಿದ್ದಾರೆ,” ಎಂದು ಬ್ರಿಗೇಡಿಯರ್ ಜಾಯ್‌ದೀಪ್ ಮುಖರ್ಜಿ ಅಭಿಪ್ರಾಯಪಟ್ಟರು.

ಕ್ಯಾಂಪ್ ಪ್ರದೇಶದ ಬಿ.ಕೆ. ಮಾಡೆಲ್ ಹೈಸ್ಕೂಲ್‌ನ ಶತಮಾನೋತ್ಸವ ಸಮಾರಂಭದ ಸಮಾರೋಪ ಸಮಾರಂಭವು ಶುಕ್ರವಾರ ಸಂಜೆ ಜರುಗಿತು. ಕಾರ್ಯಕ್ರಮದಲ್ಲಿ ಮರಾಠಾ ಲೈಟ್ ಇನ್ಫ್ಯಾಂಟ್ರಿ ಕೇಂದ್ರದ ಬ್ರಿಗೇಡಿಯರ್ ಜಾಯ್‌ದೀಪ್ ಮುಖರ್ಜಿ ಅವರೊಂದಿಗೆ ಖ್ಯಾತ ಕನ್ನಡ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಹಾಗೂ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಮತ್ತು ಬೆಳಗಾವಿ ಡಿಡಿಪಿಐ ಲೀಲಾವತಿ ಹಿರೇಮಠ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಬ್ರಿಗೇಡಿಯರ್ ಮುಖರ್ಜಿ ಅವರು, “ಉತ್ತಮ ಶಿಕ್ಷಣದ ಮೂಲಕ ಇಂದಿನ ವಿದ್ಯಾರ್ಥಿಗಳು ನಾಳೆಯ ದೇಶದ ಸುಜ್ಞಾನಿ ನಾಗರಿಕರಾಗಲಿದ್ದಾರೆ. ಇವರನ್ನು ರೂಪಿಸುವಾಗ ಶಿಕ್ಷಕರು ಆಧುನಿಕ ತಂತ್ರಜ್ಞಾನದ ಪರಿಚಯ ಮಾಡಿಕೊಡಬೇಕು. ಇಂದಿನ ಜಗತ್ತಿನಲ್ಲಿ ಯುದ್ಧತಂತ್ರಗಳು ಬದಲಾಗಿವೆ, ಇದರ ಪರಿಣಾಮವನ್ನು ನಾವು ‘ಆಪರೇಷನ್ ಸಿಂದೂರ್’ನಲ್ಲಿ ನೋಡಿದ್ದೇವೆ. ಇಂದು ವಿಶ್ವದಾದ್ಯಂತ ಯುದ್ಧಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಕರು ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಮಹತ್ವವನ್ನು ತಿಳಿಸಿಕೊಡಬೇಕು,” ಎಂದರು.

ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, “ನಾನು ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ, ಆದರೆ ಬೆಳಗಾವಿಗೆ ಬಂದಾಗ ಸಿಗುವ ಸಮಾಧಾನ ಮತ್ತು ಸಂತೋಷವೇ ಬೇರೆ. ಇಂದಿನ ಕಾರ್ಯಕ್ರಮದಲ್ಲಿ ಹಳೆಯ ಮತ್ತು ಪ್ರಸ್ತುತ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರ ಉತ್ಸಾಹ ಕಂಡು ಪ್ರಭಾವಿತನಾಗಿದ್ದೇನೆ. ಈ ಶಾಲೆ ನೂರು ವರ್ಷ ಪೂರೈಸಿರುವುದು ಹೆಮ್ಮೆಯ ವಿಷಯ. ಕಾಕತಾಳೀಯವೆಂದರೆ ನಾನು ಓದಿದ ಸರ್ಕಾರಿ ಶಾಲೆಯೂ ಈ ವರ್ಷ ಶತಮಾನೋತ್ಸವ ಆಚರಿಸುತ್ತಿದೆ,” ಎಂದು ಹೇಳುತ್ತಾ ತಮ್ಮ ವಿದ್ಯಾರ್ಥಿ ಜೀವನ ಹಾಗೂ ಚಿತ್ರರಂಗದ ಅನುಭವಗಳನ್ನು ಹಂಚಿಕೊಂಡರು.

Home add -Advt

ಜಿಲ್ಲಾ ಶಿಕ್ಷಣಾಧಿಕಾರಿ ಲೀಲಾವತಿ ಹಿರೇಮಠ ಅವರು ಕೂಡ ಪ್ರಸ್ತುತ ಕಾಲಘಟ್ಟಕ್ಕೆ ಪೂರಕವಾದ ವಿಚಾರಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಅವಿನಾಶ್ ಪೋತದಾರ್ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀನಿವಾಸ್ ಶಿವಣಗಿ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಪಾರ್ಶ್ವನಾಥ ಉಪಾಧ್ಯೆ ಅವರಿಂದ ನೃತ್ಯ ಪ್ರದರ್ಶನ ಜರುಗಿತು.

Related Articles

Back to top button