‘ಬಯಲು ಶೌಚ ಮುಕ್ತ’ ಮಾಡುವಲ್ಲಿ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಸರ್ಕಾರಗಳು ಮತ್ತು ಇಂದಿನ ಸರ್ಕಾರ ಫೇಲ್

-ರವಿ ಕರಣಂ

ಉತ್ತರ ಕರ್ನಾಟಕದ ಪ್ರವಾಸದಲ್ಲಿ ಕಂಡ ಅಸಹ್ಯ ದೃಶ್ಯಗಳು ನಿಮಗೂ ಕಾಣ ಸಿಗುತ್ತವೆ. ನಾನು ಕ್ಯಾಮೆರಾ ಸಹಿತ ಹೋಗಿದ್ದರೂ, ನಿಮಗೆ ಸಾಕ್ಷಿಗಾಗಿ ತೆಗೆದು ತೋರಿಸಲಾಗದಂಥ ಸ್ಥಿತಿ. ಸಾಕ್ಷಿ ಕೇಳುವವರು ಬೇಕಿದ್ದರೆ ಹೋಗಿ ಕಣ್ಣಾರೆ ನೋಡಬೇಕು. ಹಾಗೇ ಕಣ್ತುಂಬಿಕೊಳ್ಳಬೇಕು. ಅದು ದಾರಿಯುದ್ದಕ್ಕೂ ಕಂಡ ಅನೇಕ ಹಳ್ಳಿಗಳ ಜನರು, ಹೆಣ್ಣು ಗಂಡು, ಮಕ್ಕಳು , ಮಹಿಳೆಯರು, ಹಿರಿ ಕಿರಿಯರೆನ್ನದೇ “ಶೌಚಾಲಯೋತ್ಸವ” ಆಚರಿಸುತ್ತಿದ್ದುದು ನಿಜಕ್ಕೂ ಬೇಸರ, ಕೋಪ ತರಿಸುತ್ತದೆ. ಈ ವಿಷಯ ಗಂಭೀರವಾದುದು. “ಬಯಲು ಶೌಚಾಲಯ ಮುಕ್ತ” ಮಾಡುವಲ್ಲಿ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಸರ್ಕಾರಗಳು ಮತ್ತು ಇಂದಿನ ಸರ್ಕಾರ ಫೇಲ್. ಕೇಂದ್ರ ಸರ್ಕಾರಗಳ ಪ್ರಯತ್ನ ವೂ ವಿಫಲವಾಗಿವೆ. ಇದು ನಾಚಿಕೆಗೇಡಿನ ಸಂಗತಿ.

ನವಲಗುಂದ, ನರಗುಂದ, ಬಾಗಲಕೋಟೆ, ಆಲಮಟ್ಟಿ, ಮುದ್ದೇಬಿಹಾಳ, ಸುರಪುರ, ತಾಳಿಕೋಟೆ, ದೇವರ ಹಿಪ್ಪರಗಿ, ಹೂವಿನ ಹಿಪ್ಪರಗಿ ಮುಂತಾದವುಗಳೆಡೆ ಹೋಗುವಾಗ ಇದರ ದರ್ಶನವಾಯಿತು.

ರಾಜ್ಯ ಹೆದ್ದಾರಿಗೆ ಅಂಟಿಕೊಂಡ ಎಷ್ಟೋ ಹಳ್ಳಿಗಳ ಮೇಲೆ ಹಾದು ಹೋಗುತ್ತಿದ್ದಾಗಲಂತೂ, ಮಕ್ಕಳು ರಸ್ತೆ ಬದಿಯಲ್ಲೇ ನಿಸರ್ಗದ ಕರೆಯ ವಿಸರ್ಜನೆಯಲ್ಲಿ ತೊಡಗಿದ್ದು, ಹೆಣ್ಣು ಮಕ್ಕಳು ಗುಂಪು ಗುಂಪಾಗಿ, ನೀರಿನ ತಂಬಿಗೆಗಳನ್ನು ಹಿಡಿದುಕೊಂಡು,ಗಿಡ ಮರ ಪೊದೆಗಳನ್ನರಸಿ ಹೋಗುತ್ತಿದ್ದುದು, ಯುವಕರು ಬೈಕ್ ಗಳಿಂದಿಳಿದು, ವಾಟರ್ ಬಾಟಲ್ ಗಳನ್ನು ಹಿಡಿದುಕೊಂಡು, ಬೇಲಿಗಳತ್ತ ಹೋಗುತ್ತಿದ್ದುದನ್ನು ನೋಡಿದಾಗ, ಇದೇನಾ ಅಭಿವೃದ್ಧಿ? ಇದೆಂಥಾ ನಾಗರಿಕ ಸಮಾಜ? ಇದೇನು ಇನ್ನೂ 18 ನೇ ಶತಮಾನದಲ್ಲಿದ್ದೇವೆಯೇ ಎನಿಸಿ ಬಿಟ್ಟಿತು.

