Kannada NewsKarnataka News

ಥೂ… ಇವರೆಂತಾ ನಿಷ್ಕರುಣಿ ಅಧಿಕಾರಿಗಳು?

ಶೇಖರ ಕಲ್ಲೂರ, ಚನ್ನಮ್ಮನ ಕಿತ್ತೂರು: ಇವರೆಂತಹ ನಿಷ್ಕರುಣಿ ಅಧಿಕಾರಿಗಳು… ಇಂತವರನ್ನು ಸಮುದ್ರಕ್ಕೆ ಎಸೆದು ಬರಬೇಕು. ದಿನನಿತ್ಯ ತೆವಳುತ್ತ ಸಾಗುತ್ತಿರುವ ಇಂತಹ ವಿಕಲಚೇತನರಿಗೆ ಮಂಜೂರಾಗಿದ್ದರೂ ಬೈಕ್ ನೀಡದೆ ಸತಾಯಿಸುತ್ತಿದ್ದಾರೆ.
ಕಿತ್ತೂರಿನಲ್ಲಿ ಸರಕಾರ ಇದೆಯೋ ಸತ್ತು ಹೋಗಿದೆಯೋ? ಶಾಸಕರು ಇಂತದನ್ನೆಲ್ಲ ಹೇಗೆ ಸಹಿಸಿಕೊಂಡಿರುತ್ತಾರೆ?
ಸರಕಾರ ವಿಕಲಚೇತನರಿಗೆ ಅನುಕೂಲವಾಗುವಂತೆ ಉಚಿತವಾಗಿ ಬೈಕ್ ನೀಡುವ ಯೋಜನೆ ರೂಪಿಸಿದೆ. ಆದರೆ ಇಲ್ಲಿ ಒಬ್ಬ ಸಿಬ್ಬಂದಿ  ವಿಕಲಚೇತನರಿಗೆ ಬೈಕ್ ಮಂಜೂರಾದರೂ ನೀಡುವುದಕ್ಕೆ ವಿಳಂಬ ಮಾಡುತ್ತಿದ್ದಾನೆ.
ಪಟ್ಟಣದ 28 ವಯಸ್ಸಿನ ಮಹಮ್ಮದ್ ಕುತುಬುದಿನ್ ಮನಿಯಾರ  ಎಂಬ ವ್ಯಕ್ತಿ ಹುಟ್ಟಿನಿಂದಲೂ ಎರಡು ಕಾಲಗಳನ್ನು ಕಳೆದುಕೊಂಡು ತೆವಳಿಕೊಂಡು ನಡೆಯುವ ಪರಿಸ್ಥಿತಿ ಇದೆ.  ಬಡ ಕುಟುಂಬದಲ್ಲಿ ಜನಿಸಿದ ಇವನು ಪ್ರತಿದಿನ  ಕೆಲವು ಕಿರಾಣಿ ಅಂಗಡಿಗಳಿಗೆ ಹೋಗಿ ದಿನಸಿ ವಸ್ತುಗಳನ್ನು  ಪ್ಯಾಕಿಂಗ್ ಮಾಡಿ ಬಂದ ಹಣದಿಂದ  ತನ್ನ ಜೀವನಕ್ಕೆ ದಾರಿ ಮಾಡಿಕೊಳ್ಳುತ್ತಿದ್ದಾನೆ.
ಮಹಮ್ಮದ್  ಮನಿಯಾರ  ಕೆಲ ತಿಂಗಳ ಹಿಂದೆ ತನಗೆ ಒಂದು ಮೂರು ಗಾಲಿಯ ಬೈಕ್ ಬೇಕು ಎಂದು ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದ. ಇವನ ಆ ಅರ್ಜಿಗೆ ಸರಕಾರ ಸ್ಪಂದಿಸಿ ಇವನಿಗೆ ಒಂದು ಮೂರು ಗಾಲಿಯ ಬೈಕ್  ಮಂಜೂರು ಮಾಡಿದೆ. ಆದರೆ ಇಲ್ಲಿಯ ಪಟ್ಟಣ ಪಂಚಾಯತಿಯ ಸಿಬ್ಬಂದಿ ಆ ಬೈಕ್ ಕೊಡಲು ಕಿರಿಕಿರಿ ಮಾಡುತ್ತಿದ್ದಾನೆ.
ಪ್ರಗತಿವಾಹಿನಿಗೆ ಅಳಲು ತೊಡಿಕೊಂಡ ಅಂಗವಿಲಕ ಮಹಮ್ಮದ್, ನಾನು ಈ ಹಿಂದೆ ನನಗೆ ಬೈಕ್ ಬೇಕು ಎಂದು ಅರ್ಜಿ ಸಲ್ಲಿಸಿದ್ದೆ. ಅದು ಮಂಜೂರು ಕೂಡಾ ಆಗಿದೆ. ಅದನ್ನು ಪಡೆಯಲು ನನ್ನ ಹತ್ತಿರ ಪಟ್ಟಣ ಪಂಚಾಯತಿ ಸಿಬ್ಬಂದಿ 6 ಸಾವಿರ ಹಣ ಕೇಳಿದ್ದಾನೆ. ಆದರೆ ನನ್ನ ಹತ್ತಿರ ಅಷ್ಟು ಹಣ ಇಲ್ಲದ್ದರಿಂದ ನಾನು ಮೂರು ಸಾವಿರ ರೂ. ಹಣವನ್ನು ಬೇರೆಯೊಬ್ಬರ ಕಡೆ ಸಾಲ‌ ಮಾಡಿ ಕೊಟ್ಟಿದ್ದೇನೆ. ಪೂರ್ಣ ಹಣ ನೀಡದಿದ್ದರೆ  ನಿನಗೆ ಬೈಕ್  ನೀಡುವುದಿಲ್ಲ ಎಂದು ಹೇಳುತ್ತಾನೆ.
ಮೂರು ಗಾಲಿಯ ಬೈಕ್ ಮಂಜೂರಾಗಿ ತಿಂಗಳು ಕಳೆದರೂ ನನಗೆ ಇನ್ನೂವರೆಗೂ ಬೈಕ್ ಕೊಡುತ್ತಿಲ್ಲ. ಕೇಳಿದರೆ ನಾಲ್ಕು ದಿನ ಬಿಟ್ಟು ಬಾ, ಸಾಹೇಬರು ಇಲ್ಲ ಅಂತಾ ಕೇಳಿ ಕಳಿಸುತ್ತಾನೆ ಎನ್ನುತ್ತಾರೆ.