ಅಂದರೆ ಸರ್ಕಾರದ ಪ್ರಧಾನ ಮಂತ್ರಿ ಶೌಚಾಲಯ ಯೋಜನೆ, ನೈರ್ಮಲ್ಯ ಗ್ರಾಮ ಯೋಜನೆಗಳು, ಸ್ವಚ್ಛ ಗ್ರಾಮ ಯೋಜನೆ ಮುಂತಾದವುಗಳೆಲ್ಲ ಪರಿಸರವನ್ನು ಕಾಪಾಡಲು ಜಾರಿಗೊಳಿಸಲಾದ ಅವುಗಳ ಫಲಿತಾಂಶವೇನು? ಶೌಚಾಲಯಗಳನ್ನು ಕಟ್ಟಿ ಕೊಡಲು ಸಹಾಯ ಧನ, ಕಟ್ಟಿಸಿಕೊಡುವ ಜವಾಬ್ದಾರಿ ಹೊತ್ತ ಸ್ಥಳೀಯ ಸರ್ಕಾರಗಳ ಸಾಧನೆಗಳೇನು ? ಗೊತ್ತಿಲ್ಲ. ಇನ್ನೂ ಬಯಲಲ್ಲಿ ವಿಸರ್ಜನಾ ಕ್ರಿಯೆಯಲ್ಲಿ ತೊಡಗಿರುವ ಗ್ರಾಮೀಣ ಭಾಗದ ಜನರಿಗೆ ಪರಿಸರ ಸ್ವಚ್ಛತೆಯ ಅರಿವು ಮೂಡಿಸುವವರು ಯಾರು ?

ಗ್ರಾಮದ ಹೊರ ಭಾಗದಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿರುತ್ತಾರೆ. ಅಲ್ಲಿ ಸರಿಯಾದ ನೀರಿನ ವ್ಯವಸ್ಥೆಯೂ ಇರುವುದಿಲ್ಲ ಮತ್ತು ಅದನ್ನು ಸರಿಯಾಗಿ ಇಟ್ಟುಕೊಳ್ಳುವುದು ಇಲ್ಲ. ಅವುಗಳೆಡೆಗೆ ಮುಖ ಮಾಡುವುದಂತೂ ತೀರ ಕಷ್ಟ. ನಿರ್ವಹಣಾ ಕಾರ್ಯವಂತೂ ಸಂಪೂರ್ಣ ವಿಫಲ.

ಗ್ರಾಮಾಂತರ ಭಾಗದ ಜನರು ಅಷ್ಟಾಗಿ ಶೈಕ್ಷಣಿಕವಾಗಿ ಮುಂದುವರೆದವರಲ್ಲ. ಅವರಿಗೆ ಪರಿಸರದ ಸ್ವಚ್ಛತೆ, ಆರೋಗ್ಯಕರ ಪರಿಸರದ ನಿರ್ಮಾಣ ಇದು ಯಾವುದೂ ಕೂಡ ಅವರ ಗಮನದಲ್ಲಿ ಇರುವುದಿಲ್ಲ. ಅವರೆಲ್ಲ ವ್ಯವಸಾಯ ಮಾಡುವಂಥವರು. ಅವರಿಗೆ ಯಾವತ್ತೂ ಕೂಡ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕೆನ್ನುವ ಮನೋಭಾವ ಇರುವುದಿಲ್ಲ. ಅರಿವನ್ನು ಸಮಾಜದ ಹಿರಿಯರು, ಪ್ರಮುಖರು, ಮೂಡಿಸಬೇಕಾಗುತ್ತದೆ. ಜೊತೆಗೆ ರಾಜ್ಯ ಸರ್ಕಾರ ಸರಿಯಾಗಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಸ್ಥಳೀಯ ಸರ್ಕಾರಗಳು ಅಂದರೆ ಗ್ರಾಮ ಪಂಚಾಯಿತಿ, ತಾಲೂಕ ಪಂಚಾಯತಿ, ಜಿಲ್ಲಾ ಪಂಚಾಯತಿಗಳು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಬೇಕು. ಅದಕ್ಕಾಗಿ ಬಿತ್ತಿ ಪತ್ರಗಳನ್ನು ಹಂಚುವುದು, ಪರಿಸರ ಸಂರಕ್ಷಣಾ ಪಡೆ ರಚಿಸುವುದು. ಏನೆಲ್ಲ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿದೆಯೋ ಅದನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು. ತಿಳಿವಳಿಕೆ ಕಾರ್ಯಕ್ರಮ ಮನೆ ಮನೆಗೆ ತಲುಪಬೇಕು. ಇಲ್ಲವಾದಲ್ಲಿ ರೋಗ ರುಜಿನಗಳಿಗೆ ಕಾರಣವಾಗುತ್ತದೆ. ಇಡೀ ಸುತ್ತ ಮುತ್ತಲು ದುರ್ವಾಸನೆಯಿಂದ ಕೂಡಿರುತ್ತದೆ.

ಸ್ವಚ್ಛ ಭಾರತ ಅಭಿಯಾನ ಕೇವಲ ನಗರಗಳಿಗೆ ಮಾತ್ರ ಸೀಮಿತವಾಗಬಾರದು, ಹಳ್ಳಿ ಹಳ್ಳಿಗಳಲ್ಲಿಯೂ ಕೂಡ ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಅವರಿಗೆ ತಿಳುವಳಿಕೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅಂದಾಗ ಮಾತ್ರ ಇವುಗಳೆಲ್ಲವೂ ಕೂಡ ಸಾಧ್ಯವಾಗುತ್ತದೆ. ಗ್ರಾಮ ನೈರ್ಮಲ್ಯ ಯೋಜನೆಗಳು ಕೆಲವೇ ದಿನಗಳಿಗೆ ಮಾತ್ರ ಸೀಮಿತವಾಗಬಾರದು, ನಿರಂತರವಾಗಿ ಅವು ನಡೆಯುತ್ತಾ ಇರಬೇಕು. ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ಅದನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಹೊಣೆ ಎಂಬುದನ್ನು ಎಲ್ಲರಿಗೂ ಕೂಡ ಮನವರಿಕೆ ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಕೆಲ ಗ್ರಾಮಸ್ಥರು ಪಾಯಿಖಾನೆಗಳಲ್ಲಿ ಹೋಗಲು ಇಚ್ಛೆ ಪಡುವುದಿಲ್ಲ. ಅವರು ಬಯಲಿನಲ್ಲಿಯೇ ಮುಕ್ತವಾಗಿ ಓಡಾಡಿಕೊಂಡು ಅವರು ತಮ್ಮೆಲ್ಲ ನಿಸರ್ಗದ ಕರೆಗಳನ್ನು ಪೂರೈಸಿಕೊಳ್ಳುವುದನ್ನು ಇಚ್ಚೆ ಪಡುತ್ತಾರೆ. ಹಾಗಾಗಿ ಅವರಿಗೆ ಸ್ವಚ್ಛತೆಯ ಅರಿವನ್ನು ಮೂಡಿಸಲೇಬೇಕು. ಹೆಣ್ಣು ಮಕ್ಕಳಿಗೆ ಅದರಲ್ಲೂ ಯುವತಿಯರಿಗಂತು ಬಹಳ ಸಮಸ್ಯಾತ್ಮಕವಾದ ಸಂಗತಿ ಇದಾಗಿದೆ. ಮನೆಯ ಹಿಂದೆ,ಮುಂದೆ, ಅಕ್ಕಪಕ್ಕದಲ್ಲಿ ಒಂದು ಅಂತರದಲ್ಲಿ ಪಾಯಿಖಾನೆಯನ್ನು ಕಟ್ಟಿಸಿಕೊಳ್ಳುವುದು ಕಡ್ಡಾಯವಾಗಬೇಕು. ಮತ್ತು ಹೊರಗಡೆ ಹೋಗುವುದು ನಿಷೇಧವಾಗಬೇಕು.