 

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೇಳಿದರೆ, ಆದಷ್ಟು ಬೇಗ ಕೊಡುತ್ತಾರಂತೆ. ಮಾನವೀಯತೆ ಇದೆಯೇ ಇವರಿಗೆ? ಸರಕಾರದಿಂದ ಮಂಜೂರಾಗಿದ್ದರೂ ಇಟ್ಟುಕೊಂಡು ಕುಳಿತುಕೊಳ್ಳಲು ಇವರಿಗೇನಿದೆ ಅಧಿಕಾರ? ಶಾಸಕರೇ ನಿಮಗಾದರೂ ಕರುಣೆಯಿದ್ದರೆ ಮಂಗಳವಾರವೇ ವಿಕಲಚೇತನರ ಮನೆಗೆ ಹೋಗಿ ಬೈಕ್ ತಲುಪಿಸಿ ಬನ್ನಿ. 
ನಮ್ಮ ಪಟ್ಟಣ ಪಂಚಾಯಿತಿಯಿಂದ ಅಂಗವಿಕಲರ ಮೂರು ಗಾಲಿ ಬೈಕ್ ಇಬ್ಬರಿಗೆ ಮಂಜೂರಾಗಿದೆ. ಇನ್ನೂ ವಿತರಣೆ ಮಾಡಿಲ್ಲ. ಆದಷ್ಟು ಬೇಗ ಮಾಡಲಾಗುತ್ತದೆ. ಬೈಕ್ ನೀಡಲು ಯಾವುದೇ ಫೀ ಇಲ್ಲ. ಇದನ್ನು ಉಚಿತವಾಗಿ ನೀಡಲಾಗುವುದು.
-ಬಿ.ಬಿ.ಗೋರೋಶಿ ಪಪಂ ಮುಖ್ಯಾಧಿಕಾರಿ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button