ಕಾಲಕಾಲಕ್ಕೆ ಗ್ರಾಮಗಳಲ್ಲಿ ಸಭೆ ಸೇರಿಸಿ ಇದರ ಬಗ್ಗೆ ಅರಿವನ್ನು ಮೂಡಿಸುತ್ತಿರಬೇಕು. ಮತ್ತು ಪರಿಸರದ ಸಂರಕ್ಷಣೆ ಅದರಿಂದಾಗುವ ಪ್ರಯೋಜನಗಳು, ಅದಕ್ಕಾಗಿ ಕೈಗೊಳ್ಳುವ ಕಾರ್ಯಕ್ರಮಗಳ ಬಗ್ಗೆ ಅವರಿಗೆ ಸತತವಾಗಿ ತಿಳಿಸುತ್ತಲೇ ಇರಬೇಕು. ಇದು ಸಾಮಾಜಿಕ ಮಾಧ್ಯಮಗಳ ಮೂಲಕ, ದೂರದರ್ಶನ, ಪತ್ರಿಕೆಗಳು, ಕರಪತ್ರಗಳನ್ನು ಹಂಚುವುದು ಹೀಗೆ ಇತ್ಯಾದಿಗಳ ಮೂಲಕ ಅವರಿಗೆ ನಿರಂತರವಾಗಿ ಸಂಪರ್ಕದಲ್ಲಿ ಇದ್ದು, ಇದನ್ನು ಯಶಸ್ವಿಯಾಗಿ ನಿರ್ವಹಿಸಬೇಕು. ಇಲ್ಲವಾದಲ್ಲಿ ಇದೇ ಪದ್ಧತಿಯು ಮುಂದುವರಿದುಕೊಂಡು ಹೋಗುತ್ತದೆ. ಈಗಾಗಲೇ 21 ನೇ ಶತಮಾನದಲ್ಲಿರುವ ಈ ಭಾರತ ಇನ್ನೂ ಅನಾಗರಿಕತೆಯ ಚಿಹ್ನೆಗಳನ್ನು ಹೊಂದಿರುವುದು ದುಃಖದ ವಿಷಯ. ಜನಪ್ರತಿನಿಧಿಗಳಿಗೆ ಇದರ ಬಗ್ಗೆ ಕೊಂಚವೂ ಅರಿವು ಇಲ್ಲ. ಅವರು ಅಧಿಕಾರಿಗಳ ಸಭೆ ಕರೆದು, ಕಾಲ ಕಾಲಕ್ಕೆ ಜಾರಿಗೊಳಿಸಲಾದ ಯೋಜನೆಗಳ ಬಗ್ಗೆ ವರದಿ ತರಿಸಿಕೊಳ್ಳುತ್ತಲೇ ಇರಬೇಕು. ಜಿಲ್ಲಾ ಆಡಳಿತವೂ ಕೂಡ ಇದರಲ್ಲಿ ಪರಿಣಾಮಕಾರಿಯಾಗಿ ಪಾಲ್ಗೊಳ್ಳಬೇಕು. ಗ್ರಾಮ ಪಂಚಾಯಿತಿ, ತಾಲೂಕ ಪಂಚಾಯಿತಿಗಳ ಮೂಲಕ ಇದನ್ನು ವ್ಯವಸ್ಥಿತ ರೀತಿಯಲ್ಲಿ ಇಡಲು ಪ್ರಯತ್ನಿಸಬೇಕು.

ಎಷ್ಟೇ ಯೋಜನೆಗಳು ಬರಲಿ, ಎಷ್ಟೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ, ನಿಜಕ್ಕೂ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಇದರ ಅರಿವು ಮೂಡಬೇಕು. ಆ ನಿಟ್ಟಿನಲ್ಲಿ ನಾವು ಪ್ರಯತ್ನವನ್ನು ಮಾಡಬೇಕಾಗಿದೆ. ಎಷ್ಟು ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವಿದೆ? ಇದೆಲ್ಲ ನಮ್ಮ ನಮ್ಮೊಳಗೆ ಅರ್ಥ ಮಾಡಿಕೊಳ್ಳುವಂತದ್ದು. ಇದನ್ನು ಪ್ರತಿ ಗ್ರಾಮದ ಜನರು ಅರ್ಥಮಾಡಿಕೊಳ್ಳಬೇಕು.

ಬೆಳಗಾವಿ: ಬಸ್ – ಬೈಕ್ ಮಧ್ಯೆ ಭೀಕರ ಅಪಘಾತ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button